Site icon Vistara News

Senthil Kumar wife Roohi: ಎಸ್​ಎಸ್ ರಾಜಮೌಳಿಯ ಮೆಚ್ಚಿನ ಸಿನಿಮಾಟೋಗ್ರಾಫರ್ ಪತ್ನಿ ನಿಧನ

RRR cinematographer Senthil Kumar wife Roohi dies

ಬೆಂಗಳೂರು: ಎಸ್​ಎಸ್ ರಾಜಮೌಳಿ (Rajamouli) ಅವರ ಮೆಚ್ಚಿನ ಸಿನಿಮಾಟೋಗ್ರಾಫರ್ ಕೆಕೆ ಸೆಂಥಿಲ್ ಕುಮಾರ್ ( KK Senthil Kumar) ಅವರ ಪತ್ನಿ ಮತ್ತು ಯೋಗ ತರಬೇತುಗಾರ್ತಿ ರೂಹಿ (ರುಹೀನಾಜ್) (Roohi aka Ruheenaaz ) ಫೆ.15ರಂದು ನಿಧನರಾದರು. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದಾಗಿ ಬಳಲುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ರೂಹಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ರೂಹಿ ಅವರು ಫೆ. 15ರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಅಂತಿಮ ವಿಧಿವಿಧಾನಗಳು (ಶುಕ್ರವಾರ ಫೆ. 16) ಬೆಳಗ್ಗೆ 9 ಗಂಟೆಗೆ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿತ್ತು. ಕೆಲವು ಅಭಿಮಾನಿಗಳು ಬಾಹುಬಲಿ ಸೆಟ್‌ನಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜತೆಗೆ ರೂಹಿ ಮತ್ತು ಸೆಂಥಿಲ್ ಇರುವ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ರೂಹಿ ಅವರು ಅನುಷ್ಕಾ, ಪ್ರಭಾಸ್ ಮತ್ತು ಇಲಿಯಾನಾ ಡಿಕ್ರೂಜ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಯೋಗ ತರಬೇತುದಾರರಾಗಿದ್ದರು. ಹೈದರಾಬಾದ್ ವಿಭಾಗಕ್ಕೆ ಭರತ್ ಠಾಕೂರ್ ಅವರ ಯೋಗ ತರಗತಿಗಳ ಮುಖ್ಯಸ್ಥರಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು ಮತ್ತು ಆಗಾಗ ತಮ್ಮ ಕುಟುಂಬದೊಂದಿಗೆ ಇರುವ ಫೋಟೊ ಹಾಗೂ ವಿಡಿಯೊಘಲನ್ನು ಹಂಚಿಕೊಳ್ಳುತ್ತಿರುತ್ತಿದ್ದರು. ಸೆಂಥಿಲ್ ಮತ್ತು ರೂಹಿ ಜೂನ್ 2009 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳು. ಸೆಂಥಿಲ್ ಸಿಕಂದರಾಬಾದ್ ಮೂಲದವರಾಗಿದ್ದರೆ, ರೂಹಿ ಮುಂಬೈ ಮೂಲದವರು.

ಇದನ್ನೂ ಓದಿ: RRR Movie: ನನ್ನ ಸಿನಿಮಾಗಳು ರಾಮಾಯಣ ಮತ್ತು ಮಹಾಭಾರತದಿಂದ ಪ್ರಭಾವಿತವಾಗಿವೆ: ಎಸ್‌ಎಸ್ ರಾಜಮೌಳಿ

ಸೆಂಥಿಲ್ ಕುಮಾರ್, ಭಾರತದ ಅತ್ಯುತ್ತಮ ಸಿನಿಮಾಟೋಗ್ರಾಫರ್​ಗಳಲ್ಲಿ ಒಬ್ಬರು. ರಾಜಮೌಳಿ ನಿರ್ದೇಶಿಸಿರುವ ಬಹುತೇಕ ಸಿನಿಮಾಗಳಿಗೆ ಕ್ಯಾಮೆರಾ ಕೆಲಸ ಮಾಡಿರುವುದು ಸೆಂಥಿಲ್ ಕುಮಾರ್. ರಾಜಮೌಳಿ ಅವರ ಚಿತ್ರಗಳನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಛಾಯಾಗ್ರಾಹಕರಿಗೂ ಮನ್ನಣೆ ನೀಡುತ್ತಾರೆ. ಅವರು ʻRRRʼ, ʻಬಾಹುಬಲಿ: ದಿ ಬಿಗಿನಿಂಗ್ʼ, ʻಬಾಹುಬಲಿ: ದಿ ಕನ್‌ಕ್ಲೂಷನ್ʼ, ʻಮಗಧೀರʼ, ʻಅರುಂಧತಿʼ, ʻಯಮದೊಂಗʼ, ʻಛತ್ರಪತಿʼ, ʻಈಗಾʼ ಮತ್ತು ʻಸೈʼಯಂತಹ ಬ್ಲಾಕ್‌ಬಸ್ಟರ್‌ಗಳಲ್ಲಿ ಸಿನಿಮಾಟೋಗ್ರಫಿ ಮಾಡಿದ್ದರು.

Exit mobile version