Site icon Vistara News

Sunil Shetty : ಹೊಸ ಫುಡ್‌ ಡೆಲಿವರಿ ಆ್ಯಪ್‌ಗೆ ಸುನಿಲ್‌ ಶೆಟ್ಟಿಯಿಂದ ಚಾಲನೆ; ಸ್ವಿಗ್ಗಿ, ಜೊಮೆಟೋಗಿಂತ ಅಗ್ಗ

#image_title

ಮುಂಬೈ: ಫುಡ್‌ ಡೆಲಿವರಿ ಮಾಡುವ ಜೊಮೆಟೊ, ಸ್ವಿಗ್ಗಿ ಆ್ಯಪ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳಲಾಗುತ್ತಿದೆ ಎನ್ನುವ ದೂರು ಹಲವಾರು ತಿಂಗಳುಗಳಿಂದಲೂ ಇದೆ. ಇದನ್ನೇ ತಲೆಯಲ್ಲಿಟ್ಟುಕೊಂಡು ಇದೀಗ ಮತ್ತೊಂದು ಡೆಲಿವರಿ ಆ್ಯಪ್‌ ತಯಾರಾಗಿದೆ. ಅದರಲ್ಲಿ ಈ ಎರಡೂ ಆ್ಯಪ್‌ಗಳಿಗಿಂತ ಶೇ.15-20 ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುವುದಾಗಿ ಹೇಳಲಾಗಿದೆ.

ಟೆಕ್ ಉದ್ಯಮಿಗಳಾದ ಅನಿರುಧಾ ಕೋಟ್ಗಿರೆ ಮತ್ತು ಮಂದರ್ ಲಾಂಡೆ ಅವರು ಸ್ಥಾಪಿಸಿದ ಡೆಸ್ಟೆಕ್ HORECA ಸಂಸ್ಥೆಯ ವತಿಯಿಂದ Waayu (ವಾಯು) ಹೆಸರಿನಲ್ಲಿ ಫುಡ್‌ ಡೆಲಿವರಿ ಆ್ಯಪ್‌ ಆರಂಭಿಸಲಾಗಿದೆ. ಈ ಆ್ಯಪ್‌ ಮುಂಬೈ ಮೂಲದ ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (AHAR) ಮತ್ತು ಇತರ ಉದ್ಯಮ ಸಂಸ್ಥೆಗಳ ಬೆಂಬಲವನ್ನು ಹೊಂದಿದೆ. ಈ ಆ್ಯಪ್‌ನಲ್ಲಿ ಮುಂಬೈನ ಪ್ರಸಿದ್ಧ ಭಗತ್ ತಾರಾಚಂದ್, ಮಹೇಶ್ ಲಂಚ್ ಹೋಮ್, ಬನಾನಾ ಲೀಫ್, ಶಿವ ಸಾಗರ್, ಗುರು ಕೃಪಾ, ಕೀರ್ತಿ ಮಹಲ್, ಪರ್ಷಿಯನ್ ದರ್ಬಾರ್ ಮತ್ತು ಲಾಡು ಸಾಮ್ರಾಟ್ ಸೇರಿದಂತೆ 1,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಂದ ಫುಡ್‌ ಆರ್ಡರ್‌ ಮಾಡಬಹುದಾಗಿದೆ.

ಇದನ್ನೂ ಓದಿ: Sunil Shetty | 60 ದಾಟಿದರೂ ಚಿರತಾರುಣ್ಯದ ಸುನಿಲ್‌ ಶೆಟ್ಟಿ ಫಿಟ್‌ನೆಸ್‌ ಮಂತ್ರ ಇದು!
ಅಂದ ಹಾಗೆ ಈ ವಾಯು ಫುಡ್‌ ಡೆಲಿವರಿ ಆಪ್‌ಗೆ ಬಾಲಿವುಡ್‌ ನಟ, ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಅವರ ಮಾವ ಸುನಿಲ್‌ ಶೆಟ್ಟಿ (Sunil Shetty) ಅವರೇ ರಾಯಭಾರಿಯಾಗಿದ್ದಾರೆ. ಅವರೇ ಈ ಆ್ಯಪ್‌ನ್ನು ಲೋಕಾರ್ಪಣೆಗೊಳಿಸಿದ್ದಾರೆ ಕೂಡ.

ಈ ಆ್ಯಪ್‌ನಲ್ಲಿ ರೆಸ್ಟೋರೆಂಟ್‌ಗಳಿಗೆ ಶುಲ್ಕಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ರೆಸ್ಟೋರೆಂಟ್‌ಗಳ ನಡುವೆಯೇ ಸ್ಪರ್ಧೆ ಉಂಟಾಗಲಿದ್ದು, ಕಡಿಮೆ ಬೆಲೆಯಲ್ಲಿ ಉನ್ನತ ಮಟ್ಟದ ಆಹಾರ ಗ್ರಾಹಕರ ಕೈ ಸೇರಲಿದೆ ಎಂದು ಹೇಳಲಾಗಿದೆ. ಸದ್ಯ ಮುಂಬೈಗೆ ಸೀಮಿತವಾಗಿರುವ ಆ್ಯಪ್‌ನ್ನು ಇನ್ನು ಕೆಲ ತಿಂಗಳುಗಳಲ್ಲಿ ಬೇರೆ ಬೇರೆ ನಗರಗಳಿಗೂ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Salman Khan ಗೂ ಇದ್ದವು ಕಷ್ಟದ ದಿನಗಳು, ದುಡ್ಡಿಲ್ಲದಾಗ ಶರ್ಟ್ ಕೊಡಿಸಿದ್ದ ಸುನಿಲ್‌ ಶೆಟ್ಟಿ!
ಗೂಗಲ್‌ ಪ್ಲೇಸ್ಟೋರ್‌ನಿಂದ ವಾಯು ಆಪ್‌ನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದಾಗಿದೆ. ಇದರಲ್ಲಿ ಆರ್ಡರ್‌ ಮಾಡಿದಾಗ UPI, Paytm, Google Pay, ನೆಟ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಹಣವನ್ನು ಪಾವತಿಸಬಹುದಾಗಿದೆ.

Exit mobile version