ಮುಂಬೈ: ಈ ಬಾರಿಯ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನದ ಹೊಸ್ತಿಲಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿವೃದ್ದಿಗೆ ಮತ ನೀಡಿ ಎಂದು ಹೇಳಿದ್ದರು. ವಾಣಿಜ್ಯ ನಗರಿ ಮುಂಬೈಯಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ (Mumbai Trans Harbour Link-MTHL) ಅನ್ನು ಪ್ರಧಾನಿ ನರೇಂದ್ರ ಮೋದಿ ಜನವರಿಯಲ್ಲಿ ಲೋಕಾರ್ಪಣೆ ಮಾಡಿದ್ದರು. ಈ ಅಟಲ್ ಸೇತು ದೇಶದ ಅತೀ ದೊಡ್ಡ ಮತ್ತು ಜಗತ್ತಿನ 12ನೇ ಅತೀ ದೊಡ್ಡ ಸಮುದ್ರ ಸೇತುವೆ ಎನಿಸಿಕೊಂಡಿದೆ. ಮುಂಬೈ ಅಟಲ್ ಸೇತುವೆ ಮಾರ್ಗಮಧ್ಯೆ ಪ್ರಯಾಣಿಸುತ್ತ ರಶ್ಮಿಕಾ ಮೋದಿ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ರಶ್ಮಿಕಾ ಶೇರ್ ಮಾಡಿಕೊಂಡಿರುವ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಪ್ರತಿಕ್ರಿಯೆ
ರಶ್ಮಿಕಾ ಮಂದಣ್ಣ ಸೇತುವೆ ಕುರಿತು ʻʻದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ… ಪಶ್ಚಿಮ ಭಾರತದಿಂದ ಪೂರ್ವ ಭಾರತಕ್ಕೆ… ಜನರನ್ನು ಸಂಪರ್ಕಿಸುತ್ತಿದೆ, ಹೃದಯಗಳನ್ನು ಸಂಪರ್ಕಿಸುತ್ತಿದೆʼʼಎಂದು ವಿಡಿಯೊವನ್ನು ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಪ್ರಧಾನಿ ಮೋದಿ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಖಂಡಿತವಾಗಿಯೂ! ಜನರನ್ನು ಸಂಪರ್ಕಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಬೇರೇನೂ ಇಲ್ಲ.”ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rashmika Mandanna: ʻನಮೋʼ ಸಾಧನೆಗೆ ಕಿರಿಕ್ ಬ್ಯೂಟಿ ರಶ್ಮಿಕಾ ಕ್ಲೀನ್ ಬೋಲ್ಡ್!
ರಶ್ಮಿಕಾ ವಿಡಿಯೊದಲ್ಲಿ ಏನಿದೆ?
“ಕೇವಲ 7 ವರ್ಷಗಳಲ್ಲಿ ಈ ಭವ್ಯವಾದ ಅದ್ಭುತವನ್ನು ನಿರ್ಮಿಸಿದ್ದೇವೆ. ಅಟಲ್ ಸೇತು ಭವಿಷ್ಯದ ಬಾಗಿಲುಗಳನ್ನು ಎಷ್ಟು ಬಲವಾಗಿ ತಟ್ಟಿದ್ದಾರೆ ಎಂದರೆ ಭಾರತಕ್ಕೆ ಹೊಸ ಬಾಗಿಲುಗಳು ತೆರೆದಿವೆ. ಅಟಲ್ ಸೇತು ಸೇತುವೆ ಅಷ್ಟೇ ಅಲ್ಲ ಯುವ ಭಾರತಕ್ಕೆ ಗ್ಯಾರಂಟಿ. ನಮ್ಮ ರಾಷ್ಟ್ರವನ್ನು ಈಗ ತಡೆಯಲಾಗದು. ನೀವು ಇಂತಹ 100ರಷ್ಟು ಅಟಲ್ ಸೇತು ಸೇತುವೆಗಳನ್ನು ಪಡೆಯಲು ಬಯಸುವಿರಾ? ಎಚ್ಚೆತ್ತುಕೊಂಡು ಅಭಿವೃದ್ಧಿಗಾಗಿ ಮತ ಚಲಾಯಿಸಿ’ ಎಂದು ರಶ್ಮಿಕಾ ವಿಡಿಯೊದಲ್ಲಿ ಹೇಳಿದ್ದರು.
ರಶ್ಮಿಕಾ ಸಾಥ್
ಈ ಮುಂಚೆ ಮುಂಬೈ ಅಟಲ್ ಸೇತುವೆ ಮಾರ್ಗಮಧ್ಯೆ ಪ್ರಯಾಣಿಸುತ್ತ ರಶ್ಮಿಕಾ ಮಾತನಾಡಿ “ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು. ಹಾಗೆ, ನೀವು ಅದನ್ನು ನಂಬುವುದಿಲ್ಲ! ಈ ರೀತಿಯ ಏನಾದರೂ ಸಾಧ್ಯ ಎಂದು ಯಾರು ಭಾವಿಸಿದ್ದರು. ಮುಂಬೈಯಿಂದ ಮುಂಬೈಗೆ, ಗೋವಾದಿಂದ ಮುಂಬೈವರೆಗೆ ಹಾಗೂ ಬೆಂಗಳೂರುನಿಂದ ಮುಂಬೈವರೆಗೆ ಎಲ್ಲಾ ಪ್ರಯಾಣಗಳನ್ನು ತುಂಬಾ ಸುಲಭವಾಗಿ ಮಾಡಲಾಗಿದೆ. ಅದೂ ಕೂಡ ಅದ್ಭುತ ಮೂಲಸೌಕರ್ಯದೊಂದಿಗೆ ಇದು ನನಗೆ ಹೆಮ್ಮೆ ತರುತ್ತದೆ” ಎಂದು ರಶ್ಮಿಕಾ ಹೇಳಿದ್ದರು.
ರಶ್ಮಿಕಾ ಮಾತು ಮುಂದುವರಿಸಿ ʻʻಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಅಭಿವೃದ್ಧಿ ಗಮನಿಸಿದರೆ ಇನ್ನು ತಡೆಯಲು ಸಾಧ್ಯವಿಲ್ಲ. “ಈಗ ಭಾರತ ಯಾವುದಕ್ಕೂ ನೋ ಎನ್ನುವುದಿಲ್ಲ. ನಮ್ಮ ದೇಶದ ಮೂಲಸೌಕರ್ಯ, ಯೋಜನೆ, ರಸ್ತೆ ಯೋಜನೆ ಅದ್ಭುತವಾಗಿದೆ. ಈಗ ಇದು ನಮ್ಮ ಸಮಯ ಎಂದು ನಾನು ಭಾವಿಸುತ್ತೇನೆ! ಏಳು ವರ್ಷಗಳಲ್ಲಿ 20 ಕಿ.ಮೀ ಸೇತುವೆ ನಿರ್ಮಾಣವಾಗಿದೆ. ಚೆನ್ನಾಗಿಯೂ ಇದೆ. ಇದನ್ನು ನೋಡಿ ನನಗೆ ಮಾತೇ ಬರುತ್ತಿಲ್ಲ” ಎಂದು ಹೇಳಿದ್ದರು.
ಸಿನಿಮಾ ವಿಚಾರಕ್ಕೆ ಬಂದರೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ: Rashmika Mandanna: ಸಲ್ಮಾನ್ ಖಾನ್ ಜತೆ ನ್ಯಾಷನಲ್ ಕ್ರಶ್ ರಶ್ಮಿಕಾ ರೊಮ್ಯಾನ್ಸ್!
ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.