Site icon Vistara News

Sunny Deol : ನಟನೆಯೊಂದೇ ಅಲ್ಲ, ಸನ್ನಿ ಡಿಯೋಲ್‌ ಆದಾಯ ಮೂಲಗಳು ಎಷ್ಟಿವೆ ನೋಡಿ!

Sunny Deol income

ಮುಂಬೈ: ಸನ್ನಿ ಡಿಯೋಲ್‌ (Sunny Deol) ನಟನೆಯ ಗದರ್‌ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಿದೆ. ಸಿನಿಮಾದ ಗಳಿಕೆ ಬುಧವಾರ 400 ಕೋಟಿ ರೂ. ದಾಟಿದೆ. ಸದ್ಯದಲ್ಲೇ ಸಿನಿಮಾದ ಗಳಿಕೆ 500 ಕೋಟಿ ರೂ. ದಾಟಲಿದ್ದು, ಶಾರುಖ್‌ ಖಾನ್‌ ಅವರ ಪಠಾಣ್‌ ಸಿನಿಮಾವನ್ನೂ ಮೀರಿ, ಗದರ್‌ 2 ಬಾಲಿವುಡ್‌ನ ಅತ್ಯಂತ ಹೆಚ್ಚು ಗಳಿಕೆಯ ಸಿನಿಮಾ ಎನ್ನುವ ಖ್ಯಾತಿ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಅಂದ ಹಾಗೆ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸಿರುವವರು ಸನ್ನಿ ಡಿಯೋಲ್‌. ಅವರೀಗ 50 ಕೋಟಿಗೂ ಮೀರಿದ ಸಾಲದ ಹೊರೆ ಹೊತ್ತಿದ್ದಾರೆ. ಮುಂಬಯಿಯ ಜುಹುನಲ್ಲಿರುವ ಅವರ ಮನೆಯನ್ನು ಹರಾಜು ಹಾಕಲು ಇತ್ತೀಚೆಗೆ ಬ್ಯಾಂಕೊಂದು ಮುಂದಾಗಿದ್ದು ಭಾರಿ ಸುದ್ದಿಯಾಗಿತ್ತು. ಹಾಗಂತ ಅವರಿಗೆ ಆದಾಯವೂ ಇದೆ. ನಟನೆಯಿಂದ ಮಾತ್ರವಲ್ಲ, ಬೇರೆ ಬೇರೆ ಮೂಲಗಳಿಂದಲೂ ಅವರಿಗೆ ಆದಾಯ ಇದೆ. ಅವರ ಆದಾಯ ಮೂಲಗಳ ವಿವರ ಇಲ್ಲಿದೆ.

130 ಕೋಟಿ ರೂ. ನಿವ್ವಳ ಸಂಪತ್ತಿನ ಮೌಲ್ಯ ಹೊಂದಿರುವ ಸನ್ನಿ ಡಿಯೋಲ್‌ ಹಲವಾರು ಕ್ಷೇತ್ರಗಳಿಂದ ಆದಾಯ ತೆಗೆಯುತ್ತಿದ್ದಾರೆ. ಪ್ರೊಡಕ್ಷನ್‌ ಹೌಸ್‌ನಿಂದ ಹಿಡಿದು, ಹೋಟೆಲ್‌ ಉದ್ಯಮದವರೆಗೆ ಹಲವು ಕಡೆ ತಮ್ಮ ಅಸ್ತಿತ್ವ ಸಾಧಿಸಿಕೊಂಡಿದ್ದಾರೆ. ಅವರ ಆದಾಯದ ಮೂಲಗಳ ವಿವರ ಈ ಕೆಳಗಿನಂತಿವೆ ನೋಡಿ.

ಪ್ರೊಡಕ್ಷನ್‌ ಹೌಸ್‌

ಸನ್ನಿ ಡಿಯೋಲ್‌ ಅವರ ತಂದೆ ಧರ್ಮೇಂದ್ರ ಅವರು 1983ರಲ್ಲಿ ವಿಜಯತಾ ಫಿಲ್ಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಸ್ವಂತ ಪ್ರೊಡಕ್ಷನ್‌ ಹೌಸ್‌ ಸ್ಥಾಪಿಸಿದ್ದರು. ಈ ಬ್ಯಾನರ್‌ನಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಈ ಪ್ರೊಡಕ್ಷನ್‌ ಹೌಸ್‌ ಅನ್ನು ಧರ್ಮೇಂದ್ರ ಅವರು ನಡೆಸುತ್ತಿದ್ದಾರೆ. ಅದಲ್ಲದೆ ಸನ್ನಿ ಡಿಯೋಲ್‌ ಅವರು 1999ರಲ್ಲಿ ಸಿನಿಮಾ ನಿರ್ದೇಶನಕ್ಕೂ ಕಾಲಿಟ್ಟರು ಕೂಡ. ಸನ್ನಿ ಡಿಯೋಲ್‌ ಅವರ ಪುತ್ರ ಕರಣ್‌ ಡಿಯೋಲ್‌ ಅವರೂ ತಮ್ಮ ಕುಟುಂಬದ ಬ್ಯಾನರ್‌ ಅಡಿಯಲ್ಲೇ ನಟನೆಗೆ ಪದಾರ್ಪಣೆ ಮಾಡಿದ್ದಾರೆ.

ಡಬ್ಬಿಂಗ್‌ ಸ್ಟುಡಿಯೊ, ಪ್ರಿವ್ಯೂವ್‌ ಥಿಯೇಟರ್‌

ಪ್ರೊಡಕ್ಷನ್‌ ಹೌಸ್‌ ಮಾತ್ರವಲ್ಲದೆ ಸನ್ನಿ ಡಿಯೋಲ್‌ ಅವರು ಒಂದು ಡಬ್ಬಿಂಗ್‌ ಸ್ಟುಡಿಯೊ ಹಾಗೂ ಪ್ರಿವ್ಯೂವ್‌ ಥಿಯೇಟರ್‌ ಅನ್ನು ಹೊಂದಿದ್ದಾರೆ. ಮುಂಬೈನಲ್ಲಿರುವ ಅವರ ಜುಹು ನಿವಾಸದಲ್ಲೇ ಪ್ರಿವ್ಯೂವ್‌ ಥಿಯೇಟರ್‌ ಇದೆ.

ರೆಸ್ಟೋರೆಂಟ್‌

ಡಿಯೋಲ್‌ ಸಹೋದರರು ಎರಡು ಜನಪ್ರಿಯ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಕರ್ನಾಲ್‌ ಹೆದ್ದಾರಿಯಲ್ಲಿರುವ ಹೇ ಮ್ಯಾನ್‌ ಹಾಗೂ ಹರಿಯಾಣದಲ್ಲಿರುವ ಗರಂ ಧರಮ್‌ ಡಾಬಾ ಅವರಿಬ್ಬರದ್ದಾಗಿದೆ. ಅದಲ್ಲದೆ ಬಾಬಿ ಡಿಯೋಲ್‌ ಅವರು ಮುಂಬೈನ ಅಂಧೇರಿಯಲ್ಲಿ ಸಮ್‌ಪ್ಲೇಸ್‌ ಎಲ್ಸ್‌ ಹೆಸರಿನ ಜನಪ್ರಿಯ ರೆಸ್ಟೋರೆಂಟ್‌ ಅನ್ನೂ ಹೊಂದಿದ್ದಾರೆ.

ಬ್ರ್ಯಾಂಡ್‌ಗಳು

ಸನ್ನಿ ಡಿಯೋಲ್‌ ಅವರು ಹಲವಾರು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ಲಕ್ಸ್‌ ಕೋಜಿ, ಬಿಕೆಟಿ ಟೈರ್‌ಗಳು, ಮ್ಯಾಂಗೋ ಸಿಪ್‌, ಎಸ್ಕಾರ್ಟ್ಸ್ ಟ್ರಾಕ್ಟರ್‌ ಸೇರಿ ವಿವಿಧ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿರುವ ಅವರು ಅದರಿಂದಲೇ 2-3 ಕೋಟಿ ರೂ. ಆದಾಯವನ್ನು ಪ್ರತಿ ವರ್ಷ ಪಡೆಯುತ್ತಿದ್ದಾರೆ.

ನಿರ್ದೇಶನ

ಸನ್ನಿ ಡಿಯೋಲ್‌ ಅವರು ನಿರ್ದೇಶಕರಾಗಿಯೂ ಕೆಲಸ ಮಾಡಿ, ಆದಾಯ ಪಡೆದಿದ್ದಾರೆ. ದಿಲ್ಲಗಿ (1999), ಘಾಯಲ್ ಒನ್ಸ್ ಎಗೇನ್ (2016) ಮತ್ತು ಪಲ್ ಪಲ್ ದಿಲ್ ಕೆ ಪಾಸ್ (2019) ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.

ನಟನೆ

ಸನ್ನಿ ಡಿಯೋಲ್‌ ಅವರ ಮುಖ್ಯ ಆದಾಯದ ಮೂಲದಲ್ಲಿ ಅವರ ನಟನೆಯೂ ಸೇರಿದೆ. ಅವರು ಸಿನಿಮಾಗಳಿಂದ 5-6 ಕೋಟಿ ರೂ. ಪಡೆಯುತ್ತಾರೆ. ಅದಲ್ಲದೆ ಸಿನಿಮಾ ಗಳಿಸುವ ಲಾಭದಲ್ಲೂ ಪಾಲು ಪಡೆದುಕೊಳ್ಳುತ್ತಾರೆ. ಅವರು ಗದರ್‌ 2 ಸಿನಿಮಾಕ್ಕಾಗಿ 8 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನುವ ಸುದ್ದಿಯಾಗಿತ್ತು. ಹಾಗೆಯೇ ಸಿನಿಮಾ ಗಳಿಸಿದ ಲಾಭದಲ್ಲೂ ಪಾಲು ಪಡೆದಿದ್ದಾರೆ ಎನ್ನಲಾಗುತ್ತಿದೆ.

Exit mobile version