ಬೆಂಗಳೂರು: ʼಕಾರ್ತಿಕೇಯʼ, ʼಕಾರ್ತಿಕೇಯ-2ʼನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಬಳಿಕ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಸ್ಪೈ (Spy Movie) ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 29ಕ್ಕೆ ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ಮುಂಬೈನಲ್ಲಿ ಪ್ರಚಾರ ಮುಗಿಸಿರುವ ಸಿನಿ ತಂಡ ಬೆಂಗಳೂರಿಗೆ ಬಂದಿಳಿದಿದೆ.
ಬೆಂಗಳೂರಿಗೆ ಬಂದ ಸ್ಪೈ ಸಿನಿಮಾ ತಂಡವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ಸ್ವಾಗತಿಸಿ ಶುಭಕೋರಿದ್ದಾರೆ. ಬಳಿಕ ಚಿತ್ರತಂಡ ಮಾಧ್ಯಮದವರೊಂದಿಗೆ ತಮ್ಮ ಬಹುನಿರೀಕ್ಷಿತ ಸ್ಪೈ ಬಗ್ಗೆ ಸಾಕಷ್ಟು ವಿಷಯವನ್ನು ಹಂಚಿಕೊಂಡಿತು.
ಇದನ್ನೂ ಓದಿ: Viral Video: ಪ್ರೀತಿಯಲ್ಲಿ ಬಿದ್ದ ಮಗಳಿಗೆ ಬಾಸುಂಡೆ ಬರುವಂತೆ ಬಾರಿಸಿದ ಅಮ್ಮ! ಇದು ಲವ್ ಸೈಡ್ ಎಫೆೆಕ್ಟ್
ನಟ ನಿಖಿಲ್ ಸಿದ್ಧಾರ್ಥ್ ಮಾತನಾಡಿ, “ನಾನು ನಟಿಸಿರುವ ಕಾರ್ತಿಕೇಯ ಸಿನಿಮಾಗೆ ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅದೇ ರೀತಿಯಲ್ಲಿ ಜೂನ್ 29ಕ್ಕೆ ಬಿಡುಗಡೆಯಾಗುತ್ತಿರುವ ಸ್ಪೈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಕುರಿತಾಗಿ ಸಿನಿಮಾ ಮಾಡಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಈ ಚಿತ್ರದಲ್ಲಿ ಅವರ ಸಾವಿನ ಬಗ್ಗೆ ಕ್ಲಾರಿಟಿ ಸಿಗಲಿದೆ. ಆಕ್ಷನ್, ಮನೋರಂಜನೆ ಎಲ್ಲವೂ ಚಿತ್ರದಲ್ಲಿದೆ. ಪ್ರತಿಯೊಬ್ಬ ಭಾರತೀಯರೂ ನೋಡಬೇಕಾದ ಸಿನಿಮಾವಿದು” ಎಂದು ಹೇಳಿದರು.
ನಟಿ ಐಶ್ವರ್ಯ ಮೆನನ್ ಮಾತನಾಡಿ, “ಸಿನಿಮಾದಲ್ಲಿ ನಾನು ವೈಷ್ಣವಿ ಎಂಬ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ದಾಸವಾಳ ಹಾಗೂ ನಮೋ ಭೂತಾತ್ಮ ಕನ್ನಡ ಸಿನಿಮಾಗಳ ಮೂಲಕವೇ ನನ್ನ ಸಿನಿ ಜರ್ನಿ ಶುರುವಾಗಿದ್ದು. ಕನ್ನಡ ಇಂಡಸ್ಟ್ರಿ ನನಗೆ ಬಹಳ ವಿಶೇಷ. ಸ್ಪೈ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲಿದೆ” ಎಂದರು.
ಇದನ್ನೂ ಓದಿ: Viral Video: ಕಾಟ ಕೊಟ್ಟ ಪುಂಡನನ್ನು ಕೆಡವಿ ಹೊಡೆದು ಹಾಕಿದ್ರು! ಅಕ್ಕ-ತಂಗಿಯ ವಿಡಿಯೊ ಸಕತ್ ವೈರಲ್
ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಎಚ್ ಆಕ್ಷನ್ ಕಟ್ ಹೇಳಿದ್ದಾರೆ. ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ, ಚರಣ್ ರಾಜ್ ಉಪ್ಪಲಪತಿ ಈ ಚಿತ್ರ ನಿರ್ಮಿಸಿದ್ದಾರೆ. ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸ್ಪೆಷಲ್ ರೋಲ್ನಲ್ಲಿ ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಭಾಟಿ ಕೂಡ ಕಾಣಿಸಿಕೊಂಡಿದ್ದಾರೆ. ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.
CTR ದೋಸೆ ಚಪ್ಪರಿಸಿ ತಿಂದ ನಿಖಿಲ್
ಬೆಂಗಳೂರಿಗೆ ಸಿನಿಮಾ ಪ್ರಚಾರಕ್ಕೆ ಬಂದಿದ್ದ ನಿಖಿಲ್ ಇಲ್ಲಿನ ಪ್ರಸಿದ್ಧ ಸಿಟಿಆರ್ ಹೋಟೆಲ್ಗೂ ಭೇಟಿ ನೀಡಿದ್ದರು. ಹೋಟೆಲ್ನಲ್ಲಿ ದೋಸೆಯನ್ನು ಚಪ್ಪರಿಸಿ ತಿಂದಿದ್ದಾರೆ. ಇದೇ ವೇಳೆ ಅಭಿಮಾನಿಗಳು ನಿಖಿಲ್ ಜೊತೆ ಫೋಟೋಗೆ ಮುಗಿಬಿದ್ದರು. ಬಳಿಕ ಮತ್ತೊಂದು ಪ್ರಸಿದ್ಧ ಹೋಟೆಲ್ ಆದ ರಾಮೇಶ್ವರಂ ಕೆಫೆಯಲ್ಲಿ ಕಾಫಿ ಕುಡಿದರು.