-ಶಿವರಾಜ್ ಡಿ.ಎನ್.ಎಸ್
ಸ್ವಾತಿ ಮುತ್ತಿನ ಮಳೆಹನಿಯೇ. ಕಾದಂಬರಿ, ಕಥೆ ಅಷ್ಟೆಯಲ್ಲ ಒಂದು ಕವಿತೆಯೂ ಸಿನಿಮಾವಾಗಬಲ್ಲದು ಎನ್ನುವುದೇ ಅಚ್ಚರಿ! ಶ್ರೇಷ್ಠ ಕವಿ-ಬರಹಗಾರ, ಜಗತ್ತಿನ ಸರ್ವಶ್ರೇಷ್ಠ ನಾಟಕಕಾರ ‘ವಿಲಿಯಂ ಷೇಕ್ಸ್‌ಪಿಯರ್’ ಅನಾದಿಕಾಲದಲ್ಲೆ ಹೇಳಿದ್ದರು ಎನ್ನಲಾಗುವ ಒಂದು ಮಾತಿದೆ, ಪುರುಷರಲ್ಲಿ ಯಾವುದೇ ‘ಶಕ್ತಿ’ ಇಲ್ಲದಿರುವಾಗಲೂ ಮಹಿಳೆಯರು ಮನಸೋಲಬಲ್ಲರು ಅನ್ನುವಂಥದ್ದು. ಈ ಸಿನಿಮಾ ನೋಡುವಾಗ ಆ ಮಾತು ನೆನಪಾಯ್ತು.
ಮನುಷ್ಯರಾಗಿ ಹುಟ್ಟಿರುವ ನಾವೆಲ್ಲ ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಮರಿ ಗೆಳೆಯ ಗೆಳತಿ ಹೀಗೆ ಅನೇಕ ಭಾವನಾತ್ಮಕ ಸಂಬಂಧದೊಂದಿಗೆ ಸಮಾಜದಲ್ಲಿ ಬದುಕಿ ಬಾಳಿ ಒಂದು ದಿನ ಸಾಯುತ್ತೇವೆ. ಮನುಷ್ಯನಿಗೆ ತಾನು ಹೇಗೆ ಯಾವಾಗ ಸಾಯುತ್ತೇನೆ, ಸತ್ತಮೇಲೆ ಅವನ ದೇಹ ಏನಾಗುತ್ತದೆ ಅನ್ನೋ ಸಂಗತಿಗಳು ನಿಗೂಢ. ಆದರೆ ಅದೇ ಮನುಷ್ಯರಿಗೆ ತಾವು ಹೇಗೆ ಯಾವಾಗ ಸಾಯ್ತೇವೆ ಅನ್ನೋದು ಗೊತ್ತಾದಾಗ ಅದೂ ಕೇವಲ ಬೆರಳೆಣಿಕೆ ದಿನದೊಳಗೆ ಅನ್ನುವಾಗ ಆಗುವ ನೋವಿದೆಯಲ್ಲ, ಅದು ವರ್ಣನೆಗೆ ನಿಲುಕದ್ದು. ಆದರೆ ಅಂತಹ ದೃಶ್ಯಗಳು ಈ ಚಿತ್ರ ನೋಡುವಾಗ ಚಿಂತನೆಗೆ ಒಳಪಡುವಂತೆ ಮಾಡುತ್ತದೆ. ಅಷ್ಟೆ ಅಲ್ಲದೆ ಹೆಣ್ಣು ಗಂಡಿನ ಸಂಬಂಧದ ಕುರಿತಾದ ಕೆಲ ಸೂಕ್ಷ್ಮವಿಷಯಗಳನ್ನು ನಿರ್ದೇಶಕರು ನಾಜೂಕಾಗಿ ನೋಡುಗರಿಗೆ ಯಾವುದೇ ರೀತಿಯ ಮುಜುಗರ ಎನಿಸದಂತೆ ತೆರೆಗೆ ಎಳೆದಿದ್ದಾರೆ. ಸಾವು, ಕೆರೆದಂಡೆ, ಬೀದಿ ನಾಯಿ ಎಲ್ಲವೂ ಒಂದೊಂದು ರೀತಿಯ ರೂಪಕವಾಗಿ ಬಳಸಿ ಮಾತುಗಳಲ್ಲಿ ಹೆಣೆದಿದ್ದಾರೆ. ಗಂಡು ಹೆಣ್ಣಿನ ಸಂಬಂಧದ ಕುರಿತು ಹೇಳುವಾಗ ಸರಿ ತಪ್ಪು ಎನ್ನುವ ಯಾವುದೇ ರೀತಿಯ ತೀರ್ಪು ನೀಡದೆ ಸೂಕ್ಷ್ಮವಾಗಿ ಪ್ರಬುದ್ಧತೆಯಿಂದ ನಿಭಾಯಿಸಿದ್ದಾರೆ.
ಇದನ್ನೂ ಓದಿ: Raj B Shetty | ʻಸ್ವಾತಿ ಮುತ್ತಿನ ಮಳೆ ಹನಿಯೇʼ ಫಸ್ಟ್ ಪೋಸ್ಟರ್ ರಿವೀಲ್!
ಚಿತ್ರದ ಮಖ್ಯಪಾತ್ರವಾಗಿರುವ ‘ಪ್ರೇರಣಾ’ ‘ಆಸರೆ’ ಎನ್ನುವ ಆರೋಗ್ಯ ಕೇಂದ್ರದಲ್ಲಿ ಕೌನ್ಸೆಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೋ ಕಾಯಿಲೆಗೆ ತುತ್ತಾಗಿ ಬದುಕಿನ ಕೊನೆಯ ಹಂತ ತಲುಪಿ ಅಲ್ಲಿ ದಾಖಲಾಗಿರುವವರು ದಾಖಲಾಗುವವರು ಬದುಕುವುದಿಲ್ಲ ಎಂದು ತಿಳಿದಿದ್ದರೂ ಅವರಲ್ಲಿ ಮನೋಧೈರ್ಯ ತುಂಬುವ ಕಾಯಕ ಅವರದ್ದು. ಆದರೆ ಮದುವೆಯಾಗಿರುವ ಆಕೆಯ ವೈಯಕ್ತಿಕ ಜೀವನವೇ ಸುಖ ದುಃಖ ಹರ್ಷೋದ್ಗಾರವಿಲ್ಲದೆ ಒಂದು ರೀತಿಯ ಮೂಕಿಚಿತ್ರದ ನಾಯಕಿಯಂತಾಗಿ ಬದುಕಿದ್ದಾಳೆ. ಹೀಗಿರುವಾಗ ಆಸರೆ ಆರೋಗ್ಯ ಕೇಂದ್ರಕ್ಕೆ ತನ್ನ ಜೀವನದ ಕೊನೆಯ ಹಂತ ತಲುಪಿರುವ ಅನಿಕೇತ್ ಬರುತ್ತಾನೆ. ನಂತರ ‘ಪ್ರೇರಣಾ’ಳಲ್ಲಿ ಜೀವನದಲ್ಲಿ ಆಗುವ ಬದಲಾವಣೆಗಳೇನು, ಅನಿಕೇತ್ ಏನಾಗುತ್ತಾನೆ, ಅಲ್ಲಿರುವ ಅನೇಕ ರೋಗಿಗಳ ಕತೆಗಳೇನು ಎನ್ನುವುದೆಲ್ಲ ಚಿತ್ರದಲ್ಲಿದೆ. ಇದೊಂದು ಕಾವ್ಯಾತ್ಮಕ ಸಿನಿಮಾವಾಗಿದ್ದು, ಮೌನವು ಮಾತಾಡುತ್ತದೆ. ಮಳೆಹನಿ, ಹೂವು, ಕೆರೆದಂಡೆ, ಮಂಜಾನೆ – ಮುಸ್ಸಂಜೆಗಳೆಲ್ಲ ವಿಶೇಷವಾಗಿ ಕಾಣುತ್ತವೆ.
ಇದನ್ನೂ ಓದಿ: Raj B Shetty | ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದ ರಾಜ್ ಬಿ ಶೆಟ್ಟಿ ಲುಕ್ ರಿವೀಲ್!
ಚಿತ್ರಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಹಾಗೂ ರವಿ ರೈ ಕಳಸ, ವಚನ ಶೆಟ್ಟಿ ನಿರ್ಮಾಣಮಾಡಿದ್ದು, ರಾಜ್ ಬಿ ಶೆಟ್ಟಿ ಅವರು ಬರೆದು ನಿರ್ದೇಶನ ಮಾಡುವುದರ ಜತೆಗೆ ಅನಿಕೇತ್ ಎನ್ನುವ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಪ್ರೇರಣಾ ಪಾತ್ರದಲ್ಲಿ ಸಿರಿ ರವಿಕುಮಾರ್, ಡಾಕ್ಟರ್ ಮನಮೋಹನ್ ಪಾತ್ರದಲ್ಲಿ ಬಾಲಾಜಿ ಮನೋಹರ್, ಪ್ರೇರಣಾಳ ಗಂಡನ ಪಾತ್ರದಲ್ಲಿ ಸೂರ್ಯ ವಸಿಷ್ಠ, ಅಮ್ಮನ ಪಾತ್ರದಲ್ಲಿ ರೇಖಾ ಕೂಡ್ಲಿಗಿ ಮಾಡಿದ್ದಾರೆ. ಸ್ನೇಹಾ ಶರ್ಮಾ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ, ಸಂಧ್ಯಾ ಅರಕೆರೆ ಮುಂತಾದ ಕಲಾವಿದರೆಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರಕ್ಕ ಪ್ರವೀಣ್ ಶ್ರೀಯಾನ್ ಅವರ ಛಾಯಗ್ರಹಣವಿದ್ದು, ಮಿಧುನ್ ಮುಕುಂದನ್ ಅವರ ಸಂಗೀತವಿದೆ. ಪೃಥ್ವಿಯವರ ಸಾಹಿತ್ಯ, ಮಾಧುರಿ ಶೇಷಾದ್ರಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ‘ಮೆಲ್ಲಗೆ ಧ್ಯಾನಿಸು ಚಂದವೇ ಪ್ರೀತಿಸು’ ಹಾಡು ಧ್ಯಾನಿಸಿದರೆ ಎದೆಗಿಳಿದುಳಿದುಬಿಡುತ್ತದೆ.
ಸುಮಧುರ ಸಂಗೀತ ಆಲಾಪ, ಧ್ವನಿ , ದೃಶ್ಯ ಎಲ್ಲವೂ ವಾವ್ ಅನಿಸಿಕೊಳ್ಳುತ್ತವೆ. ಇದು ಕೇವಲ ಮನರಂಜನೆಯ ಸಿನಿಮಾವಲ್ಲ, ಪ್ರೀತಿಪೂರ್ವಕ ಬದುಕು ಬವಣೆ ನೋವು ನಲಿವಿನ ನವಿರಾದ ದೃಶ್ಯಕಾವ್ಯ. ಕೊಂಚ ತಾಳ್ಮೆ ಬೇಡುತ್ತದೆ. ಆದರೆ ಕನೆಕ್ಟ್ ಆದರೆ ಖಂಡಿತ ಹೃದಯ ಸ್ಪರ್ಶಿಸುತ್ತದೆ. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ಆಸಕ್ತರೇ ಗಮನಿಸಿ. ಮೆಲ್ಲಗೆ ಧ್ಯಾನಿಸಿ ಚಂದವ ಪ್ರೀತಿಸಿ.