ಮುಂಬೈ: 2020ರ ಜೂನ್ 14 ಇಡೀ ದೇಶವನ್ನೇ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿತ್ತು. ಬಾಲಿವುಡ್‌ನ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಸಾವು ಅವರ ಅಭಿಮಾನಿಗಳಿಗಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ನೋವುಂಟು ಮಾಡಿತ್ತು. ಇಂದಿಗೆ ಸುಶಾಂತ್ ಸಿಂಗ್ ಸಾವಿಗೆ ಮೂರು ವರ್ಷಗಳು ತುಂಬಿವೆ. ಆದರೆ ಇಂದಿಗೂ ಆ ಸಾವಿನ ಹಿಂದಿನ ರಹಸ್ಯ ಬಯಲಾಗಿಲ್ಲ.
ಮುಂಬೈನ ನಿವಾಸದಲ್ಲಿ ಸುಶಾಂತ್ ಶವ ಸಿಕ್ಕಿದ್ದರಿಂದಾಗಿ ಬಾಂದ್ರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಅದು ಆತ್ಮಹತ್ಯೆ ಎಂದು ತಿಳಿದುಬಂದಿತ್ತು. ಆದರೆ ಇದು ಆತ್ಮಹತ್ಯೆ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಸುಶಾಂತ್ ಅವರ ಕುಟುಂಬ ಆರೋಪಿಸಿತ್ತು. ನಂತರ ಕೇಂದ್ರೀಯ ತನಿಖಾ ದಳ(ಸಿಬಿಐ) ಈ ಪ್ರಕರಣವನ್ನು ಕೈಗೆತ್ತಿಕೊಂಡಿತು.
ಇದನ್ನೂ ಓದಿ: Viral News: ಆನ್‌ಲೈನ್ ಮೀಟಿಂಗ್‌ಗೆ ಶರ್ಟ್ ಬಿಚ್ಚಿಕೊಂಡು ಹಾಜರಾದ ಸರ್ಕಾರಿ ಅಧಿಕಾರಿ ಸಸ್ಪೆಂಡ್
ದೆಹಲಿಯ ಏಮ್ಸ್ ಸುಶಾಂತ್ ಅವರ ವೈದ್ಯಕೀಯ ಪರೀಕ್ಷೆ ಮಾಡಿತು. ಆಗಲೂ ಸಹ ಇದು ಆತ್ಮಹತ್ಯೆ ಎಂದೇ ಹೇಳಲಾಯಿತು. ನಂತರ ಈ ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾದ ಕೈವಾಡವಿರುವುದೂ ಕಂಡುಬಂದಿದ್ದರಿಂದಾಗಿ ಎನ್‌ಸಿಬಿ ಈ ಪ್ರಕರಣವನ್ನು ತನ್ನ ಕೈಗೆ ಎತ್ತಿಕೊಂಡಿತು.
ಎನ್‌ಸಿಬಿ ಸಾಕಷ್ಟು ಜನರನ್ನು ತನಿಖೆ ಮಾಡಿತು. ಸುಶಾಂತ್ ಅವರ ಪ್ರಿಯತಮೆಯಾಗಿದ್ದ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರರ ಮೇಲೆ ಆರೋಪ ಹೆಚ್ಚಾಯಿತು. ರಿಯಾ ಅವರನ್ನು ಬಂಧನದಲ್ಲಿಯೂ ಇರಿಸಲಾಯಿತು. ಎನ್‌ಸಿಬಿ ಈ ಪ್ರಕರಣದಲ್ಲಿ ಒಟ್ಟು 33 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತು. ಬಂಧನದಲ್ಲಿದ್ದ ರಿಯಾ ಜಾಮೀನು ತೆಗೆದುಕೊಂಡು ಹೊರಬಂದರು. ಇದೀಗ ಆಕೆ ಎಂಟಿವಿ ರೋಡೀಸ್ ರಿಯಾಲಿಟಿ ಶೋ ಮೂಲಕ ತೆರೆಗೂ ವಾಪಸಾಗಿದ್ದಾರೆ.
ಇದನ್ನೂ ಓದಿ: Sushanth Singh | ದಿನಕ್ಕೆ ಎರಡೇ ತಾಸು ನಿದ್ರೆ ಮಾಡುತ್ತಿದ್ದ ಸುಶಾಂತ್! ನಟಿ ಕಿಯಾರಾ ಬಿಚ್ಚಿಟ್ಟ ಸತ್ಯ
ಮೂರು ವರ್ಷಗಳಾದರೂ ಸುಶಾಂತ್ ಸಾವಿನ ರಹಸ್ಯ ಮಾತ್ರ ಇನ್ನೂ ಬಯಲಾಗಿಲ್ಲ. ಸುಶಾಂತ್ ಸಾವಿಗೆ ಕೆಲವು ದಿನ ಮೊದಲು ಅವರ ಮಾಜಿ ಆಪ್ತ ಸಹಾಯಕಿ, ನಟಿ ದಿಶಾ ಸಾಲಿಯಾನ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಈ ಎರಡೂ ಪ್ರಕರಣಗಳು ಆತ್ಮಹತ್ಯೆಯದ್ದಲ್ಲ, ಕೊಲೆಯಾಗಿರುವುದು ಎಂದು ಇಂದಿಗೂ ಸುಶಾಂತ್ ಕುಟುಂಬ ಹೇಳುತ್ತಿದೆ. ಆದರೆ ಈ ಬಗ್ಗೆ ಯಾವುದೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ. ಸುಶಾಂತ್ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ತಿಳಿಯಲು 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.