Site icon Vistara News

Sunny Leone: ಸನ್ನಿ ಲಿಯೋನ್ ಬೇಕೇಬೇಕೆಂದು ವಿದ್ಯಾರ್ಥಿಗಳ ಪಟ್ಟು; ಕೇರಳ ವಿವಿಗೆ ಇಕ್ಕಟ್ಟು!

Sunny Leone

ತಿರುವಂತನಂತಪುರ: ಇತ್ತೀಚೆಗೆ ನಡೆದ ಕಾಲ್ತುಳಿತದ ಹಿನ್ನೆಲೆಯಲ್ಲಿ ಕೇರಳ (kerala) ಸರ್ಕಾರವು ಹೊರಗಿನ ಡಿಜೆ ಪಾರ್ಟಿಗಳು (DJ party) ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ರಾತ್ರಿ ಸಂಗೀತ ಕಾರ್ಯಕ್ರಮಗಳನ್ನು (music event) ನಿಷೇಧಿಸಿತ್ತು. ಆದರೂ ಬಾಲಿವುಡ್ ನಟಿ (bollywood actress) ಸನ್ನಿ ಲಿಯೋನ್ (Sunny Leone) ಅವರ ನೃತ್ಯ (dance) ಕಾರ್ಯಕ್ರಮಕ್ಕೆ ಕೇರಳ ವಿಶ್ವವಿದ್ಯಾಲಯ (kerala university) ವಿದ್ಯಾರ್ಥಿಗಳು ತಯಾರಿ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ಅನುಮತಿ ನಿರಾಕರಿಸಿದೆ.

ಕೇರಳ ರಾಜಧಾನಿ ತಿರುವನಂತಪುರಂನ ಕಾರ್ಯವಟ್ಟಂನ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ನೃತ್ಯ ಪ್ರದರ್ಶನ ಜುಲೈ 5ರಂದು ಆಯೋಜಿಸಲಾಗಿತ್ತು. ಆದರೆ ಅದಕ್ಕೂ ಮುನ್ನ ಕೇರಳ ವಿಶ್ವವಿದ್ಯಾಲಯ ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.

ಕೇರಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಮೋಹನನ್ ಕುನ್ನುಮ್ಮಾಲ್ ಅವರು ಈ ಕಾರ್ಯಕ್ರಮವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಕಾರ್ಯಕ್ರಮದ ಪಟ್ಟಿಯಲ್ಲಿ ವಿಶ್ವವಿದ್ಯಾನಿಲಯವು ಮಿಸ್ ಲಿಯೋನ್ ಅವರ ಪ್ರದರ್ಶನವನ್ನು ಸೇರಿಸದಂತೆ ನೋಡಿಕೊಳ್ಳಲು ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದ್ದಾರೆ. ಕ್ಯಾಂಪಸ್ ಒಳಗೆ ಅಥವಾ ಹೊರಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಒಕ್ಕೂಟಕ್ಕೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನಡೆಸಲು ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವಲ್ಲಿ ಕಾಲೇಜು ಒಕ್ಕೂಟವೂ ವಿಫಲವಾಗಿದೆ ಎನ್ನಲಾಗಿದೆ.

ಯಾಕೆ ನಿಷೇಧ?

ಕೊಚ್ಚಿನ್‌ನ ವಿಶ್ವವಿದ್ಯಾನಿಲಯದಲ್ಲಿ ನೂಕುನುಗ್ಗಲು ಸಂಭವಿಸಿ ಹಲವು ವಿದ್ಯಾರ್ಥಿಗಳ ಸಾವು ಸಂಭವಿಸಿದ ನಂತರ ರಾಜ್ಯ ಸರ್ಕಾರವು ಕಾಲೇಜು ಕ್ಯಾಂಪಸ್‌ಗಳಲ್ಲಿ ಹೊರಗಿನ ಡಿಜೆ ಪಾರ್ಟಿಗಳು, ರಾತ್ರಿ ಸಂಗೀತ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಕಳೆದ ವರ್ಷ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (CUSAT) ಕಾಲ್ತುಳಿತದಲ್ಲಿ ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 64 ಮಂದಿ ಗಾಯಗೊಂಡಿದ್ದರು. ಕ್ಯಾಂಪಸ್‌ನ ಬಯಲು ಸಭಾಂಗಣದಲ್ಲಿ ನಡೆದ ನಿಖಿತಾ ಗಾಂಧಿ ನೇತೃತ್ವದ ಸಂಗೀತ ಕಛೇರಿಯಲ್ಲಿ ಈ ದುರಂತ ಸಂಭವಿಸಿತ್ತು. ಪಾಸ್‌ಗಳನ್ನು ಹೊಂದಿರದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಮಳೆ ಪ್ರಾರಂಭವಾದಾಗ ಪರಿಸ್ಥಿತಿಯು ಬದಲಾಗಿತ್ತು. ಹೊರಗೆ ಕಾಯುತ್ತಿದ್ದ ಜನರು ಆಶ್ರಯಕ್ಕಾಗಿ ಸಭಾಂಗಣಕ್ಕೆ ನುಗ್ಗಿದರು. ಇದು ಕಾಲ್ತುಳಿತಕ್ಕೆ ಕಾರಣವಾಗಿ ದುರಂತ ನಡೆದಿತ್ತು.


ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಸನ್ನಿ ಲಿಯೋನ್

43 ವರ್ಷದ ಸನ್ನಿ ಲಿಯೋನ್ ಬಾಲಿವುಡ್ ಚಿತ್ರಗಳಾದ ಜಿಸ್ಮ್ 2, ಜಾಕ್‌ಪಾಟ್, ಶೂಟೌಟ್ ಅಟ್ ವಡಾಲಾ ಮತ್ತು ರಾಗಿಣಿ ಎಂಎಂಎಸ್ 2ನಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಏಪ್ರಿಲ್‌ನಲ್ಲಿ ಈ ಚಲನಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಇದರ ಮುಹೂರ್ತ ಸಮಾರಂಭದ ದೃಶ್ಯವನ್ನು ಹಂಚಿಕೊಂಡಿದ್ದ ಅವರು, ಈ ಅದ್ಭುತ ಮಲಯಾಳಂ ಚಿತ್ರದ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.

Exit mobile version