Site icon Vistara News

Kannada New Movie: ʻಸಂಭವಾಮಿ ಯುಗೇ ಯುಗೇʼ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಿದ ನಟಿ ಶ್ರುತಿ ಹರಿಹರನ್!

Sambavami Yuge Yuge song release By sruthi hariharan

ಬೆಂಗಳೂರು: ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ (Kannada New Movie) ನಾಯಕನಾಗಿ ನಟಿಸಿರುವ “ಸಂಭಾವಮಿ ಯುಗೇಯುಗೇ” ಚಿತ್ರದ ಮೊದಲ ಹಾಡು “ಡೋಲು ತಮಟೆ ವಾದ್ಯ” ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಟಿ ಶ್ರುತಿ ಹರಿಹರನ್ ಜಾನಪದ ಶೈಲಿಯ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ʻʻಇದು ನನ್ನ ಮೊದಲ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟು ಇಂಥದ್ದೊಂದು ಅವಕಾಶ ಕೊಟ್ಟ ನಿರ್ಮಾಪಕಿ ಪ್ರತಿಭಾ ಅವರಿಗೆ ಧನ್ಯವಾದಗಳು. ಇದೊಂದು ಕಮರ್ಷಿಯಲ್‍ ಥ್ರಿಲ್ಲರ್ ನ ಚಿತ್ರ. ಮಂಡ್ಯ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಾನು ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೆ. ಇದೊಂದು ಹಳ್ಳಿ ಹಿನ್ನೆಲೆಯ ಚಿತ್ರ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲಸಬೇಕು ಎಂಬುದೆ ಚಿತ್ರದ ಕಥಾ ಸಾರಾಂಶ. ಜೂನ್‍ 21ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಇದು ಕಮರ್ಷಿಯಲ್‍ ಚಿತ್ರವಾದರೂ ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳಿವೆʼʼ ಎಂದರು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ನಾಯಕ ಜಯ್ ಶೆಟ್ಟಿ ಮಾತನಾಡಿ ʻʻನನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಧನ್ಯವಾದಗಳುʼʼ ಎಂದರು.

ʻʻನಾನು ಬಿಜಾಪುರ ಮೂಲದವಳು. ಆದರೆ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಒಂಬತ್ತು ವರ್ಷಗಳ ಕಾಲ ಮಾಡಲಿಂಗ್‍ ಮಾಡಿದ್ದೇನೆ. ಹೀಗಿರುವಾಗಲೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನನ್ನ ಭಾಷೆ ಮತ್ತು ನಟನೆಯನ್ನು ತಿದ್ದಿತೀಡಿದ ನಿರ್ದೇಶಕ ಚೇತನ್‍ ಶೆಟ್ಟಿ ಅವರಿಗೆ ಧನ್ಯವಾದಗಳುʼʼ ಎಂದರು ನಾಯಕಿ ನಿಶಾ ರಜಪೂತ್ .

ಪ್ರಮುಖಪಾತ್ರದಲ್ಲಿ ನಟಿಸಿರುವ ಅಶೋಕ್ ಕುಮಾರ್ ಹಾಗೂ ಮಧುರಗೌಡ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಾಜೇಂದ್ರ ಕಾರಂತ್‍, ಅಶ್ವಿನ್‍ ಹಾಸನ್‍, ವಿಕ್ಟರಿ ವಾಸು, ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ, ಕಾರ್ಯಕಾರಿ ನಿರ್ಮಾಪಕ ದಿನೇಶ್ ರಾಜನ್ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಹಾಜರಿದ್ದರು. ನಿರ್ಮಾಪಕಿ ಪ್ರತಿಭಾ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

Exit mobile version