Site icon Vistara News

Ram Charan: ಅಜ್ಜನ ಜತೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ರಾಮ್ ಚರಣ್ ಪತ್ನಿ!

Upasana Konidela visits Ayodhya Ram Mandir with grandfather

ಬೆಂಗಳೂರು: ರಾಮ್ ಚರಣ್ (Ram Charan) ಪತ್ನಿ ಉಪಾಸನಾ ಕೊನಿಡೇಲಾ ಅವರು ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಜನವರಿ 22ರಂದು ದೇವಸ್ಥಾನದ ಮಹಾಮಸ್ತಕಾಭಿಷೇಕದಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಆದರೆ, ಉಪಾಸನಾ ಅವರು ಗೈರಾಗಿದ್ದರು. ಇದೀಗ ಉಪಾಸನಾ ಅಜ್ಜನ ಜತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಚಿರಂಜೀವಿ, ಪುತ್ರ ರಾಮ್ ಚರಣ್ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡ ಉಪಾಸನಾ ಅವರು ತಮ್ಮ ಕುಟುಂಬದೊಂದಿಗೆ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೀಗ ದರ್ಶನ ಪಡೆದ ವಿಡಿಯೊ ವೈರಲ್‌ ಆಗಿದೆ. ವಿಡಿಯೊದಲ್ಲಿ, ಹಳದಿ ಶಲ್ವಾರ್ ಸೂಟ್‌ನಲ್ಲಿ ಉಪಾಸನಾ ಕಾಣಿಸಿಕೊಂಡಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿಗೆ ಸ್ವಲ್ಪ ಸಮಯ ಕಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ (Pran Pratishtha) ನೆರವೇರಿಸಿದ್ದು, ಉದ್ಘಾಟನೆಯಾಗಿ ಒಂದು ತಿಂಗಳಾದರೂ ನಿತ್ಯ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿಲ್ಲ. ರಾಮಮಂದಿರ ಉದ್ಘಾಟನೆಯಾದ 30 ದಿನಗಳಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ರಾಮನ ದರ್ಶನ ಪಡೆದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಇದೇ ಮೊದಲ ಬಾರಿ ರಾಮ ನವಮಿಗೆ ರಜೆ ಪ್ರಕಟಿಸಿದ ಮಮತಾ ಬ್ಯಾನರ್ಜಿ; ರಾಮಮಂದಿರ ಎಫೆಕ್ಟ್!

ಅಯೋಧ್ಯೆಯ ತುಂಬ ರಾಮನ ಭಕ್ತರೇ ತುಂಬಿಕೊಂಡಿದ್ದಾರೆ. ರಾಮಮಂದಿರ ಉದ್ಘಾಟನೆಯಾದ ಬಳಿಕ ನಿತ್ಯ ಒಂದು ಲಕ್ಷಕ್ಕೂ ಅಧಿಕ ಭಕ್ತರು ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ರಾಮಮಂದಿರ ದರ್ಶನಕ್ಕೆ ಮಾರುದ್ದದ ಸಾಲು ಇದ್ದರೂ ದಿನೇದಿನೆ ಭಕ್ತರ ಆಗಮನವು ಜಾಸ್ತಿಯಾಗುತ್ತಿದೆ. ಹಾಗಾಗಿ, ಭಕ್ತರು ಸುಗಮವಾಗಿ ರಾಮನ ದರ್ಶನ ಪಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ. ಮೊದಲಿದ್ದ ನೂಕುನುಗ್ಗಲು ಈಗ ಇಲ್ಲ ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಕಾರಣ ನಿರೀಕ್ಷೆಯಂತೆಯೇ ವ್ಯಾಪಾರ-ವಹಿವಾಟು ಹತ್ತಾರು ಪಟ್ಟು ಜಾಸ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಕಾರಣ ಕೋಟ್ಯಂತರ ರೂ. ದೇಣಿಗೆ ಕೂಡ ಸಂಗ್ರಹವಾಗಿದೆ. ರಾಮಮಂದಿರ ಉದ್ಘಾಟನೆಯಾದ ಮೊದಲ 11 ದಿನಗಳಲ್ಲಿ 25 ಲಕ್ಷ ಜನ ಭೇಟಿ ನೀಡಿದ್ದರು. ಆಗ 25 ಕೋಟಿ ರೂ. ದೇಣಿಗೆ ಸಂಗ್ರಹವಾಗಿತ್ತು. ರಾಮನ ಭಕ್ತರು ಸುಲಭವಾಗಿ ಕಾಣಿಕೆ ಸಲ್ಲಿಸಲಿ ಎಂದು ರಾಮಮಂದಿರ ಆವರಣದಲ್ಲಿ ಸುಮಾರು 10 ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಆನ್‌ಲೈನ್‌ ಮೂಲಕವೂ ಭಕ್ತರು ದೇಣಿಗೆ ಸಲ್ಲಿಸಬಹುದಾಗಿದೆ. ಇದರ ಮಧ್ಯೆಯೇ ರಾಮಮಂದಿರ ನಿರ್ಮಾಣದ ಎರಡನೇ ಹಂತದ ಕಾಮಗಾರಿ ಕೂಡ ಆರಂಭವಾಗಿದೆ ಎಂದು ತಿಳಿದುಬಂದಿದೆ.

Exit mobile version