Site icon Vistara News

Spandana Vijay Raghavendra: ಚಿನ್ನಾರಿ ಮುತ್ತನ ಮುತ್ತು ಸ್ಪಂದನಾ ಪಂಚಭೂತಗಳಲ್ಲಿ ಲೀನ; ಎಲ್ಲೆಡೆ ಕಂಬನಿ, ಮೌನ

Spandana Vijay Raghavendra cremation

ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ನಟ ವಿಜಯ ರಾಘವೇಂದ್ರ ಅವರ ಬದುಕಿನ ಸ್ಫೂರ್ತಿಯಾಗಿ, ಸಿನಿಮಾ ರಂಗದ ಎಲ್ಲರ ಪ್ರೀತಿಯ ಅಕ್ಕ/ತಂಗಿಯಂತೆ ಬಾಳಿ ಬದುಕಿದ ಸ್ಪಂದನಾ ಅವರು ಸೇರಿದವರ ಕಂಬನಿ, ನಿಟ್ಟುಸಿರು ಮತ್ತು ಗಾಢ ಮೌನದ ನಡುವಿನ ನಿಡುಸುಯ್ಯುವಿಕೆಯ ನಡುವೆ ಪಂಚಭೂತಗಳಲ್ಲಿ ಲೀನರಾದರು. ಅದುವರೆಗೂ ಬಂಡೆಗಲ್ಲಿನಂತೆ ಎದೆ ಗಟ್ಟಿ ಮಾಡಿಕೊಂಡಿದ್ದ ವಿಜಯ ರಾಘವೇಂದ್ರ ಮತ್ತು ಪುತ್ರ ಶೌರ್ಯ ಅವರು ಸ್ಪಂದನಾ ಅವರ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವ ಹೊತ್ತಿಗೆ ಗದ್ಗದಿತರಾದರು. ಸುರಿವ ಕಣ್ಣೀರ ನಡುವೆ ಇನ್ನೆಂದೂ ಮರಳಿ ಬಾರದ ಲೋಕಕ್ಕೆ ಸ್ಪಂದನಾ ಅವರನ್ನು ಭಾರವಾದ ಹೃದಯದಿಂದ ಬೀಳ್ಕೊಡಲಾಯಿತು.

ಬ್ಯಾಂಕಾಕ್‌ ಪ್ರವಾಸದಲ್ಲಿದ್ದ ಸ್ಪಂದನಾ ಅವರು ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ 11.35ಕ್ಕೆ ಥಾಯ್‌ ಏರ್‌ವೇಸ್‌ ವಿಮಾನದ ಮೂಲಕ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅಲ್ಲಿಂದ ರಾತ್ರಿಯೇ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಅವರ ನಿವಾಸಕ್ಕೆ ತರಲಾಗಿತ್ತು.

ಬುಧವಾರ ಮುಂಜಾನೆಯಿಂದಲೇ ಸ್ಪಂದನಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಗೃಹ ಮಂತ್ರಿ ಜಿ. ಪರಮೇಶ್ವರ್‌ ಸೇರಿದಂತೆ ನಾನಾ ರಾಜಕೀಯ ಗಣ್ಯರು, ಶಿವರಾಜ್‌ ಕುಮಾರ್‌, ಯಶ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌, ಗಿರಿಜಾ ಲೋಕೇಶ್‌ ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲ ನಟ-ನಟಿಯರು ಹಾಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.‌

ಅಂತಿಮ ದರ್ಶನಕ್ಕೆ ಬಂದ ಪ್ರತಿಯೊಬ್ಬರು ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ ನಡುವಿನ ಅನುಪಮ ಬಾಂಧವ್ಯವನ್ನು ನೆನಪಿಸಿಕೊಂಡರು. ʻಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು… ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರʼʼ ಎಂಬ ವಿಜಯ್‌ ರಾಘವೇಂದ್ರ ಅವರ ಅಚ್ಚುಮೆಚ್ಚಿನ ಗೀತೆಯಂತೆ ನೋವು ನಲಿವುಗಳೆರಡನ್ನೂ, ಕಷ್ಟ ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಮನೆಯನ್ನು ನೆಮ್ಮದಿಯ ತಾಣವಾಗಿಸಿದ್ದ ಜೋಡಿಯ ಕೃತಾರ್ಥ ಬದುಕು ಹೀಗೆ ಬೇರಾದ ವಿಧಿ ವಿಚಿತ್ರವನ್ನು ನೆನಪಿಸಿಕೊಂಡು ತಾವೇ ಕಣ್ಣೀರಾದರು.

ಇತ್ತ ವಿಜಯ ರಾಘವೇಂದ್ರ ಅವರು ಪತ್ನಿಯ ಪಾರ್ಥಿವ ಶರೀರದ ಮುಂದೆ ನಿರ್ಲಿಪ್ತ ಮನೋಸ್ಥಿತಿಯಲ್ಲಿ ನಿಂತು ಎಲ್ಲರ ಸಾಂತ್ವನಗಳನ್ನು ಸ್ವೀಕರಿಸಿದರು. ಕೆಲವೊಮ್ಮೆ ಕೆಲವರ ಹೆಗಲಿಗೆ ಒರಗಿ ಕಣ್ಣ ಹನಿಯನ್ನು ದಾಟಿಸಿದರು. ಪುತ್ರ ಶೌರ್ಯ ಕೂಡಾ ಎದೆಯೊಳಗಿನ ನೋವನ್ನು, ಉಕ್ಕಿ ಬಂದ ಕಣ್ಣೀರನ್ನು ಅವುಡುಗಚ್ಚಿ ನುಂಗುತ್ತಾ ಅಪ್ಪನ ಜತೆ ನಿಂತಿದ್ದ.

ಸ್ಪಂದನಾ ಅವರ ತಂದೆ ಬಿ.ಕೆ. ಶಿವರಾಂ ಮತ್ತು ತಾಯಿ, ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್‌, ತಮ್ಮ ರಕ್ಷಿತ್‌ ಶಿವರಾಂ ಅವರು ನೋವಿನ ನಡುವೆಯೇ ಅಂತಿಮ ನಮನ ಮತ್ತು ಅಂತಿಮ ಸಂಸ್ಕಾರಗಳ ವ್ಯವಸ್ಥೆ ನಡೆಸಿದರು. ವಿಜಯ ರಾಘವೇಂದ್ರ ಅವರ ತಂದೆ ಚಿನ್ನೇಗೌಡರು, ಸಹೋದರ ಮುರಳಿ ನೋವಿಗೆ ಹೆಗಲಾದರು.

ಮಧ್ಯಾಹ್ನ 1.30ರವರೆಗೆ ನಿಗದಿಯಾಗಿದ್ದ ಅಂತಿಮ ದರ್ಶನದ ಅವಕಾಶವನ್ನು ಭಾರಿ ಜನಸಂದಣಿಯ ಹಿನ್ನೆಲೆಯಲ್ಲಿ 2.30ರವರೆಗೆ ವಿಸ್ತರಿಸಲಾಯಿತು. ಬಳಿಕ ಮಲ್ಲೇಶ್ವರದ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ಸ್ಪಂದನಾ ಅವರ ಅಂತಿಮ ಯಾತ್ರೆ ನೆರವೇರಿತು.

ಹರಿಶ್ಚಂದ್ರ ಘಾಟ್‌ನ ವಿದ್ಯುತ್‌ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಈಡಿಗ ಸಂಪ್ರದಾಯದಂತೆ ಸರಳವಾಗಿ ನಡೆದ ಸ್ಪಂದನಾ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪತಿ ವಿಜಯ ರಾಘವೇಂದ್ರ ಮತ್ತು ಪುತ್ರ ಶೌರ್ಯ ನೆರವೇರಿಸಿದರು.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಅಂತಿಮ ಯಾತ್ರೆ; ಬಾರದೂರಿಗೆ ವಿಜಯ್ ಪತ್ನಿ ಪಯಣ!

ಚಿತಾಗಾರದೊಳಗಿನ ಅಗ್ನಿಯಲ್ಲಿ ಸ್ಪಂದನಾ ಅವರು ಲೀನವಾಗುತ್ತಿದ್ದಂತೆಯೇ ಸುಂದರ ಸಂಸಾರವೊಂದರ ಕೊಂಡಿಯೊಂದು ಕಡೆಯದಾಗಿ ಕಳಚಿಬಿತ್ತು. ವಿಧಿಯ ಕ್ರೂರ ನಾಟಕವೋ, ಯಾರ ಕೆಟ್ಟ ಕಣ್ಣೋ, ಬದುಕು ಇಷ್ಟೇ ಇರಬಹುದೋ ಎಂಬ ನೂರು ಯೋಚನೆಗಳ ನಡುವೆ ನೆರೆದ ಸಾವಿರಾರು ಮಂದಿಯ ಹೃದಯಗಳು ಭಾರವಾದವು.

Exit mobile version