ಬೆಂಗಳೂರು: ತೂಕ ಇಳಿಕೆ (Weight loss) ಮಾಡಿಕೊಳ್ಳಲು ಈಗಿನ ಜನ ಮಾಡುವ ಸರ್ಕಸ್ಸು ಒಂದೆರಡಲ್ಲ. ಎಲ್ಲರಿಗೂ ಆದಷ್ಟು ಬೇಗ ತೂಕದಲ್ಲಿ ಇಳಿಕೆ ಬೇಕು. ನಿಧಾನವಾಗಿ ಒಂದೊಂದೇ ಕೆಜಿಯಂತೆ ತಿಂಗಳುಗಟ್ಟಲೆ ಸರಿಯಾದ ಕ್ರಮದಲ್ಲಿ ತೂಕ ಇಳಿಸಲು ಯಾರಿಗೂ ಈಗ ಸಮಯ ಇಲ್ಲ, ವ್ಯವಧಾನವೂ ಇಲ್ಲ. ಹಾಗಾಗಿ ಬೇರೆ ಬೇರೆ ಬಗೆಯ ಡಯಟ್ಗಳು ಈಗ ಹುಟ್ಟಿಕೊಂಡಿವೆ. ಸೆಲೆಬ್ರಿಟಿಗಳೂ ಕೂಡ ಇದನ್ನೇ ಪಾಲಿಸಿ ಕೊನೆಗೆ ತಮ್ಮ ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದೀಗ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ರಾಘವೇಂದ್ರ (Spandana Vijay Raghavendra) ಅವರು ದಿಢೀರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್ ಹಾಗೂ ಆಹಾರ ಪಥ್ಯವನ್ನು ಸ್ಪಂದನ ಅನುಸರಿಸಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದರು ಎಂಬ ವದಂತಿಗಳು ಹಬ್ಬಿವೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್, ಈ ಕುರಿತು ಯಾವುದೇ ಉಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಕೇವಲ 19 ದಿನಗಳು ಬಾಕಿಯಿತ್ತು. ಅದಕ್ಕೂ ಮೊದಲೇ ಸ್ಪಂದನಾ ಮೃತಪಟ್ಟಿದ್ದಾರೆ. ವಿಜಯ್ ಅವರು ನಿರಂತರವಾಗಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ವಿಜಯ್ ಹಾಗೂ ಸ್ಪಂದನಾ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ಹೃದಯಾಘಾತ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಇದಾದ ಬೆನ್ನಲ್ಲೇ ಸ್ಪಂದನಾ ಡಯಟ್ ವದಂತಿಗಳು ಹಬ್ಬಿವೆ. ʻʻಸ್ಪಂದನಾ ವಿಜಯ್ KITO ಡಯಟ್ ಮಾಡುತ್ತಿದ್ದರು. ಈಗಾಗಲೇ 15 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಆರೋಗ್ಯ ಪದ್ಧತಿಯ ಪ್ರಕಾರ ವಾರಕ್ಕೊಮ್ಮೆ ಉಪವಾಸ ಮಾಡಿದ್ದರೆ ಸಾಕು. ಆದರೆ ದಿನನಿತ್ಯದ ಆಹಾರ ನಿಯಮಗಳಲ್ಲಿ ಇದು ಇರಬಾರದು. ದಿನ ಉಪವಾಸ ಮಾಡಿ ಪ್ರೊಟೀನ್ ತೆಗೆದುಕೊಂಡರೆ ಲೋ ಬಿಪಿ ಆಗುತ್ತದೆ. ಹೈಪರ್ ಟೆನ್ಶನ್ ಜಾಸ್ತಿ ಆಗುತ್ತದೆ. ದೇಹ ಮತ್ತು ಹೃದಯಕ್ಕೆ ಕಂಟ್ರೋಲ್ ಸಿಗುವುದಿಲ್ಲ. ಇದೇ ಸ್ಪಂದನಾ ಅವರಿಗೂ ಆಗಿದೆʼʼ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ
ವದಂತಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ ಬಿ.ಕೆ ಹರಿಪ್ರಸಾದ್
ʻʻದಯವಿಟ್ಟು ಊಹಾಪೋಹಗಳನ್ನು ಹಬ್ಬಿಸಬೇಡಿ. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಇರುತ್ತದೆʼʼ ಎಂದು ಸ್ಪಂದನಾ ವಿಜಯ್ ಅವರ ತಂದೆ ಬಿ.ಕೆ ಶಿವರಾಂ ಸಹೋದರ ಬಿ.ಕೆ ಹರಿಪ್ರಸಾದ್ (B K Hariprasad) ಮನವಿ ಮಾಡಿಕೊಂಡಿದ್ದಾರೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ನಿಧನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻಸ್ಪಂದನಾ ತನ್ನ ಕಸಿನ್ಸ್ ಜತೆಗೆ ಟ್ರಿಪ್ಗೆ ಹೋಗಿದ್ದರು. ವಿಜಯ ರಾಘವೇಂದ್ರಗೆ ಚಿತ್ರೀಕರಣ ಇತ್ತು. ಅದನ್ನು ಮುಗಿಸಿಕೊಂಡು ಅವರು ಕೂಡ ಸೇರಿಕೊಂಡಿದ್ದಾರೆʼʼ ಎಂದರು. ʻʻದಯವಿಟ್ಟು ಈ ಸಂಬಂಧ ಊಹಾಪೋಹಗಳಿಗೆ ಅವಕಾಶ ಕೊಡಬೇಡಿ. ವಿಜಯ ರಾಘವೇಂದ್ರ ಕೂಡ ಶೂಟಿಂಗ್ ಮುಗಿಸಿ ಅಲ್ಲಿಯೇ ಹೋಗಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಬರಲಿದೆ. ಅವರು ಸ್ವಲ್ಪ ಆರೋಗ್ಯದಲ್ಲಿ ವೀಕ್ ಇದ್ದರು. ಆಕೆಯ ಮಗ ಇಲ್ಲೆ ಇದ್ದ. ಅಂತ್ಯಕ್ರಿಯೆಯ ಬಗ್ಗೆ ಮೃತದೇಹ ಸಿಕ್ಕ ಬಳಿಕ ನಿರ್ಧಾರ ಮಡುತ್ತೇವೆ. ಮಂಗಳವಾರ (ಆಗಸ್ಟ್ 8) ಮೃತದೇಹ ಬರುವ ಸಾಧ್ಯತೆ ಇದೆʼʼ ಎಂದು ಹರಿಪ್ರಸಾದ್ ತಿಳಿಸಿದರು.
ಇದನ್ನೂ ಓದಿ: Karnataka live news: ನಟ ವಿಜಯ ರಾಘವೇಂದ್ರ ಪತ್ನಿಸ್ಪಂದನಾ ಇನ್ನಿಲ್ಲ; ಹೃದಯಾಘಾತದಿಂದ ನಿಧನ
ಮೂಲಗಳ ಪ್ರಕಾರ ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ತಮ್ಮ ಕಾಲೇಜು ಸ್ನೇಹಿತರೊಂದಿಗೆ ವಿದೇಶಕ್ಕೆ ಪ್ರವಾಸ ಹೋಗಿದ್ದರು. ಭಾನುವಾರ (ಆಗಸ್ಟ್ 6) ಸಂಜೆ ಶಾಪಿಂಗ್ ಮುಗಿಸಿ ಹೋಟೇಲ್ ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ವಿಜಯ ರಾಘವೇಂದ್ರ ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.