ಬೆಂಗಳೂರು: ಜ್ಯೋತಿಷಿ ವೇಣುಸ್ವಾಮಿ (Venu Swamy) ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿದೆ. ಜಗನ್ ಅವರ ವೈಸಿಪಿ ಪಕ್ಷ ಹೀನಾಯ ಸೋಲು ಕಂಡಿದ್ದು ಟಿಡಿಪಿ ಪಕ್ಷ ಭಾರಿ ವಿಜಯ ದಾಖಲಿಸಿದೆ. ಇದೀಗ ಜ್ಯೋತಿಷಿ ವೇಣುಸ್ವಾಮಿ ವಿಡಿಯೊ ಮೂಲಕ ಕ್ಷಮೆ ಕೇಳಿದ್ದಾರೆ. ತೆಲುಗು ಚಿತ್ರರಂಗದವರ (Tollywood), ರಾಜಕಾರಣಿಗಳ ಭವಿಷ್ಯ ಹೇಳಿ ಜನಪ್ರಿಯವಾಗಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ, ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ವೈಯಕ್ತಿಕ ಜೀವನದ ಬಗ್ಗೆ ಇನ್ನು ಮುಂದೆ ಭವಿಷ್ಯ ಹೇಳುವುದಿಲ್ಲ ಎಂದು ಜ್ಯೋತಿಷಿ ವೇಣು ಸ್ವಾಮಿ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.
ʻʻಜಗನ್ ಮತ್ತೆ ಗೆಲ್ಲುತ್ತಾರೆ ಎಂದಿದ್ದೆ. ನಾನು ಕಲಿತ ವಿದ್ಯೆಗಳ ಆಧಾರದಲ್ಲಿ ಈ ಭವಿಷ್ಯವನ್ನು ನಾನು ನುಡಿದಿದ್ದೆ. ನನ್ನ ಭವಿಷ್ಯದಲ್ಲಿ ಮೊದಲನೆಯದು ನಿಜವಾಗಿದೆ. ಮೋದಿಯವರ ಫ್ರಭಾವ ತಗ್ಗಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಆಂಧ್ರ ರಾಜಕೀಯದ ಬಗ್ಗೆ ಹೇಳಿರುವ ಭವಿಷ್ಯ ತಪ್ಪಾಗಿರುವ ಕಾರಣ, ಇಂದಿನಿಂದ ರಾಜಕೀಯ ಹಾಗೂ ಸಿನಿಮಾ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಭವಿಷ್ಯ ನುಡಿಯುವುದಿಲ್ಲʼʼ ಎಂದು ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kakolu Venugopalaswamy Temple: ಏ.11ರಿಂದ ಕಾಕೋಳು ವೇಣುಗೋಪಾಲಸ್ವಾಮಿ 91ನೇ ಬ್ರಹ್ಮರಥೋತ್ಸವ
ರಶ್ಮಿಕಾ, ಸಮಂತಾ, ನಯನತಾರಾ ಹೀಗೆ ಹಲವು ಟಾಪ್ ನಟಿಯರ ಭವಿಷ್ಯ ನುಡಿದು ಫೇಮಸ್ ಆದವರು ವೇಣುಸ್ವಾಮಿ. ಕೆಲವು ದಿನಗಳ ಹಿಂದೆ ನಟಿ ಶ್ರೀಲೀಲಾ ಬಗ್ಗೆ ಭವಿಷ್ಯ ನುಡಿದಿದ್ದರು. ಟಾಲಿವುಡ್ ಟಾಪ್ ನಟಿಯರಾಗಿ ಗುರುತಿಸಿಕೊಂಡಿರುವ ಸಮಂತಾ, ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅವರಂತೆ ಶ್ರೀಲೀಲಾ ಅವರಿಗೂ ಒಳ್ಳೆಯ ಹೆಸರು ಬರಲಿದೆ. ಆದರೆ ಸೌತ್ ಸಿನಿಮಾಗಳಲ್ಲಿ ಶ್ರೀಲೀಲಾ ನಂಬರ್ 1 ನಟಿಯಾಗುತ್ತಾರೆ ಎಂದು ವೇಣುಸ್ವಾಮಿ ಜ್ಯೋತಿಷ್ಯ ಹೇಳಿದ್ದರು. ವೇಣುಸ್ವಾಮಿ, ಟಾಲಿವುಡ್ನ ಹಲವು ಸ್ಟಾರ್ ನಟ-ನಟಿಯರ ಭವಿಷ್ಯ ಹೇಳಿದ್ದರು. ಸಮಂತಾ-ನಾಗಚೈತನ್ಯ ಬೇರೆಯಾಗುತ್ತಾರೆ ಎಂದು ಸಹ ಭವಿಷ್ಯ ನುಡಿದಿದ್ದರು.
ಆಂಧ್ರಪ್ರದೇಶ ಪ್ರಮುಖ ಅಭ್ಯರ್ಥಿಗಳು
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ), ಎನ್. ಚಂದ್ರಬಾಬು ನಾಯ್ಡು (ಟಿಡಿಪಿ), ಪವನ್ ಕಲ್ಯಾಣ್ (ಜೆಎಸ್‌ಪಿ), ಕಿಲ್ಲಿ ಕೃಪಾರಾಣಿ (ಕಾಂಗ್ರೆಸ್), ಧರ್ಮನಾ ಪ್ರಸಾದ ರಾವ್ (ವೈಎಸ್‌ಆರ್‌ಸಿಪಿ), ಧರ್ಮನಾ ಕೃಷ್ಣ ದಾಸ್ (ವೈಎಸ್‌ಆರ್‌ಸಿಪಿ), ಪಾಮುಲಾ ಪುಷ್ಪ ಶ್ರೀವಾಣಿ ( ವೈಎಸ್‌ಆರ್‌ಸಿಪಿ), ನಲ್ಲಮಿಲ್ಲಿ ರಾಮಕೃಷ್ಣ ರೆಡ್ಡಿ (ಬಿಜೆಪಿ), ರಘು ರಾಮ ಕೃಷ್ಣರಾಜು (ಟಿಡಿಪಿ), ಚಿಂತಾಮನೇನಿ ಪ್ರಭಾಕರ್ (ಟಿಡಿಪಿ), ವೈಎಸ್ ಚೌಧರಿ (ಬಿಜೆಪಿ), ನಾದೆಂಡ್ಲ ಮನೋಹರ್ (ಜೆಎಸ್‌ಪಿ), ಕನ್ನಾ ಲಕ್ಷ್ಮೀನಾರಾಯಣ (ಟಿಡಿಪಿ), ಅದಾಲ ಪ್ರಭಾಕರ ರೆಡ್ಡಿ (ವೈಎಸ್‌ಆರ್‌ಸಿಪಿ), ಅಮ್ಜತ್ ಬಾಷಾ ಶೇಕ್ ಬೇಪಾರಿ (ವೈಎಸ್‌ಆರ್‌ಸಿಪಿ), ನಂದಮೂರಿ ಬಾಲಕೃಷ್ಣ (ಟಿಡಿಪಿ), ನಲ್ಲಾರಿ ಕಿಶೋರ್ ಕುಮಾರ್ ರೆಡ್ಡಿ (ಟಿಡಿಪಿ), ನಾರಾ ಲೋಕೇಶ್ (ಟಿಡಿಪಿ) ಮತ್ತಿತರರು ಆಂಧ್ರಪ್ರದೇಶದ ವಿಧಾನಸಭಾ ಕಣದಲ್ಲಿರುವ ಕೆಲವು ಪ್ರಮುಖ ಅಭ್ಯರ್ಥಿಗಳು.