Site icon Vistara News

SS Rajamouli: ರಾಜಮೌಳಿ ಹೊಸ ಸಿನಿಮಾ ಅನೌನ್ಸ್‌; ಬಯೋಪಿಕ್‌ ಮೂಲಕ ಕಮ್‌ಬ್ಯಾಕ್‌; ನಿರ್ದೇಶಕ ಮಾತ್ರ ಬೇರೆ!

SS Rajamouli announces biopic Made In India

ಬೆಂಗಳೂರು: ಎಸ್‌ಎಸ್ ರಾಜಮೌಳಿ (SS Rajamouli) ಹೊಸ ಕಥೆಯೊಂದಿಗೆ ಮರಳಿದ್ದಾರೆ. ಈ ಬಾರಿ ʻಮೇಡ್ ಇನ್ ಇಂಡಿಯಾʼ ಬಯೋಪಿಕ್‌ ಸಿನಿಮಾ ಮೂಲಕ ಬರುತ್ತಿದ್ದಾರೆ. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ನಿತಿನ್ ಕಕ್ಕರ್ ನಿರ್ದೇಶಿಸಲಿದ್ದಾರೆ. ಮರಾಠಿ, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಹೀಗೆ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಅಂದಹಾಗೆ ಈ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡುತ್ತಿಲ್ಲ. ಈ ಸಿನಿಮಾವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡುತ್ತಿದ್ದು, ರಾಜಮೌಳಿ ಅವರ ಮಗ ಎಸ್ ಎಸ್ ಕಾರ್ತಿಕೇಯ ಮತ್ತು ವರುಣ್ ಗುಪ್ತಾ ಎನ್ನುವವರು ಈ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ. ಇದನ್ನು ರಾಜಮೌಳಿ ಅವರು ಅರ್ಪಿಸಲಿದ್ದಾರೆ. ಎಸ್‌ಎಸ್‌ ರಾಜಮೌಳಿ ಸೆ.19ರಂದು ಟ್ವೀಟ್‌ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ʻನಾನು ಮೊದಲು ನಿರೂಪಣೆಯನ್ನು ಕೇಳಿದಾಗ ಭಾವನಾತ್ಮಕವಾಗಿ ಸೆಳೆಯಿತು. ಬಯೋಪಿಕ್ ಮಾಡುವುದು ಸ್ವಲ್ಪ ಸವಾಲಿನ ಕೆಲಸ. ಆದರೆ ಭಾರತೀಯ ಸಿನಿಮಾದ ಪಿತಾಮಹನ ಬಗ್ಗೆ ಸಿನಿಮಾ ಮಾಡುವುದು ಇನ್ನೂ ಹೆಚ್ಚು ಸವಾಲಿನ ಸಂಗತಿಯಾಗಿದೆ. ನಮ್ಮ ಹುಡುಗರು ಸಿದ್ಧರಾಗಿದ್ದಾರೆ. ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇವೆ ʻಮೇಡ್ ಇನ್ ಇಂಡಿಯಾʼʼಎಂದು ಬರೆದು ಸಣ್ಣ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; SS Rajamouli: 10 ಭಾಗಗಳಲ್ಲಿ ಮಹಾಭಾರತ ಸಿನಿಮಾ: ಕನಸಿನ ಪ್ರಾಜೆಕ್ಟ್‌ ಬಗ್ಗೆ ರಾಜಮೌಳಿ ಹೇಳಿದ್ದೇನು?

ಮಹಾಭಾರತ ಕಥೆ ಏನು

ಈ ಹಿಂದೆ, ರಾಜಮೌಳಿ ಅವರು ಮೂಲ ಮಹಾಭಾರತಕ್ಕೆ ತಮ್ಮದೇ ಸ್ಕ್ರಿಪ್ಟ್ ಮಾಡುವುದಾಗಿ ಹೇಳಿಕೊಂಡಿದ್ದರು. ಅದೆಷ್ಟೋ ಬಾರಿ ರಾಜಮೌಳಿ ಮಹಾಭಾರತ ಕಥೆ ತಮಗೆ ಅಚ್ಚುಮೆಚ್ಚು ಎಂದು ಹೇಳಿಕೊಂಡಿದ್ದರು. ಮಹಾಭಾರತ ಕತೆಯನ್ನು ತೆರೆಗೆ ತರಬೇಕು ಎಂಬುದು ರಾಜಮೌಳಿಯ ಆಸೆ. ಈ ಬಗ್ಗೆ ಅವರೇ ಈಗ ಮತ್ತಷ್ಟು ವಿವರ ನೀಡಿದ್ದರು .“ನಾನು ಮಹಾಭಾರತವನ್ನು ನಿರ್ಮಿಸುವ ಹಂತಕ್ಕೆ ಬಂದರೆ, ದೇಶದಲ್ಲಿ ಲಭ್ಯವಿರುವ ಮಹಾಭಾರತದ ಆವೃತ್ತಿಗಳನ್ನು ಓದಲು ನನಗೆ ಒಂದು ವರ್ಷ ಬೇಕಾಗುತ್ತದೆ. ಮಹಾಭಾರತ ನನ್ನ ನೆಚ್ಚಿನ ಕತೆ, ಕನಿಷ್ಠ 10 ಭಾಗ​ಗಳಲ್ಲಿ ಆ ಕತೆಯನ್ನು ಸಿನಿಮಾ ಮಾಡಬಹುದು. ಮಹಾಭಾರತಕ್ಕೆ ನಾನು ಬರೆಯುವ ಪಾತ್ರಗಳು ನೀವು ಹಿಂದೆ ನೋಡಿದ ಅಥವಾ ಓದಿದಂತೆಯೇ ಇರುವುದಿಲ್ಲ. ನಾನು ಮಹಾಭಾರತವನ್ನು ನನ್ನದೇ ಆದ ರೀತಿಯಲ್ಲಿ ಹೇಳುತ್ತೇನೆ. ಆದರೆ ಮಹಾಭಾರತ ಕಥೆ ಒಂದೇ ಆಗಿರುತ್ತದೆʼʼ ಎಂದು ರಾಜಮೌಳಿ ಹೇಳಿಕೊಂಡಿದ್ದರು.

ಮಹೇಶ್‌ ಬಾಬು ಜತೆ ಬ್ಯುಸಿಯಾದ ರಾಜಮೌಳಿ

ಸದ್ಯ ರಾಜಮೌಳಿ ಅವರು ಮಹೇಶ್‌ ಬಾಬು ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದಲ್ಲಿ ಕಾಡಿನಲ್ಲಿ ನಡೆಯುವ ಸಾಹಸಮಯ ದೃಶ್ಯಗಳು ಸಾಕಷ್ಟಿವೆ ಎಂದು ವರದಿಯಾಗಿದೆ. ಭಾರತದ ಕೆಲವು ನಗರಗಳು, ಅಮೆಜಾನ್ ಕಾಡುಗಳು, ದುಬೈ ಮರುಭೂಮಿ ಸೇರಿದಂತೆ ಇನ್ನೂ ವಿಶೇಷ ಪ್ರದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್‌ ಅಧಿಕೃತವಾಗಿ ಆರಂಭವಾಗಲಿದೆ. ಈ ಸಿನಿಮಾ ಬಗ್ಗೆ ಆರ್‌ಆರ್‌ಆರ್‌ ಬಿಡುಗಡೆಯಾಗುವ ಮುಂಚೆಯೇ ಘೋಷಣೆ ಮಾಡಿದ್ದರು ರಾಜಮೌಳಿ.

ರಾಜಮೌಳಿ ಅವರು ಈ ಸಿನಿಮಾಗಾಗಿ ಮಹೇಶ್‌ ಬಾಬು ಅವರ ಲುಕ್‌ ಮತ್ತು ಮ್ಯಾನರಿಸಂ ಬದಲಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್‌ ಭರದಿಂದ ಸಾಗಿದ್ದು, ಈ ಡೈನಾಮಿಕ್ ಜೋಡಿ ತೆರೆ ಮೇಲೆ ಬರುವುದನ್ನು ಸಿನಿಪ್ರಿಯರು ಕಾಯುತ್ತಿದ್ದಾರೆ. ರಾಜಮೌಳಿ ಜತೆಗಿನ ಈ ಚಿತ್ರ ಮಹೇಶ್‌ ಬಾಬು ಅವರ 29ನೇ ಸಿನಿಮಾ ಆಗಿದೆ. ತಾತ್ಕಾಲಿಕವಾಗಿ SSMB29 ಹೆಸರು ನೀಡಲಾಗಿದೆ. ಮತ್ತು ಈ ಸಿನಿಮಾದಲ್ಲಿ ಆರ್‌ಆರ್‌ಆರ್‌ಗಿಂತ ಹೆಚ್ಚು ವಿಎಫ್‌ಎಕ್ಸ್‌ ತಂತ್ರಜ್ಞಾನ ಬಳಸಲಿದ್ದಾರೆ ಎನ್ನಲಾಗುತ್ತಿದೆ.

ರಾಜಮೌಳಿ, ಕೆ.ಎಲ್‌. ನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅರಣ್ಯದಲ್ಲೇ ಚಿತ್ರೀಕರಣ ಮಾಡುವುದೆಂದರೆ ರಾಜಮೌಳಿಗೆ ಇಷ್ಟ. ಈ ಸಿನಿಮಾದಲ್ಲಿ ಕಾಡಿನ ದೃಶ್ಯಗಳು ಫೋಕಸ್‌ ಎನ್ನಲಾಗುತ್ತಿರುವುದರಿಂದ ಸಿನಿಮಾ ಪ್ರಿಯರ ಕ್ರೇಜ್‌ ಹೆಚ್ಚಾಗಿದೆ.

Exit mobile version