Site icon Vistara News

Sushant Singh | ನಟ ಸುಶಾಂತ್​ ಸಿಂಗ್‌​ರದ್ದು ಆತ್ಮಹತ್ಯೆಯಲ್ಲ ಕೊಲೆ; ಮರಣೋತ್ತರ ಪರೀಕ್ಷೆ ಮಾಡಿದಾತ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ!

Sushant Singh

ಮುಂಬಯಿ: ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸುಶಾಂತ್ ಮೃತದೇಹ​ 2020ರ ಜೂನ್​ 14ರಂದು ಮುಂಬಯಿಯ ಬಾಂದ್ರಾದ ಅಪಾರ್ಟ್​​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಿಬಿಐ ತನಿಖೆಯೂ ಪ್ರಾರಂಭವಾಯಿತು. ಸುಶಾಂತ್ ಸಾವಿನ ಕೇಸ್​​ನಲ್ಲಿ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಜೈಲು ಪಾಲಾಗಿ, ಸಿಬಿಐ ವಿಚಾರಣೆಗೆ ಒಳಪಟ್ಟಿದ್ದಾರೆ. ಸದ್ಯ ಜಾಮೀನಿನ ಆಧಾರದಲ್ಲಿ ಹೊರಗಿದ್ದಾರೆ.

ಇನ್ನು ಸುಶಾಂತ್​ ಸಾವಿನೊಂದಿಗೆ ಡ್ರಗ್ಸ್​ ಕೂಡ ಲಿಂಕ್​ ಹಾಕಿಕೊಂಡಿದ್ದು, ಎನ್​ಸಿಬಿ, ಸಿಬಿಐ ತನಿಖೆ ನಡೆಯುತ್ತಲೇ ಇದೆ. ಹಾಗೇ ಇಲ್ಲಿ ಹಣಕಾಸಿನ ವಿಷಯದ ನಂಟೂ ಇದ್ದಿದ್ದರಿಂದ ಇಡಿ ಕೂಡ ಹಲವರ ವಿಚಾರಣೆ ಮಾಡಿತ್ತು. ಒಂದು ಹಂತದಲ್ಲಿ ಸುಶಾಂತ್​​ರದ್ದು ಆತ್ಮಹತ್ಯೆ ಎಂದೂ ಹೇಳಲಾಗಿದೆ. ಆದರೆ ಸುಶಾಂತ್ ಕುಟುಂಬದವರು ಮಾತ್ರ, ಇದೊಂದು ಕೊಲೆ ಎಂದೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಸದ್ಯ ಈ ಕೇಸ್​​ನ ತನಿಖೆ ಯಾವ ಹಂತದಲ್ಲಿದೆ ಎಂಬುದು ಅಜ್ಞಾತ ಆಗಿರುವ ಹೊತ್ತಲ್ಲೇ ಒಂದು ಮಹತ್ವದ ವಿಷಯ ಬೆಳಕಿಗೆ ಬಂದಿದೆ. ‘ಸುಶಾಂತ್​ ಸಿಂಗ್​ ರಜಪೂತ್​ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ರೂಪ್​ಕುಮಾರ್ ಶಾ ಎಂಬುವರು ಹೇಳಿದ್ದಾರೆ.

ಸುಶಾಂತ್​ ಸಿಂಗ್​ ಮರಣೋತ್ತರ ಪರೀಕ್ಷೆ ನಡೆದ ಕೂಪರ್ ಆಸ್ಪತ್ರೆಯ ಪೋಸ್ಟ್​ಮಾರ್ಟಮ್​ ವಿಭಾಗದ ಸಿಬ್ಬಂದಿಯಾಗಿರುವ ರೂಪ್​ಕುಮಾರ್ ಶಾ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ ‘ಸುಶಾಂತ್​ ಸಿಂಗ್​ ರಜಪೂತ್​ ಮರಣೋತ್ತರ ಪರೀಕ್ಷೆ ವೇಳೆ ನಾನು ಇದ್ದೆ. ಅಂದು ಸುಶಾಂತ್​ ಮೃತಪಟ್ಟ ದಿನ ನಮ್ಮ ಆಸ್ಪತ್ರೆಗೆ ಒಟ್ಟು ಐದು ಮೃತದೇಹಗಳು ಬಂದಿದ್ದವು. ಒಟ್ಟು ಐದು ಶವಗಳಲ್ಲಿ ಒಂದು ವಿಐಪಿಯೊಬ್ಬರ ಮೃತದೇಹ ಎಂದು ಹೇಳಲಾಗಿತ್ತು. ಆದರೆ ಯಾರದ್ದು ಎಂದು ಗೊತ್ತಾಗಿರಲಿಲ್ಲ. ಬಳಿಕ ಅದು ಸುಶಾಂತ್​ ಸಿಂಗ್​ ರಜಪೂತ್​​ದು ಎಂಬುದು ಗೊತ್ತಾಯಿತು. ಶವ ಪರೀಕ್ಷೆ ವೇಳೆ ಅವರ ದೇಹವನ್ನ ನೋಡಿದಾಗ ಅಲ್ಲಿ ಅನೇಕ ಗಾಯದ ಗುರುತುಗಳು ಕಂಡುಬಂದವು. ಕುತ್ತಿಗೆಯ ಮೇಲೆ ಎರಡರಿಂದ ಮೂರು ಗಾಯದ ಗುರುತು ಇದ್ದವು. ಇಡೀ ಪೋಸ್ಟ್​ಮಾರ್ಟಮ್​​ನ್ನು ವಿಡಿಯೊ ರೆಕಾರ್ಡ್ ಮಾಡುವುದು ನಿಯಮ. ಆದರೆ ಹಿರಿಯ ಅಧಿಕಾರಿಗಳು ಅದು ಬೇಡ ಎಂದರು. ಕೆಲವು ಫೋಟೋಗಳನ್ನು ಮಾತ್ರ ತೆಗೆದಿಟ್ಟುಕೊಳ್ಳುವಂತೆ ಹೇಳಿದರು. ಹಾಗಾಗಿ ಅಷ್ಟನ್ನೇ ಮಾಡಿದೆವು’ ಎಂದು ತಿಳಿಸಿದ್ದಾರೆ.

‘ನಾನು ಅಂದು ಸುಶಾಂತ್​ ಸಿಂಗ್​ ಮೃತದೇಹ ನೋಡುತ್ತಿದ್ದಂತೆ ನನ್ನ ಹಿರಿಯ ಸಿಬ್ಬಂದಿಗೆ ಹೇಳಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದೇ ನನಗೆ ಅನ್ನಿಸುತ್ತಿದೆ ಎಂದು ತಿಳಿಸಿದೆ. ನಮ್ಮ ಆಸ್ಪತ್ರೆ ನಿಯಮದಂತೆ ಮಾಡೋಣ ಎಂಬ ಸಲಹೆಯನ್ನೂ ಕೊಟ್ಟೆ. ಆದರೆ ಅವರು ಒಪ್ಪಲಿಲ್ಲ. ಹೇಳಿದಷ್ಟು ಮಾಡು, ಎಷ್ಟಾಗತ್ತೋ ಅಷ್ಟು ಬೇಗ ಈ ಮೃತದೇಹವನ್ನು ಪೊಲೀಸರಿಗೆ ಒಪ್ಪಿಸಿಬಿಡೋಣ ಎಂದರು. ರಾತ್ರಿ ಹೊತ್ತಲ್ಲಿ ಪೋಸ್ಟ್​ಮಾರ್ಟಮ್​ ಮಾಡಿದೆವು’ ಎಂದು ರೂಪ್​ಕುಮಾರ್​ ತಿಳಿಸಿದ್ದಾರೆ. ಈಗ ಇವರು ಕೊಟ್ಟಿರುವ ಹೇಳಿಕೆ ತನಿಖೆಯನ್ನು ಇನ್ನೊಂದು ಸ್ವರೂಪಕ್ಕೆ ಕೊಂಡೊಯ್ಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:Drugs case: ನಟ ಸುಶಾಂತ್ ಸಿಂಗ್‌ ಡ್ರಗ್ಸ್‌ ವ್ಯಸನಕ್ಕೆ ಕುಮ್ಮಕ್ಕು ನೀಡಿದ್ದೇ ರಿಯಾ ಚಕ್ರವರ್ತಿ ಎಂದ ಎನ್‌ಸಿಬಿ

Exit mobile version