ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ (Varun Tej) ನಟನೆಯ VT13 ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕ ಘೋಷಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ತೆಲುಗು ಜತೆ ಹಿಂದಿಯಲ್ಲಿ ಮೂಡಿ ಬರಲಿರುವ ಈ ಸಿನಿಮಾ ಮೂಲಕ ವರುಣ್ ಬಿಟೌನ್ ಅಂಗಳಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ.
ಸೋನಿ ಪಿಕ್ಚರ್ಸ್ ಇಂಟರ್ ನ್ಯಾಷನಲ್ ಬ್ಯಾನರ್ ಸಹಯೋಗದಲ್ಲಿ ರೆನೈಸಾನ್ಸ್ ಪಿಕ್ಚರ್ಸ್ನಡಿ ಸದೀಪ್ ಮುಡ್ಡಾ ದೊಡ್ಡ ಪ್ರಮಾಣದಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ನಂದಕುಮಾರ್ ಅಬ್ಬಿನೇನಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಸತ್ಯ ಘಟನೆಯಾಧಾರಿತ ಆ್ಯಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಹೆಸರಿಡದ ಈ ಚಿತ್ರದಲ್ಲಿ ವರುಣ್ ತೇಜ್ ವಾಯು ಪಡೆ ಅಧಿಕಾರಿಯಾಗಿ ನಟಿಸಿದ್ದಾರೆ. ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರಾಡಾರ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಶಕ್ತಿ ಪ್ರತಾಪ್ ಸಿಂಗ್ ಆ್ಯಕ್ಷನ್ ಕಟ್ ಹೇಳಿದ್ದು, ಜಾಹೀರಾತು ನಿರ್ದೇಶಕ ಹಾಗೂ ಛಾಯಾಗ್ರಹಕರಾಗಿರುವ ಅವರಿಗೆ ಇದು ಮೊದಲ ಸಿನಿಮಾವಾಗಿದೆ.
ವರುಣ್ ತೇಜ್ ಅವರು “ಕಂಚೆ,” “ಫಿದಾ,” “ತೊಲಿ ಪ್ರೇಮ,” ಮತ್ತು “ಗದ್ದಲಕೊಂಡ ಗಣೇಶ್” ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ವರುಣ್ ತೇಜ್ ಏರ್ ಫೋರ್ಸ್ ಫೈಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Pawan Kalyan: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಪವನ್ ಕಲ್ಯಾಣ್! ಬದುಕು ನೀಡಿದ್ದು ಚಿರಂಜೀವಿ
ಮಾನುಷಿ 2022ರಲ್ಲಿ ಅಕ್ಷಯ್ ಕುಮಾರ್ ಜತೆ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ನಟನೆ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಐತಿಹಾಸಿಕ ಚಿತ್ರದಲ್ಲಿ ಅವರು ಪೃಥ್ವಿರಾಜ್ ಅವರ ಪತ್ನಿ ರಾಜಕುಮಾರಿ ಸಂಯೋಗಿತಾ ಪಾತ್ರವನ್ನು ನಿರ್ವಹಿಸಿದರು. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ʻದಿ ಗ್ರೇಟ್ ಇಂಡಿಯನ್ ಫ್ಯಾಮಿಲಿʼ ಕಾಮಿಡಿ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.