ಬೆಂಗಳೂರು: ನಟಿ ಸುಶ್ಮಿತಾ ಸೇನ್ (Sushmita Sen) ಮತ್ತು ಅವರ ಮಾಜಿ ಗೆಳೆಯ ರೋಹ್ಮನ್ ಶಾಲ್ ಮುಂಬೈನಲ್ಲಿ ರಮೇಶ್ ತೌರಾನಿ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದರು. 2021ರಲ್ಲಿ ಸುಶ್ಮಿತಾ ಹಾಗೂ ರೋಹ್ಮನ್ ಶಾಲ್ ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ಮುಂಬೈನಲ್ಲಿ ಹಲವಾರು ಸಂದರ್ಭಗಳಲ್ಲಿ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಆದರೀಗ ವರದಿಗಳ ಪ್ರಕಾರ ಈ ಜೋಡಿ ಮತ್ತೆ ಒಂದಾಗಿದೆ ಎನ್ನಲಾಗುತ್ತಿದೆ.
ದೀಪಾವಳಿ ಪಾರ್ಟಿಯ ಪಾಪರಾಜಿ (ಫೋಟೊಗ್ರಾಫರ್ಗಳು) ಹಂಚಿಕೊಂಡಿರುವ ವಿಡಿಯೊದಲ್ಲಿ ಸುಶ್ಮಿತಾ ಮತ್ತು ರೋಹ್ಮಾನ್ ಕ್ಯಾಮೆರಾಗಳಿಗೆ ಸಂತೋಷದಿಂದ ಪೋಸ್ ನೀಡುತ್ತಿರುವುದು ಕಾಣಬಹುದು. ಸುಶ್ಮಿತಾ ಕಪ್ಪು ಸೀರೆಯಲ್ಲಿ ಮಿಂಚಿದರೆ, ರೋಹ್ಮನ್ ಹಸಿರು ಬ್ಲೇಜರ್ ಜತೆಗೆ ಬಿಳಿ ಕುರ್ತಾ-ಪೈಜಾಮಾ ಧರಿಸಿದ್ದರು. ರೋಹ್ಮನ್ ಅವರು ಸುಶ್ಮಿತಾ ಅವರ ಕೈಗಳನ್ನು ಹಿಡಿದು ಸೀರೆಯಲ್ಲಿ ನಡೆಯಲು ಸಹಾಯ ಮಾಡುವುದು ಸೆರೆಯಾಗಿದೆ. ನಂತರ ಸುಶ್ಮಿತಾ ಕೂಡ ಮಾಧ್ಯಮಗಳಿಗೆ ಸೋಲೋ ಪೋಸ್ ನೀಡಿದರು.
ಇತ್ತೀಚೆಗೆ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಅವರನ್ನು ಒಟ್ಟಿಗೆ ನೋಡಿದ ನೆಟ್ಟಿಗರು ʻʻಮತ್ತೊಮ್ಮೆ ಸಂಬಂಧಕ್ಕೆ ಮರಳಿದ್ದಾರೆಯೇ ಅಥವಾ ಸ್ನೇಹಿತರೇ? “ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಸುಶ್ಮಿತಾ ಅವರೇ ದಯವಿಟ್ಟು ರೋಹ್ಮನ್ ಅವರೊಂದಿಗೆ ಮದುವೆಯಾಗಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Sushmita Sen: ಜಿಮ್ ವರ್ಕೌಟ್ ಬಗ್ಗೆ ಸುಶ್ಮಿತಾ ಸೇನ್ ಹೇಳಿದ್ದೇನು: ಹೃದಯಾಘಾತ ಬಳಿಕ ವಿಡಿಯೊ ಹಂಚಿಕೊಂಡ ನಟಿ
ಡಿಸೆಂಬರ್ 2021ರಲ್ಲಿ, ಸುಶ್ಮಿತಾ ಅವರು ರೋಹ್ಮನ್ ಶಾಲ್ ಜತೆ ಮೂರು ವರ್ಷಗಳ ಸಂಬಂಧದ ಬಳಿಕ ತಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ಘೋಷಿಸಿದರು. ಬ್ರೇಕಪ್ ವಿಚಾರವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ನೊಂದಿಗೆ, “ನಾವು ಸ್ನೇಹಿತರಾಗಿ ಇರಲು ಇಚ್ಛಿಸಿದ್ದೇವೆ. ಬಹಳ ಕಾಲದ ಸಂಬಂಧವು ಮುಗಿದಿದೆ. ಪ್ರೀತಿ ಉಳಿದಿದೆʼʼಎಂದು ಶೇರ್ ಮಾಡಿಕೊಂಡಿದ್ದರು.
1994 ರಲ್ಲಿ ಭುವನ ಸುಂದರಿ ಕಿರೀಟ ತೊಟ್ಟಿದ್ದ ಸುಶ್ಮಿತಾ ಸೇನ್, ನಂತರ ಬಾಲಿವುಡ್ನಲ್ಲಿ ಮಿಂಚಿದ್ದರು. ಹಲವಾರು ಹಿಟ್ ಸಿನಿಮಾಗಳನ್ನೂ ನೀಡಿದ್ದರು. ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಸುಶ್ಮಿತಾ ಸೇನ್ ಜತೆಗೆ ಡೇಟಿಂಗ್ ನಡೆಸಿದ್ದರು. ಸುಶ್ಮೀತಾ ಸೇನ್ ಬಾಲಿವುಡ್ನ ಹೆಮ್ಮೆಯ ಸಿಂಗಲ್ ಪೇರೆಂಟ್ಗಳಲ್ಲಿ ಒಬ್ಬರು. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಲಹುತ್ತಿದ್ದಾರೆ. ಮದುವೆಯ ಕುರಿತು ಹೇಳಿಕೆ ನೀಡಿದ್ದ ಸೇನ್, ಇದುವರೆಗೆ ಮೂರು ಬಾರಿ ಮದುವೆಯಾಗುವ ಹಂತಕ್ಕೆ ತಾನು ಬಂದಿದ್ದು, ಈ ಸಂದರ್ಭದಲ್ಲೆಲ್ಲಾ ದೇವರೇ ನನ್ನನ್ನು ರಕ್ಷಿಸಿದ್ದ ಎಂದಿದ್ದರು.