ಬೆಂಗಳೂರು: ನಾಗ ಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೋಡಿ ಹೈದರಾಬಾದ್‌ನಲ್ಲಿ ನಾಗಾರ್ಜುನ ಅವರ ಮನೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದೆ. ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಸೂಪರ್‌ಸ್ಟಾರ್ ನಾಗಾರ್ಜುನ ಹಂಚಿಕೊಂಡು ಜೋಡಿಗೆ ಆಶೀರ್ವದಿಸಿದರು. ಆದರೆ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಎಂಬ ಕುತೂಹಲ ಫ್ಯಾನ್ಸ್‌ಗೆ ಇದೆ. ತಿಳಿಯಲು ಮುಂದೆ ಓದಿ.
ಮೇ 2022ರಲ್ಲಿ, ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಶೋಭಿತಾ ಧೂಳಿಪಾಲ ತಮ್ಮ ʻಮೇಜರ್ʼ ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದರು. ಆ ಸಮಯದಲ್ಲಿ ನಟಿ ಚಿತ್ರದ ಪ್ರಚಾರ ಮಾತ್ರವಲ್ಲದೆ ಮೇ 31 ರಂದು ಜನ್ಮದಿನ ಆಚರಣೆ ಮಾಡಿಕೊಂಡಿದ್ದರು. ನಾಗ ಚೈತನ್ಯ ಅವರು ಆಚರಣೆಯ ಭಾಗವಾಗಿದ್ದರು. ಬಳಿಕ ಅಲ್ಲಿಂದ ಇಬ್ಬರೂ ಸ್ನೇಹಿತರಾದರು. ಅವರ ಸ್ನೇಹ ಬಲವಾಗಿ ಡೇಟಿಂಗ್ ಪ್ರಾರಂಭಿಸಿದರು. ಎರಡು ವರ್ಷಗಳ ಕಾಲ ಒಟ್ಟಿಗೆ ಸಮಯ ಕಳೆದಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ವಕೇಶನ್‌ಗೆ ಹೋಗಿರುವ ಹಲವಾರು ಫೋಟೊಗಳು ವೈರಲ್ ಆಗಿವೆ. ಆದರೆ ಪ್ರತಿ ಬಾರಿ ಡೇಟಿಂಗ್ ವಂದತಿ ಹಬ್ಬಿದ್ದಾಗಲೂ ಜೋಡಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರಲಿಲ್ಲ. ಇದೀಗ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
37 ವರ್ಷದ ನಟ ನಾಗ ಚೈತನ್ಯ ಅವರು 32 ವರ್ಷದ ಶೋಭಿತಾಗೆ ತಮ್ಮ ಹೈದರಾಬಾದ್ನ ಮನೆಯಲ್ಲಿ ಉಂಗುರ ತೊಡಿಸಿದ್ದಾರೆ. ಈ ಜೋಡಿ ನಡುವೆ 5 ವರ್ಷಗಳ ಏಜ್ ಗ್ಯಾಪ್ ಇದೆ. ನಾಗ ಚೈತನ್ಯಗಿಂತ ಶೋಭಿತಾ 5 ವರ್ಷ ಚಿಕ್ಕವರಾಗಿದ್ದಾರೆ.
ಅಂತಿಮವಾಗಿ, ನಾಗಾರ್ಜುನ ಎಕ್ಸ್‌ನಲ್ಲಿ ಸುದ್ದಿಯನ್ನು ದೃಢಪಡಿಸಿದ್ದಾರೆ. ಫೋಟೊಗಳನ್ನು ಹಂಚಿಕೊಂಡು, “ನಮ್ಮ ಮಗ ನಾಗ ಚೈತನ್ಯ ಅವರ ನಿಶ್ಚಿತಾರ್ಥ ಬೆಳಗ್ಗೆ 9:42ಕ್ಕೆ ಶೋಭಿತಾ ಧೂಳಿಪಾಲ ಜತೆ ನೆರವೇರಿದೆ. ಶೋಭಿತಾ ಧೂಳಿಪಾಲರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಜೋಡಿಗೆ ಅಭಿನಂದನೆಗಳು! ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ! 8.8.8 ಅನಂತ ಪ್ರೀತಿಯ ಆರಂಭʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Naga Chaitanya: ನಾಗ ಚೈತನ್ಯ ಜತೆ ಎಂಗೇಜ್ ಆದ ಶೋಭಿತಾ ಧೂಳಿಪಾಲ; ಸಂಭ್ರಮದ ಫೋಟೋಸ್ ವೈರಲ್!
ಇತ್ತೀಚೆಗೆ, ಶೋಭಿತಾ ಧೂಳಿಪಾಲ ಅವರು ಜಂಗಲ್ ಸಫಾರಿಯ ಫೋಟೊಗಳನ್ನು ಹಂಚಿಕೊಂಡಿದ್ದರು. ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್ಗ್ರೌಂಡ್ ಇತ್ತು. ಈ ಕಾರಣದಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಹಿಂದೆ ಜೋಡಿ ಲಂಡನ್‌ನಲ್ಲಿ ಕಾಣಿಸಿಕೊಂಡಿತ್ತು.