ಬೆಂಗಳೂರು: ‘ಇಂಗ್ಲಿಷ್ ವಿಂಗ್ಲಿಷ್’ ಹೆಸರು ಕೇಳುತ್ತಿದ್ದಂತೆ ನಟಿ ಶ್ರೀದೇವಿ (sridevi) ಕಣ್ಮುಂದೆ ಬರುತ್ತಾರೆ. ಅಷ್ಟು ಸೊಗಸಾಗಿ ಈ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಇಂಗ್ಲಿಷ್ ವಿಂಗ್ಲಿಷ್ ಇದೊಂದು ಸಿನಿಮಾಕ್ಕಿಂತ ಹೆಚ್ಚಾಗಿ, ಮಹಿಳೆಯರಿಗೆ ಸಾಕಷ್ಟು ಸ್ಫೂರ್ತಿ ನೀಡಿದ ಚಿತ್ರವೆಂದರೆ ತಪ್ಪಾಗಲಾರದು! ಸಾಕಷ್ಟು ಮಹಿಳೆಯರು ಶ್ರೀದೇವಿ ಪಾತ್ರದೊಂದಿಗೆ ತಮ್ಮನ್ನು ತಾವು ಕಲ್ಪಿಸಿಕೊಂಡಿದ್ದರು. ಮನಮುಟ್ಟುವ ಚಿತ್ರಕಥೆ, ನಟಿ ಶ್ರೀದೇವಿಯವರ ಸಹಜ ಅಭಿನಯ ಚಿತ್ರದ ಯಶಸ್ಸಿಗೆ ಕಾರಣವಾಗಿತ್ತು. ಇದೀಗ ಇಂಗ್ಲಿಷ್ ವಿಂಗ್ಲಿಷ್ (English Vinglish) ಚಿತ್ರಕ್ಕೆ ಮೊದಲ ಆಯ್ಕೆ ಐಶ್ವರ್ಯಾ ರೈ ಆಗಿದ್ದರು. ನಿರ್ಮಾಪಕರ ಮನವೊಲಿಸಿ ಶ್ರೀದೇವಿಯವರನ್ನು (Sridevi) ಈ ಪಾತ್ರಕ್ಕೆ ಆಯ್ಕೆಮಾಡಲಾಯಿತು ಎಂದು ಶ್ರೀದೇವಿ ಅವರ ಪತಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬಹಿರಂಗಪಡಿಸಿದ್ದಾರೆ.
2012ರಲ್ಲಿ ತೆರೆಕಂಡ “ಇಂಗ್ಲಿಷ್ ವಿಂಗ್ಲಿಷ್ʼ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಇಂಗ್ಲಿಷ್ ಕಲಿಯಲು ಪ್ರಯತ್ನಿಸುವ ಶಶಿಯ ಪಾತ್ರ ಎಲ್ಲರ ಹೃದಯಗಳನ್ನು ಗೆದ್ದಿತ್ತು. ಬೋನಿ ಕಪೂರ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.
ನಿರ್ದೇಶಕಿ ಗೌರಿ ಶಿಂಧೆ ಅವರು ಈ ಪಾತ್ರಕ್ಕೆ ಐಶ್ವರ್ಯಾ ರೈ ಅನ್ನು ಮೊದಲು ಆಯ್ಕೆ ಮಾಡಿದ್ದರಂತೆ. ಆದರೆ ಇವರ ಪತಿ, ಈ ಚಿತ್ರದ ನಿರ್ಮಾಪಕ ಆರ್. ಬಾಲ್ಕಿ ಅವರ ಮನಸ್ಸಿನಲ್ಲಿ ಈ ಪಾತ್ರ ಶ್ರೀದೇವಿ ಮಾಡಿದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯವಿದ್ದಿತ್ತಂತೆ. ಕೊನೆಗೆ ಗೌರಿ ಅವರು ಬಾಲ್ಕಿ ಅವರ ಅಭಿಪ್ರಾಯದಂತೆ ಶ್ರೀದೇವಿಯನ್ನೇ ಆಯ್ಕೆ ಮಾಡಿದರಂತೆ. “ಶ್ರೀದೇವಿ ಕೇವಲ ಪ್ರಾದೇಶಿಕ ಭಾಷೆಯಷ್ಟೇ ಅಲ್ಲ, ಹಿಂದಿ ಆವೃತ್ತಿಯನ್ನೂ ಶ್ರೀದೇವಿಯೇ ಮಾಡಲಿ, ಇಂಗ್ಲಿಷ್ ಮಾತನಾಡಲು ಬಾರದ ಪಾತ್ರದಲ್ಲಿ ಶ್ರೀದೇವಿ ಹೆಚ್ಚು ಸೂಕ್ತ ಆಯ್ಕೆ. ಐಶ್ವರ್ಯಾ ಮಿಸ್ ಇಂಡಿಯಾ ಆಗಿದ್ದಾರೆ. ಶ್ರೀದೇವಿ ಬೇರೆಯವರಿಗಿಂತ ಹೆಚ್ಚು ಸೂಕ್ತಳು” ಎಂದು ಗೌರಿ ಅವರು ಹೇಳಿರುವುದಾಗಿ ಬೋನಿ ಕಪೂರ್ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.
ಇನ್ನು ಬೋನಿ ಕಪೂರ್ ಆಗಾಗ್ಗೆ ಸಂದರ್ಶನಗಳಲ್ಲಿ ತಮ್ಮ ಪತ್ನಿ ಶ್ರೀದೇವಿ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ. ಶ್ರೀದೇವಿ ಮತ್ತು ಬೋನಿ 1996ರಲ್ಲಿ ವಿವಾಹವಾದರು. ಬೋನಿ ಅವರಿಗೆ ಅದಾಗಲೇ ಮೋನಾ ಜತೆ ವಿವಾಹವಾಗಿ ಅರ್ಜುನ್ ಕಪೂರ್ ಮತ್ತು ಅಂಶುಲಾ ಕಪೂರ್ ಇಬ್ಬರು ಮಕ್ಕಳಿದ್ದರು, ಬಳಿಕ ಶ್ರೀದೇವಿ ಅವರಿಂದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಇಬ್ಬರು ಹೆಣ್ಣುಮಕ್ಕಳನ್ನು ಪಡೆದರು.
ಇದನ್ನೂ ಓದಿ: Anil Kapoor: ಅನಿಲ್ ಕಪೂರ್‌ರನ್ನು ಭೇಟಿಯಾದ ಖ್ಯಾತ ನಿರ್ದೇಶಕ, ಹೊಸ ಸಿನಿಮಾ ಘೋಷಣೆ?
ಇದೀಗ ಬೋನಿ ಕಪೂರ್ ನಿರ್ಮಾಣದ “ಮೈದಾನ್ʼ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. “ಮೈದಾನ್ʼ ಭಾರತಕ್ಕೆ ಹೆಮ್ಮೆ ತಂದ ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಅಧರಿಸಿದ ಕತೆಯಾಗಿದೆ.
ಇದರಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಕೂಡ ನಟಿಸಿದ್ದಾರೆ. ಚಿತ್ರವು ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ಮುಂಬರುವ ಸಾಹಸ ಚಲನಚಿತ್ರ “ಬಡೇ ಮಿಯಾ ಚೋಟೆ ಮಿಯಾʼ ಅದೇ ವೇಳೆ ಬಿಡುಗಡೆಯಾಗಲಿದೆ. ನೋ ಎಂಟ್ರಿ 2 ಮತ್ತು ವಾಂಟೆಡ್ 2 ಚಿತ್ರಗಳು ಬೋನಿ ಕಪೂರ್ ಕೈಯಲ್ಲಿವೆ.