Site icon Vistara News

Sridevi 60th Birth Anniversary: ಲೇಡಿ ಸೂಪರ್‌ ಸ್ಟಾರ್‌ ʻಶ್ರೀದೇವಿʼಗೆ 60ನೇ ಹುಟ್ಟುಹಬ್ಬ; ಗೂಗಲ್‌ ಡೂಡಲ್‌ ಗೌರವ!

Sridevi actress

ಬೆಂಗಳೂರು: ಆಗಸ್ಟ್‌ 13 ಬಾಲಿವುಡ್‌ ನಟಿ ಶ್ರೀದೇವಿ (Sridevi 60th Birth Anniversary) ಅವರ ಜನುಮದಿನ. ನಮ್ಮ ನಡುವೆ ಅವರು ಬದುಕಿದ್ದಿದ್ದರೆ ಅವರಿಗೆ ಭರ್ತಿ 60 ವರ್ಷ ತುಂಬುತ್ತಿದ್ದವು. ಈ ವಿಶೇಷ ದಿನದಂದು ಗೂಗಲ್‌ ಡೂಡಲ್‌ ಮೂಲಕ ಗೌರವ ಸೂಚಿಸಿದೆ. ಪತಿ-ನಿರ್ಮಾಪಕ ಬೋನಿ ಕಪೂರ್ (sridevi husband) ಮತ್ತು ಪುತ್ರಿಯರಾದ ಜಾನ್ವಿ ಕಪೂರ್ (janhvikapoor) ಮತ್ತು ಖುಷಿ ಕಪೂರ್ ಹಳೆಯ ಫೋಟೊ ಶೇರ್‌ ಮಾಡಿಕೊಂಡು ಶ್ರೀದೇವಿ ಅವರನ್ನು ನೆನಪಿಸಿಕೊಂಡರು. ಭಾರತದ ‘ಮೊದಲ ಮಹಿಳಾ ಸೂಪರ್‌ಸ್ಟಾರ್’ ಎಂದು ಬಿರುದು ಪಡೆದ ಶ್ರೀದೇವಿ 2018ರಲ್ಲಿ ತಮ್ಮ 54 ನೇ ವಯಸ್ಸಿನಲ್ಲಿ ದುಬೈನಲ್ಲಿ ನಿಧನರಾದರು.

ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ (Sridevi 60th Birth Anniversary)

ಬಾಲಿವುಡ್ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂತಲೇ ಖ್ಯಾತಿ ಪಡೆದ ಶ್ರೀದೇವಿ 1963 ಆಗಸ್ಟ್ 13ರಂದು ತಮಿಳುನಾಡಿನಲ್ಲಿ ಶ್ರೀ ಅಮ್ಮ ಯಂಗೇರ್ ಆಯಪ್ಪರ್ ಜನಿಸಿದರು. ಶ್ರೀದೇವಿ ನಾಲ್ಕನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಮಿಂಚಿದವರು. ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಶ್ರೀದೇವಿ ಅವರು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಕೂಡ ಖ್ಯಾತಿ ಪಡೆದರು.

ಸ್ಟಾರ್‌ ಹೀರೋಗಳಿದ್ದರೂ, ಅವರೆಲ್ಲರನ್ನೂ ಮೀರಿಸಿ ಬೆಳೆದ ಏಕೈಕ ನಟಿ. ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆದ ನಾಯಕಿ ಶ್ರೀದೇವಿ. ತಮಿಳಿನ ಕಂದನ್‌ ಕರುಣೈ ಅವರ ಮೊದಲ ಸಿನಿಮಾ. ನಟನೆಯ ಜತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಸುಲಲಿತವಾಗಿ ಮಾತನಾಡಲು ಕಲಿತರು. 1976ರಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಕೆ ಬಾಲಚಂದರ್‌ ಅವರ ಮೂಂಡ್ರು ಮುಡಿಚು ಸಿನಿಮಾದಲ್ಲಿ ನಟಿಸಿದ ಶ್ರೀದೇವಿ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ.. ಆ ಕಾಲದ ಸ್ಟಾರ್‌ ನಟರಾದ ಕಮಲ್‌ ಹಾಸನ್, ರಜಿನಿಕಾಂತ್‌, ಅಮಿತಾಬ್‌ ಬಚ್ಚನ್‌ ಅವರಂಥ ಮೇರು ಕಲಾವಿದರ ಜತೆ ನಟಿಸಿ ಸೈ ಎನಿಸಿಕೊಂಡರು. ಆ ಕಾರಣಕ್ಕೆ ಲೇಡಿ ಸೂಪರ್‌ಸ್ಟಾರ್‌ ಎಂಬ ಹೆಸರಿನಿಂದಲೂ ಅವರನ್ನು ಕರೆಯುವಂತಾಯಿತು.

ಇದನ್ನೂ ಓದಿ: Actress Sridevi : ಶ್ರೀದೇವಿಯನ್ನು ನೆನಪಿಸಿಕೊಂಡ ಕುಟುಂಬ; ನಿನಗಾಗಿ ಇಂದಿಗೂ ಹುಡುಕುವೆ ಎಂದ ಜಾಹ್ನವಿ

ಹೊಟೇಲ್‌ ಕೋಣೆಯಲ್ಲಿ ಶವವಾಗಿ ಪತ್ತೆ

2017ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ ಮಾಮ್‌ (MOM) ಚಿತ್ರವೇ ಅವರ ಕೊನೆಯ ಸಿನಿಮಾ (Sridevi 60th Birth Anniversary). 2018ರಲ್ಲಿ ಶಾರುಖ್‌ ಖಾನ್‌ ಜತೆಗೆ ಜೀರೋ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2018ರ ಫೆಬ್ರವರಿ 24ರಂದು ದುಬೈನಲ್ಲಿ ನಟಿ ಶ್ರೀದೇವಿ ಅಕಾಲಿಕ ನಿಧನರಾಗುತ್ತಾರೆ. ಆಪ್ತರ ಮದುವೆ ಸಮಾರಂಭಕ್ಕೆ ಹೋದಾಗ ಮದುವೆ ಮುಗಿದ ಬಳಿಕ ತಂಗಿದ್ದ ಹೊಟೇಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾಗುತ್ತಾರೆ. ಕೆಲವರು ಆತ್ಮಹತ್ಯೆ ಎಂದು ಬಿಂಬಿಸಿದರೆ, ಇನ್ನು ಕೆಲವರು ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದರು. ಹೃದಯಾಘಾತದಿಂದ ನಿಧನದ ಸುದ್ದಿ ಅಧಿಕೃತವಾಯಿತು. ಫೆಬ್ರವರಿ 28ರಂದು ಅಂತ್ಯ ಕ್ರಿಯೆ (sridevi death) ನೆರವೇರಿಸಲಾಯಿತು.

ಮೀಡಿಯಂನ 2022ರ ವರದಿಯ ಪ್ರಕಾರ, ಚಲನಚಿತ್ರ ನಿರ್ಮಾಪಕ ಸುನೀಲ್ ಸಿಂಗ್ ಶ್ರೀದೇವಿಯ ಸಾವನ್ನು ಕೊಲೆ ಎಂದು ಹೇಳಿದ್ದಾರೆ. ಆಕೆಯ ಸಾವಿನ ತನಿಖೆಗೆ ಒತ್ತಾಯಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಒಮಾನ್‌ನಲ್ಲಿ ಶ್ರೀದೇವಿ ಹೆಸರಿನಲ್ಲಿ 240 ಕೋಟಿ ರೂ. ಮೌಲ್ಯದ ವಿಮಾ ಪಾಲಿಸಿ ಇದೆ ಎಂದು ಸುನೀಲ್ ಸಿಂಗ್ ಅವರ ವಕೀಲರು ಪ್ರತಿಪಾದಿಸಿದ್ದರು. ಸುನೀಲ್ ಸಿಂಗ್ ಅವರ ಮನವಿಯನ್ನು ತಿರಸ್ಕರಿಸಿತ್ತು ಸುಪ್ರೀಂ ಕೋರ್ಟ್.

Exit mobile version