Site icon Vistara News

Sushmita Sen: ಸುಶ್ಮಿತಾರನ್ನು ಕಾಡುತ್ತಿರುವ ಅಡಿಸನ್ಸ್‌ ಡಿಸೀಸ್:‌ ಏನಿದು?

Sushmita Sen addiction disease: What is it?

ಬೆಂಗಳೂರು: ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ (Sushmita Sen) ಅವರು ಹೃದಯಾಘಾತಕ್ಕೆ ಒಳಗಾಗಿರುವ ಸುದ್ದಿಯಿಂದಾಗಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ವಿಷಯ ಮತ್ತೊಮ್ಮೆ ಸದ್ದು ಮಾಡಿದೆ. ʻಫಿಟ್‌ ಆಗಿದ್ದರಲ್ಲ, ಆದರೂ ಹೀಗೇಕಾಯ್ತು?ʼ ಎಂಬ ಆತಂಕ ಮತ್ತೆ ಕೇಳಿ ಬರುತ್ತಿದೆ. ಸುಶ್ಮಿತಾ ಅವರನ್ನು ಕಾಡುತ್ತಿದ್ದ ʻಅಡಿಸನ್ಸ್‌ ಡಿಸೀಸ್‌ʼ ಎನ್ನುವ ಆಟೋಇಮ್ಯೂನ್‌ ಕಾಯಿಲೆಯಿಂದಾಗಿ ಅವರ ಹೃದಯಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಏನು ಕಾಯಿಲೆಯಿದು?

ಆಟೋಇಮ್ಯೂನ್‌ ಕಾಯಿಲೆಗಳೆಂದರೆ, ದೇಹದ ನಿರೋಧಕ ಶಕ್ತಿಯ ಅಸಮರ್ಪಕ ಕೆಲಸದಿಂದಾಗುವ ಅನಾಹುತಗಳು. ಅಂದರೆ, ತನ್ನದೇ ದೇಹದ ಭಾಗಗಳನ್ನು ಆಗಂತುಕರೆಂದು ಭಾವಿಸಿ ದೇಹದ ಪ್ರತಿರೋಧ ಶಕ್ತಿಯು ಅವುಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದಾಗಿ ಕೆಲವು ರೀತಿಯ ರೋಗಗಳು ಬರಬಹುದು. ಅದರಲ್ಲಿ ಸುಶ್ಮಿತಾ ಅವರಿಗಿರುವ ಕಾಯಿಲೆಯೂ ಒಂದು. ಮೂತ್ರಪಿಂಡದ ಮೇಲಿರುವ ಅಡ್ರೆನಲ್‌ ಗ್ರಂಥಿಗಳು ದೇಹಕ್ಕೆ ಅಗತ್ಯವಾದಷ್ಟು ಕಾರ್ಟಿಸೋಲ್ ಹಾರ್ಮೋನುಗಳನ್ನು ಉತ್ಪಾದನೆ ಮಾಡುವುದಿಲ್ಲ. ಈ ಹಾರ್ಮೋನುಗಳ ಕೊರತೆಯಿಂದಾಗಿ ಬರುವಂಥ ಕಾಯಿಲೆಯೇ ಸುಶ್ಮಿತಾರನ್ನು 2004ರಿಂದಲೇ ಕಾಡುತ್ತಿದ್ದ ಅಡಿಸನ್ಸ್‌ ಡಿಸೀಸ್.‌

ಇದನ್ನೂ ಓದಿ: ಲಲಿತ್‌ ಮೋದಿ ಜತೆ ಡೇಟಿಂಗ್‌: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್‌ ಹೇಳಿದ್ದೇನು?

ಕಾರ್ಟಿಸೋಲ್‌ ಚೋದಕಗಳ ಬಗ್ಗೆ

ಇವುಗಳನ್ನು ಸ್ಟ್ರೆಸ್‌ ಹಾರ್ಮೋನುಗಳೆಂದೇ ಕರೆಯಲಾಗುತ್ತದೆ. ಇವು ಮೂಲತಃ ನಮ್ಮ ದೇಹದಲ್ಲಿ ಉತ್ಪಾದನೆಯಾಗುವ ಸ್ಟೆರಾಯ್‌ ಚೋದಕಗಳು. ಈ ಹಾರ್ಮೋನುಗಳ ಉತ್ಪಾದನೆಯನ್ನು ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯು ನಿರ್ವಹಿಸುತ್ತದೆ. ಈ ಕಾರ್ಟಿಸೋಲ್‌ಗಳ ಉತ್ಪಾದನೆ ಕಡಿಮೆಯಾದರೆ, ಅಲ್ಡೊಸ್ಟೆರಾನ್‌ ಎಂಬ ಇನ್ನೊಂದು ಚೋದಕದ ಉತ್ಪತ್ತಿ ಕಡಿಮೆಯಾಗುತ್ತದೆ. ಇದು ಜೀವಕ್ಕೇ ಮಾರಕವಾಗಬಲ್ಲದು. ಹಾಗಾಗಿ ಸುಶ್ಮಿತಾ ಅವರಿಗೆ ಕೊರತೆ ಆದಂತಹ ಸ್ಟೆರಾಯ್ಡ್ ಚೋದಕವನ್ನು ಹಲವಾರು ವರ್ಷಗಳಿಂದ ಪೂರಕವಾಗಿ ನೀಡಲಾಗುತ್ತಿತ್ತು.

ಇವರೆಡರೂ ಹಾರ್ಮೋನುಗಳು ದೇಹದಲ್ಲಿ ರಕ್ತದ ಸರಿಯಾದ ಒತ್ತಡ ಕಾಪಾಡುವುದಕ್ಕೆ ಮತ್ತು ಹೃದಯವನ್ನು ರಕ್ಷಿಸುವುದಕ್ಕೆ ಮುಖ್ಯವಾದ ಕೆಲಸ ಮಾಡುತ್ತವೆ. ಈ ಚೋದಕಗಳ ಪ್ರಮಾಣ ಕುಸಿದರೆ ಹೃದಯದ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ (ಲೋ ಬಿಪಿ), ಹೃದಯದ ಅನಿಯಮಿತ ಬಡಿತ ಮತ್ತು ಹೃದಯ ಸ್ಥಂಬನಕ್ಕೂ ಕಾರಣವಾಗಬಲ್ಲದು ಎನ್ನುತ್ತದೆ ವೈದ್ಯಲೋಕ. ಇನ್ನು ಆಟೋ ಇಮ್ಯೂನ್‌ ರೋಗಗಳಿಂದಾಗಿ ರಕ್ತದೊತ್ತಡ, ಹೃದಯದ ಸಮಸ್ಯೆ, ಟೈಪ್‌ ೨ ಮಧುಮೇಹ ಮತ್ತು ಕಿಡ್ನಿ ಸಮಸ್ಯೆಗಳು ಬರಬಹುದು. ಅದರಲ್ಲೂ ಹೃದಯದ ಮಾಂಸಖಂಡಗಳ ಉರಿಯೂತ (ಮಯೋಕಾರ್ಡಿಯಂ) ಹೆಚ್ಚಾಗಿ ನರಳಿಸುವ ಸಮಸ್ಯೆ.

ಸ್ಟೆರಾಯ್ಡ್‌ ಹಾನಿಕಾರಕವೇ?

ಹೆಚ್ಚಿನ ಪ್ರಮಾಣದಲ್ಲಿ ದೀರ್ಘಕಾಲದವರೆಗೆ ಸ್ಟೆರಾಯ್ಡ್‌ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಅಡ್ಡಪರಿಣಾಮಗಳು ಖಂಡಿತಾ ಇವೆ. ಕೊಲೆಸ್ಟ್ರಾಲ್‌ ಮತ್ತು ರಕ್ತದೊತ್ತಡ ಹೆಚ್ಚುತ್ತದೆ, ರಕ್ತ ಹೆಪ್ಪುಗಟ್ಟಬಹುದು, ಹೃದ್ರೋಗದ ಭೀತಿಯಂತೂ ಇದ್ದೇಇದೆ. ಹಾಗಾಗಿ ದೀರ್ಘಕಾಲದಿಂದ ಸ್ಟೆರಾಯ್ಡ್‌ ತೆಗೆದುಕೊಳ್ಳುವವರು ಆರೋಗ್ಯದ ಮೇಲೆ ನಿಗಾ ಇಡಲೇಬೇಕಾದ್ದು ಅನಿವಾರ್ಯ. ದೇಹದಲ್ಲಿ ಉರಿಯೂತ ಇರುವವರಿಗೆ ಕಡಿಮೆ ಪ್ರಮಾಣದಲ್ಲಿ ಸ್ಟೆರಾಯ್ಡ್‌ ನುಂಗಿದರೂ ಆಪತ್ತು ಎದುರಾಗಬಹುದು. ರುಮಟಾಯ್ಡ್‌ ಆರ್ಥರೈಟಿಸ್‌, ಪಾರ್ಶ್ವವಾಯು, ಹೃದ್ರೋಗಗಳು ವಕ್ಕರಿಸಬಹುದು.

ಇದನ್ನೂ ಓದಿ: ಲಲಿತ್‌ ಮೋದಿ ಜತೆ ಡೇಟಿಂಗ್‌: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್‌ ಹೇಳಿದ್ದೇನು?

ಜೀವನಶೈಲಿಯ ಬಗ್ಗೆ ಪ್ರೀತಿ, ಆಸ್ಥೆ ಬೇಕು. ಸತ್ವಭರಿತ, ಸಮತೋಲಿತ ಆಹಾರ ಅಗತ್ಯ. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವುದು ಕಡ್ಡಾಯ. ಒತ್ತಡ ಇಲ್ಲದಂತೆ ಬದುಕು ನಿರ್ವಹಿಸುವುದು ಯಾವ ಔಷಧಿಯೂ ನೀಡದಂಥ ಟಾನಿಕ್ಕನ್ನು ಜೀವಕ್ಕೆ ನೀಡುತ್ತದೆ. ಅದರಲ್ಲೂ ಕೋವಿಡ್‌ ನಂತರದ ದಿನಗಳಲ್ಲಿ ಆಟೋ ಇಮ್ಯೂನ್‌ ರೋಗಗಳ ಪ್ರಮಾಣ ದಿಢೀರನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂಥ ಧನಾತ್ಮಕ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯಕರ.

Exit mobile version