ಹೈದರಾಬಾದ್: ಲೋಕಸಭೆಗೆ ಇಂದು 4ನೇ ಹಂತದ ಮತದಾನ ನಡೆಯಲಿದೆ. ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಒಟ್ಟು 9 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ 96 ಸ್ಥಾನಗಳಿಗೆ ಮತದಾನ ನಡೆಯಲಿದೆ. ನಟ ಅಲ್ಲು ಅರ್ಜುನ್ (Allu Arjun) ಮತ್ತು ನಟ ಜ್ಯೂನಿಯರ್ ಎನ್‌ಟಿಆರ್ ( NTR Jr), ಇಂದು (ಮೇ.13) ಬೆಳಗ್ಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ತೆಲಂಗಾಣದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಜುಬಿಲಿ ಹಿಲ್ಸ್‌ನಲ್ಲಿ ಮೊದಲ ಮತದಾರರ ಗುಂಪಿನಲ್ಲಿ ಇಬ್ಬರು ಸೇರಿದ್ದಾರೆ. ಜತೆಗೆ ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖಾ ಮತ್ತು ಪುತ್ರಿ ಸುಶ್ಮಿತಾ ಅವರೊಂದಿಗೆ ಮತ ಚಲಾಯಿಸಲು ಆಗಮಿಸಿದ್ದರು.
‘ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಬಿಳಿ ಟೀ ಶರ್ಟ್ ಮತ್ತು ಕಪ್ಪು ಜೀನ್ಸ್‌ನಲ್ಲಿ ಕಾಣಿಸಿಕೊಂಡರೆ, ಆರ್‌ಆರ್‌ಆರ್ ಸ್ಟಾರ್ ಜ್ಯೂನಿಯರ್ ಎನ್‌ಟಿಆರ್ ನೀಲಿ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಕಂಡು ಬಂದರು.
ಅಲ್ಲು ಅರ್ಜುನ್ ಮತದಾನ ಮಾಡಲು ಒಬ್ಬರೇ ಆಗಮಿಸಿದರೆ, ಜ್ಯೂನಿಯರ್ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಅವರ ತಾಯಿ ಶಾಲಿನಿ ನಂದಮೂರಿ ಜತೆಗಿದ್ದರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ಮತಗಟ್ಟೆಗಳಲ್ಲಿ ಇಬ್ಬರು ನಟರು ಸರದಿಯಲ್ಲಿ ನಿಂತಿರುವ ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು ವೋಟ್ ಮಾಡಿದ್ದಾರೆ. ದೇಶಕ್ಕೆ ನಾವು ಜವಾಬ್ದಾರಿಯುಳ್ಳವರು, ನಾವು ಕೇರ್ ಮಾಡುತ್ತೇವೆ ಎನ್ನುವುದನ್ನು ತೋರಿಸಿ. ಬಂದು ವೋಟ್ ಮಾಡಿ ಎಂದು ಅವರು ವೋಟ್ ಮಾಡಿದ ಬಳಿಕ ಮಾಧ್ಯಮಗಳ ಮುಂದೆ ಮತದಾನಕ್ಕೆ ಕರೆ ಕೊಟ್ಟರು. ತ್ರಿಬಲ್ ಆರ್ ಸ್ಟಾರ್ ಸಂಗೀತ ನಿರ್ದೇಶಕ ಕೀರವಾಣಿ ಅವರೂ ಕೂಡಾ ವೋಟ್ ಮಾಡಿದ್ದಾರೆ. ಅವರು ವೋಟ್ ಮಾಡಿ ಬಂದು ಮನೆಯತ್ತ ಹೋಗುವುದು ಕಂಡುಬಂದಿದೆ.
ಇದನ್ನೂ ಓದಿ: Lok Sabha Elections 2024: ಗೂಗಲ್ ಡೂಡಲ್‌ನಲ್ಲೂ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ
ಮತ ಚಲಾಯಿಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅಲ್ಲು ಅರ್ಜುನ್, ʻನಾನು ಯಾವುದೇ ಪಕ್ಷಕ್ಕೆ ಸೇರಿಲ್ಲʼ ಎಂದು ಸ್ಪಷ್ಟಪಡಿಸಿದರು. “ದಯವಿಟ್ಟು ನಿಮ್ಮ ಮತಗಳನ್ನು ಚಲಾಯಿಸಿ. ಇದು ಅತ್ಯಂತ ಜವಾಬ್ದಾರಿಯುತ ದಿನ” ಎಂದು ಅವರು ಹೇಳಿದರು. ʻʻನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ, ನನಗೆ ಆತ್ಮೀಯರಾಗಿರುವ ಎಲ್ಲರಿಗೂ ಬೆಂಬಲ ನೀಡುತ್ತೇನೆ. ನನ್ನ ಚಿಕ್ಕಪ್ಪ, ನನ್ನ ಸ್ನೇಹಿತ, ನನ್ನ ಮಾವ ಎಲ್ಲರೂ ರಾಜಕೀಯದಲ್ಲಿದ್ದಾರೆʼʼಎಂದರು.
ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?
ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ
ಆಂಧ್ರಪ್ರದೇಶದಲ್ಲಿ ಸೋಮವಾರ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಸತತ ಎರಡನೇ ಬಾರಿಗೆ ಸಿಎಂ ಗಾದಿಗೇರಲು ವೈ.ಎಸ್. ಜಗನ್‌ಮೋಹನ್ ರೆಡ್ಡಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮತ್ತೆ ಅಧಿಕಾರಕ್ಕೇರಲು ಟಿಡಿಪಿಯೂ ಸಜ್ಜಾಗಿದ್ದು, ಚುನಾವಣೆ ರಣಕಣವು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ.ಹಿಂದಿನ ಮೂರು ಹಂತದ ಚುನಾವಣೆಗಳಲ್ಲಿ 2019ರ ಸಾರ್ವತ್ರಿಕ ಚುನಾವಣೆಗಿಂತ ಕಡಿಮೆ ಮತದಾನವಾಗಿದೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಮೊಹುವಾ ಮೊಯಿತ್ರಾ: ಕೃಷ್ಣನಗರ ಕ್ಷೇತ್ರ
ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಸ್ಪರ್ಧೆ. ಟಿಎಂಸಿ ಅಭ್ಯರ್ಥಿ. ಸಂಸತ್ ನಲ್ಲಿ ಪ್ರಶ್ನೆಗಾಗಿ ಹಣ ಆರೋಪ ಹೊತ್ತಿರುವ ಸಂಸದೆ.
ಅಮೃತ ರಾಯ್: ಕೃಷ್ಣನಗರ ಕ್ಷೇತ್ರ
ಪಶ್ಚಿಮಬಂಗಾಳದ ಕೃಷ್ಣನಗರದ ಬಿಜೆಪಿ ಅಭ್ಯರ್ಥಿ. ರಾಜ ವಂಶಸ್ಥೆ, ಮೊಹುವಾ ಮೊಯಿತ್ರಾ ವಿರುದ್ಧ ಸ್ಪರ್ಧೆ.
ಅಧಿರ್ ರಂಜನ್ ಚೌಧರಿ : ಬೆಹರಾಮಪುರ್ ಕ್ಷೇತ್ರ
ಪಶ್ಚಿಮ ಬಂಗಾಳದ ಬೆಹರಾಂಪುರ ಕ್ಷೇತ್ರದಿಂದ ಸ್ಪರ್ಧೆ. ಕಾಂಗ್ರೆಸ್ ಅಭ್ಯರ್ಥಿ
ಯೂಸುಫ್ ಪಠಾಣ್ : ಬೆಹರಾಮಪುರ್ ಕ್ಷೇತ್ರ
ಮಾಜಿ ಕ್ರಿಕೆಟಿಗ ಯೂಸುಫ್ ಬೆಹರಾಂಪುರ ಕ್ಷೇತ್ರದಿಂದ ಟಿ ಎಂ ಸಿ ಅಭ್ಯರ್ಥಿ. ಅಧಿರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧೆ
ಅಖಿಲೇಶ್ ಯಾದವ್: ಕನೌಜ್ ಕ್ಷೇತ್ರ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಕನೌಜ್ ಕ್ಷೇತ್ರದಿಂದ ಸ್ಪರ್ಧೆ. ಈ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯಿಂದ ಸುಬ್ರತಾ ಪಾಠಕ್ ಸಂಸದರಾಗಿದ್ದಾರೆ. 2019 ರ ಚುನಾವಣೆಯಲ್ಲಿ ಯಾದವ್, ಪತ್ನಿ ಡಿಂಪಲ್ ಅವರನ್ನು ಸೋಲಿಸುವ ಮೂಲಕ ಪಾಠಕ್ ಗೆಲುವು ಸಾಧಿಸಿದ್ದರು
ಗಿರಿರಾಜ್ ಸಿಂಗ್: ಬೇಗುಸರಾಯ್ ಕ್ಷೇತ್ರ
ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧೆ. ಬಿಜೆಪಿಯ ಉಸ್ತುವಾರಿ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್. 2019ರ ಚುನಾವಣೆಯಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ಸಿಂಗ್ ವಿಜಯಶಾಲಿಯಾಗಿದ್ದರು
ವೈ.ಎಸ್. ಶರ್ಮಿಳಾ: ಕಡಪ ಕ್ಷೇತ್ರ
ಆಂಧ್ರದ ಮಾಜಿ ಸಿಎಂ ವೈಎಸ್ಆರ್ ಅವರ ಪುತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ, ತಮ್ಮ ಸೋದರ ಸಂಬಂಧಿ, ಎರಡು ಬಾರಿ ಹಾಲಿ ಸಂಸದ ವೈಎಸ್ ಅವಿನಾಶ್ ರೆಡ್ಡಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶರ್ಮಿಳಾ ಸಹೋದರ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ
ಅಸಾದುದ್ದೀನ್ ಓವೈಸಿ: ಹೈದರಾಬಾದ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಕ್ಷೇತ್ರದಿಂದ ಸ್ಪರ್ಧೆ
ಮಾಧವಿ ಲತಾ: ಹೈದರಾಬಾದ್
ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ. ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಮಾಧವಿ ಲತಾ
ಅರ್ಜುನ್ ಮುಂಡ : ಖುಂತಿ ಕ್ಷೇತ್ರ
ಮೂರು ಬಾರಿ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹಾಗೂ ಕೇಂದ್ರದಲ್ಲಿ ಪ್ರಸ್ತುತ ಸಚಿವರಾಗಿ ಕಾರ್ಯ ನಿರ್ವಹಿಸಿತ್ತಿರುವ ಅರ್ಜುನ್ ಮುಂಡ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಬಂಡಿ ಸಂಜಯ್ ಕುಮಾರ್: ಕರೀಂನಗರ ಕ್ಷೇತ್ರ
ಮಾಜಿ ಬಿಜೆಪಿ ರಾಜ್ಯಧ್ಯಕ್ಷ ಹಾಗೂ ಹಾಲಿ ಸಂಸದ ಬಂಡಿ ಸಂಜಯ್ ಕುಮಾರ್ ಕರೀಂನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಶತ್ರುಘ್ನ ಸಿನ್ಹಾ: ಅಸನ್ಸೋಲ್ ಕ್ಷೇತ್ರ
ಪಶ್ಚಿಮ ಬಂಗಾಳ ಅಸನ್ನೋಲ್ ಕ್ಷೇತ್ರದಿಂದ ಬಾಲಿವುಡ್ ನಟ ಹಾಗೂ ರಾಜಕಾರಣಿ, ಬಿಹಾರ್ ಬಾಬು ಎಂದೇ ಪ್ರಸಿದ್ದಿಯಾಗಿರುವ ಶತ್ರುಘ್ನ ಸಿನ್ಹಾ ಸ್ಪರ್ಧೆ. ಟಿ ಎಂ ಸಿ ಪಕ್ಷದ ಅಭ್ಯರ್ಥಿ
ಕಿಶನ್ ರೆಡ್ಡಿ : ಸಿಕಂದರಾಬಾದ್ ಕ್ಷೇತ್ರ
ಪ್ರಸ್ತುತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಸ್ಪರ್ಧೆಸುತ್ತಿರುವ ಕ್ಷೇತ್ರ