ಬೆಂಗಳೂರು: ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ (Telugu Desam Party), ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ (Jana Sena Party)ಯ ಎನ್‌ಡಿಎ (NDA) ಒಕ್ಕೂಟ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಇಂದು (ಜೂನ್ 12) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ (Pawan Kalyan) ಅಧಿಕಾರ ವಹಿಸಿಕೊಂಡರು. 2019ರ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಎರಡೂ ಕ್ಷೇತ್ರಗಳಲ್ಲಿ ಸೋತು ನಗೆಪಾಟಲಿಗೀಡಾಗಿದ್ದರು. ಆ ಸಮಯದಲ್ಲಿ ಪವನ್ ಅವರ ಫ್ಯಾನ್ ತೋಟ ನರೇಂದ್ರ ಅವರು ಪವನ್ ಗೆದ್ದೇ ಗೆಲ್ಲುತ್ತಾರೆಂದು ಸವಾಲು ಹಾಕಿ, ಪವನ್ ಗೆಲ್ಲುವವರೆಗೂ ತಲೆಗೂದಲು ಕತ್ತರಿವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಇದೀಗ ಕೂದಲಿಗೆ ಕತ್ತರಿ ಹಾಕಿದ್ದಾರೆ.
ತೋಟ ನರೇಂದ್ರ ಉರು ತೆನಾಲಿ ಸಮೀಪದ ಕೊಳಕಲೂರು. 2019ನೇ ಚುನಾವಣೆಯಲ್ಲಿ ತಮ್ಮ ನೆಚ್ಚಿನ ನಟ ಪವನ್ ಕಲ್ಯಾಣ್ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು. ಇದರಿಂದ ನರೇಂದ್ರ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಎರಡು ಕಡೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ನರೇಂದ್ರ ಅವರಿಗೆ ಪವನ್ ಕಲ್ಯಾಣ್ ಸೋಲು ಭಾರಿ ನೋವುಂಟು ಮಾಡಿತ್ತು. ಹಾಗಾಗಿ ಆ ಸಮಯದಲ್ಲಿ ನರೇಂದ್ರ ಅವರು ಪ್ರಮಾಣ ಮಾಡಿದರು. ಪವನ್ ಕಲ್ಯಾಣ್ ಗೆದ್ದು ವಿಧಾನಸಭೆಗೆ ಕಾಲಿಡುವವರೆಗೂ ಕೂದಲಿಗೆ ಕತ್ತರಿ ಹಾಕಲ್ಲ ಎಂದು. ಇದೀಗ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ (Pawan Kalyan) ಅಧಿಕಾರ ವಹಿಸಿಕೊಂಡಿದ್ದಾರೆ. ಐದು ವರ್ಷಗಳ ಕಾಲ ಕೂದಲು ಬೆಳೆಸುತ್ತಲೇ ಪಕ್ಷಕ್ಕಾಗಿ ದುಡಿದ ನರೇಂದ್ರ ಕೊನೆಗೂ ಕೂದಲಿಗೆ ಕತ್ತರಿ ಹಾಕಿದ್ದಾರೆ.
ಇದನ್ನೂ ಓದಿ: Pawan Kalyan: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಆಯ್ಕೆ; ಇಂದು ಪ್ರಮಾಣ ವಚನ ಸ್ವೀಕಾರ
ಪವನ್ ಕಲ್ಯಾಣ್ ಸೇರಿದಂತೆ ಜನಸೇನಾದ 21 ಅಭ್ಯರ್ಥಿಗಳು ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದರು. ಎದುರಾಳಿ ವೈಸಿಪಿ ಅಭ್ಯರ್ಥಿ ವಂಗಾ ಗೀತ ವಿರುದ್ಧ ಭಾರಿ ಅಂತರದ ಜಯವನ್ನು ಪವನ್ ಕಲ್ಯಾಣ್ ಪಡೆದಿದ್ದಾರೆ.
ವಿಜಯವಾಡದಲ್ಲಿರುವ ಮೇಧಾ ಐಟಿ ಪಾರ್ಕ್ ಬಳಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ಬಳಿಕ ಮೋದಿ ಅವರು ನಾಯ್ಡು ಅವರಿಗೆ ಶುಭ ಕೋರಿದರು. ನಂತರ ಪವನ್ ಕಲ್ಯಾಣ್ ಅವರು ತಮ್ಮ ಸಹೋದರ ಚಿರಂಜೀವಿ ಕೂಡ ಇಲ್ಲೇ ಇದ್ದಾರೆ ಎಂದು ಮೋದಿ ಅವರಿಗೆ ಹೇಳಿದರು. ಆಗ ಮೋದಿ ಅವರು ಚಿರಂಜೀವಿ ಬಳಿ ಹೋಗಿ, ಅವರ ಹಾಗೂ ಪವನ್ ಕಲ್ಯಾಣ್ ಕೈ ಹಿಡಿದು ವೇದಿಕೆಗೆ ಕರೆತಂದರು. ಬಳಿಕ ಮೂವರೂ ಕೈ ಎತ್ತಿದರು. ಆ ಮೂಲಕ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದರು.