ಬೆಂಗಳೂರು: ನಟ ವಿಜಯ್ ರಾಘವೇಂದ್ರ (Spandana Vijay Raghavendra) ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಅಲ್ಲಿನ ಕಾನೂನು ಪ್ರತಿಕ್ರಿಯೆಯನ್ನು ಮುಗಿಸಿ, ಆಗಸ್ಟ್ 8ರಂದು ಸ್ಪಂದನಾ ಮೃತದೇಹ ಬೆಂಗಳೂರಿಗೆ ಬಂದಿದೆ. ಈಗಾಗಲೇ ಹಲವು ಸಿನಿ ಗಣ್ಯರು, ಆಪ್ತರು ಸೇರಿದಂತೆ ಸಾರ್ವಜನಿಕರು ಸ್ಪಂದನಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ಘಟನೆಯಿಂದ ರಾಘಣ್ಣ ಕೂಡ ಭಾವುಕರಾಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಹಾಗೂ ವಿಜಯ್ ರಾಘವೇಂದ್ರಗೆ ಹತ್ತಿರದ ಒಡನಾಟವಿದೆ. ʻʻಹೋದವರು ಹೊರಟು ಹೋಗ್ತಾರೆ. ಇರೋರ ಕಷ್ಟ ನೋಡಿʼʼ ಎಂದು ರಾಘಣ್ಣ ಭಾವುಕರಾದರು.
“ಪ್ರಪಂಚದಲ್ಲಿ ಈ ರೀತಿ ನಡೆಯುತ್ತಲೇ ಇರುತ್ತದೆ. ನಮ್ಮ ಹತ್ತಿರದಲ್ಲಿದ್ದವರಿಗೆ ಹೀಗಾದಾಗ ನೋವಾಗುತ್ತೆ. ನಮ್ಮ ಜತೆಗಿದ್ದವರಿಗೆ ಹೀಗಾದಾಗ ಸಂಕಟ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ.” ಎಂದು ಪ್ರತಿಕ್ರಿಯೆ ನೀಡಿದ್ದಾರೆ ರಾಘಣ್ಣ.
“ನಮ್ಮ ಜತೆಗೆ ಬೆಳೆದವರು ರಾಘು. ಅಪ್ಪು ರಾಘು ಎಲ್ಲ ಚಿಕ್ಕ ಮಕ್ಕಳು ನಮ್ಮ ಮನೆಯಲ್ಲೇ ಇದ್ದು ಬೆಳೆದವರು. ಆ ಮಕ್ಕಳಿಗೆ, ಅವರ ಹೆಂಡ್ತಿ ಇಷ್ಟು ಬೇಗ ಹೋಗುತ್ತಾರೆ ಅಂದರೆ ಇದನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ರಾಘುನ ಹೀಗೆ ನೋಡುವುದಕ್ಕೆ ತುಂಬಾನೇ ಕಷ್ಟ. ನನ್ನ ಹೆಸರೇ ಇದೆ ಅವನಿಗೆ. ಮನೆಯಲ್ಲಿ ನನಗೆ ದೊಡ್ಡ ರಾಘು ಅವನಿಗೆ ಚಿಕ್ಕ ರಾಘು ಅಂತ ಕರೀತಾರೆ. ಅವನನ್ನು ನೋಡುವುದಕ್ಕೆ ಆಗುವುದೇ ಇಲ್ಲ. ಅವನನ್ನು ತಬ್ಬಿಕೊಂಡು ಹೆಂಗೆ ಹೇಳುವುದು ನಾನು. ಆಗಿದ್ದಾಗಿದೆ ಮರೆತು ಬಿಡಪ್ಪ ಅಂತ ಹೇಗೆ ಹೇಳೋದು. ತೋಚಲೇ ಇಲ್ಲ. ತಬ್ಬಿಕೊಂಡು ಇನ್ನೊಂದಿಷ್ಟು ದು:ಖ ಪಡ್ಕೊಂಡು ಹೋಗುತ್ತಿದ್ದೇನಷ್ಟೇ.” ಎಂದು ರಾಘಣ್ಣ ಭಾವುಕರಾಗಿದ್ದಾರೆ.
ಇದನ್ನೂ ಓದಿ: Spandana Vijay Raghavendra : ರಾಜ್ ಕುಟುಂಬದಲ್ಲೇಕೆ ಪದೇಪದೆ ದುರಂತ; ಅಷ್ಟಮಂಗಳ ಪ್ರಶ್ನೆ ಇಡಲು ಚಿಂತನೆ
ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.