Site icon Vistara News

Sports Movies: ಕ್ರಿಕೆಟ್‌ ಆಧಾರಿತ ಟಾಪ್‌ 10 ಬಾಲಿವುಡ್‌ ಚಿತ್ರಗಳಿವು

movie

movie

ಮುಂಬೈ: ಕ್ರಿಕೆಟ್‌ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಘಳಿಗೆ ಬಂದೇ ಬಿಟ್ಟಿದೆ. ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್‌ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ನವೆಂಬರ್‌ 19) ಅಪರಾಹ್ನ 2 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್‌ ಪಟ್ಟಕ್ಕಾಗಿ ಸೆಣಸಾಡಲಿವೆ. ಕೋಟ್ಯಂತರ ಭಾರತೀಯರು ಟೀಮ್‌ ಇಂಡಿಯಾ ಗೆಲುವಿಗಾಗಿ ಹಾರೈಸಿದ್ದಾರೆ. ಈ ಕ್ರಿಕೆಟ್‌ ಜ್ವರ ಬಾಲಿವುಡ್‌ ಅನ್ನೂ ಬಿಟ್ಟಿಲ್ಲ. ಬಾಲಿವುಡ್‌ನಲ್ಲಿ ತಯಾರಾದ ಕ್ರಿಕೆಟ್‌ ಕುರಿತಾದ ಟಾಪ್‌ 10 ಚಿತ್ರಗಳ ಪಟ್ಟಿ ಇಲ್ಲಿದೆ (Sports Movies).

ಲಗಾನ್, 2001

ಆಮೀರ್‌ ಖಾನ್‌ ಚೊಚ್ಚಲ ನಿರ್ಮಾಣದ ಚಿತ್ರ ʼಲಗಾನ್‌ʼ ಅನ್ನು ಆಶುತೋಷ್‌ ಗೋವ್ರಿಕರ್‌ ನಿರ್ದೇಶಿಸಿದ್ದಾರೆ. 74ನೇ ಆಸ್ಕರ್‌ ಪ್ರಶಸ್ತಿ ಸಂದರ್ಭದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ವಿಭಾಗದಲ್ಲಿ ʼಲಗಾನ್‌ʼ ಸಿನಿಮಾ ನಾಮನಿರ್ದೇಶನಗೊಂಡಿತ್ತು ಎನ್ನುವುದು ವಿಶೇಷ. ಚಿತ್ರವು ಭಾರತದ ವಸಾಹತುಶಾಹಿ ಬ್ರಿಟಿಷ್ ರಾಜ್‍ನ ವಿಕ್ಟೋರಿಯನ್ ಅವಧಿಯ ಹಿನ್ನೆಲೆ ಹೊಂದಿದೆ. ಕ್ರಿಕೆಟ್ ಪಂದ್ಯದಲ್ಲಿ ಗೆದ್ದು ಗ್ರಾಮದ ತೆರಿಗೆ ರದ್ದು ಮಾಡಲು ಹೋರಾಟ ನಡೆಸುವ ಯುವಕರ ಕಥೆ ಇದರಲ್ಲಿದೆ. ಚಿತ್ರದಲ್ಲಿ ಆಮೀರ್‌ ಖಾನ್‌, ಗ್ರೇಸಿ ಸಿಂಗ್
ರೇಚಲ್ ಶೆಲಿ ಮತ್ತಿತರರು ನಟಿಸಿದ್ದಾರೆ.

ಜೆರ್ಸಿ, 2022

2019ರಲ್ಲಿ ತೆಲುಗಿನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆದ ʼಜೆರ್ಸಿʼ ಚಿತ್ರದ ರಿಮೇಕ್‌ ಇದು. ತೆಲುಗಿನಲ್ಲಿ ನಾನಿ, ಕನ್ನಡತಿ ಶ್ರದ್ಧಾ ಶ್ರೀನಾಥ್ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗೌತಮ್‌ ನಾಯ್ಡು ತಿನ್ನಾನೂರಿ ನಿರ್ದೇಶನದ ಹಿಂದಿ ಅವತರಣಿಕೆಯಲ್ಲಿ ಶಾಹೀದ್‌ ಕಪೂರ್‌, ಮೃಣಾಲ್‌ ಠಾಕೂರ್‌ ಮತ್ತಿತರರು ನಟಿಸಿದ್ದಾರೆ. ಕ್ರಿಕೆಟ್‌ ಆಟಗಾರನೊಬ್ಬ ನಿವೃತ್ತಿಯ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುವ ಚಿತ್ರಣ ಈ ಸಿನಿಮಾದಲ್ಲಿದ್ದು, ನೋಡುಗರನ್ನು ಭಾವುಕರನ್ನಾಗಿಸುತ್ತದೆ.

ಕೌನ್‌ ಪ್ರವೀಣ್‌ ತಾಂಬೆ, 2022

ಜಯಪ್ರದಾ ದೇಸಾಯಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಲೆಗ್‌ ಸ್ಪಿನ್ನರ್‌ ಪ್ರವೀಣಾ ತಾಂಬೆ ಜೀವನವನ್ನಾಧರಿಸಿದೆ. 41ನೇ ವಯಸ್ಸಿಗೆ ಐಪಿಎಲ್‌ ಪ್ರವೇಶಿಸಿದ ಪ್ರವೀಣ್‌ ಸಾಧನೆಯ ಮೇಲೆ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ಶ್ರೇಯಸ್‌ ತಲ್ಪಾಡೆ, ಆಶೀಶ್‌ ವಿದ್ಯಾರ್ಥಿ, ಅಂಜಲಿ ಪಾಟೀಲ್‌ ಮತ್ತಿತರರು ಅಭಿನಯಿಸಿದ್ದಾರೆ.

83, 2021

1983-ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಮರೆಯಲಾರದ ವರ್ಷ. ಯಾಕೆಂದರೆ ಆ ವರ್ಷ ಭಾರತ ಕ್ರಿಕೆಟ್‌ ತಂಡ ಮೊದಲ ಬಾರಿಗೆ ವಿಶ್ವಕಪ್‌ ಗೆದ್ದುಕೊಂಡಿತ್ತು. ಅಂದಿನ ಹೋರಾಟ, ಎದುರಿಸಿದ ಸವಾಲು ಮುಂತಾದ ಅಂಶಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನು ಕಬೀರ್‌ ಖಾನ್‌ ನಿರ್ದೇಶಿಸಿದ್ದಾರೆ. ಕಪೀಲ್‌ ದೇವ್‌ ಪಾತ್ರದಲ್ಲಿ ರಣವೀರ್‌ ಸಿಂಗ್‌ ಮೋಡಿ ಮಾಡಿದ್ದಾರೆ. ಕನ್ನಡತಿ ದೀಪಿಕಾ ಪಡುಕೋಣೆ, ಪಂಕಜ್‌ ತ್ರಿಪಾಠಿ, ಜೀವ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್, 2017

ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಜೀವನ ಕುರಿತಾದ ಡಾಕ್ಯುಮೆಂಟರಿ ಇದು. ಸಚಿನ್‌ ಈ ಚಿತ್ರವನ್ನು ನಿರೂಪಿಸಿದ್ದು, ಜೇಮ್ಸ್‌ ಎರ್ಸ್ಕಿನ್‌ ನಿರ್ದೇಶಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌, ಎಂ.ಎಸ್‌.ಧೋನಿ, ಮಯೂರೇಶ್‌ ಪ್ರೇಮ್‌, ಅಂಜಲಿ ತೆಂಡೂಲ್ಕರ್‌, ಅರ್ಜುನ್‌ ತೆಂಡೂಲ್ಕರ್‌ ಮತ್ತಿತರರನ್ನು ಈ ಚಿತ್ರದಲ್ಲಿ ಕಾಣಬಹುದು.

ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ, 2016

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಬಯೋಪಿಕ್‌ ಇದು. ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದ ದಿ. ಸುಶಾಂತ್‌ ಸಿಂಗ್‌ ರಾಜಪೂತ್‌ ಧೋನಿ ಪಾತ್ರದಕ್ಕೆ ಜೀವ ತುಂಬಿದ್ದರು. ನೀರಜ್‌ ಪಾಂಡೆ ಆ್ಯಕ್ಷನ್‌ ಕಟ್‌ ಹೇಳಿದ ಈ ಚಿತ್ರ ಭಾರತ ತಂಡ ಧೋನಿ ನೇತೃತ್ವದಲ್ಲಿ ವಿಶ್ವಕಪ್‌ ಎತ್ತಿ ಹಿಡಿಯುವವರೆಗಿನ ಚಿತ್ರಣ ನೀಡುತ್ತದೆ. ಕಿಯಾರಾ ಆಡ್ವಾನಿ, ದಿಶಾ ಪಠಾಣಿ, ಅನುಪಮ್‌ ಖೇರ್‌ ಮತ್ತಿತರರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಅಜರ್‌, 2016

ಕ್ರಿಕೆಟ್‌ ಆಟಗಾರನ ಮತ್ತೊಂದು ಬಯೋಪಿಕ್‌ ಇದು. ಭಾರತ ತಂಡದ ಮಾಜಿ ಆಟಗಾರ ಮಹಮ್ಮದ್‌ ಅಜರುದ್ದೀನ್‌ ಜೀವನದ ಮೇಲೆ ಈ ಚಿತ್ರ ಬೆಳಕು ಬೀರುತ್ತದೆ. ಅಜರುದ್ದೀನ್‌ ಜೀವನದ ಏಳು-ಬೀಳು, ಸವಾಲುಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಟೋನಿ ಡಿʼಸೋಜಾ ನಿರ್ದೇಶನದಲ್ಲಿ ಇಮ್ರಾನ್‌ ಹಶ್ಮಿ, ಪ್ರಾಚಿ ದೇಸಾಯಿ, ನರ್ಗೀಸ್‌ ಫಖ್ರಿ, ಲಾರಾ ದತ್ತ ಮತ್ತಿತರರು ಅಭಿನಯಿಸಿದ್ದಾರೆ.

ಕಾಯ್‌ ಪೊ ಚೆ, 2013

ಸುಶಾಂತ್‌ ಸಿಂಗ್‌ ರಾಜಪೂತ್‌ ಎನ್ನುವ ಮಹಾನ್‌ ಪ್ರತಿಭೆ ಬಾಲಿವುಡ್‌ಗೆ ಪರಿಚಯವಾದ ಚಿತ್ರ ಇದು. ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ಅವರ ಕಾದಂಬರಿಗೆ ನಿರ್ದೇಶಕ ಅಭಿಷೇಕ್‌ ಕಪೂರ್‌ ಸಿನಿಮಾ ರೂಪ ಕೊಟ್ಟಿದ್ದಾರೆ. ಕ್ರಿಕೆಟ್‌ ಆಟಗಾರರಾಗುವ ಮೂವರು ಸ್ನೇಹಿತರ ಕನಸು, ಬಳಿಕ ಅವರ ಜೀವನದಲ್ಲಿ ಎದುರಾಗುವ ಸವಾಲು ಮುಂತಾದವುಗಳನ್ನು ಈ ಚಿತ್ರ ತೆರೆದಿಡುತ್ತದೆ. ರಾಜ್‌ಕುಮಾರ್‌ ರಾವ್‌, ಅಮಿತ್‌ ಸಾಧ್‌, ಅಮೃತಾ ಪುರಿ ಮತ್ತಿತರರು ಮುಖ್ಯ ಪಾತ್ರದಲ್ಲಿದಲ್ಲಿದ್ದಾರೆ.

ಫೆರಾರಿ ಕಿ ಸವಾರಿ, 2012

ರಾಜೇಶ್‌ ಮಾಪುಸ್ಕರ್‌ ನಿರ್ದೇಶನದ ಈ ಚಿತ್ರ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ಆಡಬೇಕೆಂಬ ಮಗನ ಆಸೆಯನ್ನು ತಂದೆ ಪೂರೈಸುವ ಕಥಾ ಹಂದರವನ್ನು ಹೊಂದಿದೆ. ಮಗನ ಕನಸು ನನಸು ಮಾಡಲು ಫೆರಾರಿ ಕಾರನ್ನು ಕದಿಯಲಾಗುತ್ತದೆ. ಬಳಿಕ ಅದು ಸಚಿನ್‌ ಕಾರು ಎನ್ನುವುದು ತಿಳಿದು ಬರುತ್ತದೆ. ನಂತರಕ ನಡೆಯುವ ಸನ್ನಿವೇಶವನ್ನು ಕಟ್ಟಿಕೊಡಲಾಗಿದೆ. ಶರ್ಮನ್‌ ಜೋಶಿ, ಮೊಮನ್‌ ಇರಾನಿ, ಸತ್ಯದೀಪ್‌ ಮಿಶ್ರಾ ಮತ್ತಿತರರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ಪಟಿಯಾಲ ಹೌಸ್‌, 2011

ಕ್ರಿಕೆಟ್‌ ಬಗ್ಗೆ ತಂದೆಗೆ ಒಲವು ಇಲ್ಲದಿದ್ದರೂ ಮಗ ಅದನ್ನೇ ಆಯ್ದುಕೊಳ್ಳುತ್ತಾನೆ. ಮುಂದೆ ಯಾವುದನ್ನು ಮುಂದುವರಿಸಬೇಕು ಎನ್ನುವ ಗೊಂದಲ ಮಗನಿಗೆ ಕಾಡುತ್ತದೆ. ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌, ಅನುಷ್ಕಾ ಶರ್ಮಾ, ರಿಸಿ ಕಪೂರ್‌, ಡಿಂಪಲ್‌ ಕಾಪಾಡಿಯಾ ಮತ್ತಿತರರು ನಟಿಸಿದ್ದು, ನಿಖಿಲ್‌ ಆಡ್ವಾಣಿ ನಿರ್ದೇಶಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version