ಮುಂಬೈ: ನಟ, ನಟಿಯರು ಬಣ್ಣ ಹಚ್ಚಿದ ಮೇಲೆ ಆ ಪಾತ್ರದೊಳಗೇ ಮುಳುಗಿಹೋಗಿಬಿಡುತ್ತಾರೆ. ಆದರೂ ಅವರ ಲುಕ್ ನೋಡಿದರೆ ಅವರು ಯಾವ ನಟರು ಎಂದು ಹೇಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಈ ಫೋಟೋ ನೋಡಿದರೆ ನಟನನ್ನು ಗುರುತು ಹಿಡಿಯುವುದು ಕಷ್ಟ ಸಾಧ್ಯ. ವೆಬ್ ಸೀರಿಸ್ ಒಂದರಲ್ಲಿ (Taj Web Series) ಸೂಫಿ ಸಂತರಾಗಿ ಕಾಣಿಸಿಕೊಳ್ಳುತ್ತಿರುವ ಈ ನಟ ಯಾರೆಂದು ತಿಳಿಯಿತೇ?
ಇದನ್ನೂ ಓದಿ: Viral News : ಈ ವ್ಯಕ್ತಿಯ ಪಿಎಚ್ಡಿ ಪದವಿಗೆ ತಗುಲಿದ್ದು ಬರೋಬ್ಬರಿ 50 ವರ್ಷ!
ಈ ಫೋಟೋ ಮೊಘಲ್ ಸಾಮ್ರಾಜ್ಯವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ವೆಬ್ ಸೀರಿಸ್ ‘ತಾಜ್’ನ ಫೋಟೋ. ಅದರಲ್ಲಿ ಸೂಫಿ ಸಂತ ಸಲೀಂ ಚಿಶ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟ ಬೇರಾರೂ ಅಲ್ಲ, ಹಿಂದಿಯ ಪ್ರಸಿದ್ಧ ಹಿರಿಯ ನಟ ಧರ್ಮೇಂದ್ರ. ತಮ್ಮ ಫಸ್ಟ್ ಲುಕ್ ಫೋಟೋ ಹಂಚಿಕೊಂಡಿರುವ ನಟ, “ಸ್ನೇಹಿತರೇ, ನಾನು ತಾಜ್ ಚಿತ್ರದಲ್ಲಿ ಶೇಖ್ ಸಲೀಂ ಚಿಶ್ತಿ ಹೆಸರಿನ ಸೂಫಿ ಸಂತನಾಗಿ ನಟಿಸುತ್ತಿದ್ದೇನೆ. ಚಿಕ್ಕದಾದರೂ ಮಹತ್ವದ ಪಾತ್ರ. ನಿಮ್ಮ ಶುಭ ಹಾರೈಕೆಗಳು ಬೇಕು” ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಮತ್ತೊಂದು ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಈ ವೆಬ್ ಸೀರಿಸ್‌ನಲ್ಲಿ ನಾಸೀರುದ್ದೀನ್ ಶಹಾ ಅವರು ರಾಜ ಅಕ್ಬರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನಾರ್ಕಲಿಯಾಗಿ ಅದಿತಿ ರಾವ್ ಹೈದರಿ ಮತ್ತು ಪ್ರಿನ್ಸ್ ಸಲೀಂ ಆಗಿ ಆಶಿಮ್ ಗುಲಾಟಿ ನಟಿಸಿದ್ದಾರೆ. ಸಂಧ್ಯಾ ಮೃದುಲ್, ತಾಹಾ ಶಾ, ರಾಹುಲ್ ಬೋಸ್ ಮತ್ತು ಶುಭಂ ಕುಮಾರ್ ಮೆಹ್ರಾ ಕೂಡ ಬಣ್ಣ ಹಚ್ಚಿದ್ದಾರೆ. ರೊನಾಲ್ಡ್ ಸ್ಕಾಲ್ಪೆಲ್ಲೋ ಅವರು ಈ ಸೀರಿಸ್ ಅನ್ನು ನಿರ್ದೇಶಿಸಿದ್ದಾರೆ. “ಈ ಅದ್ಭುತ ಕೃತಿಯು ನಮ್ಮ ವೀಕ್ಷಕರನ್ನು ಪ್ರಚೋದಿಸುತ್ತದೆ ಮತ್ತು ಮನರಂಜಿಸುತ್ತದೆ” ಎಂದು ಚಿತ್ರತಂಡ ಹೇಳಿದೆ.
ಧರ್ಮೇಂದ್ರ ಅವರು ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ಈ ಚಿತ್ರದಲ್ಲಿದ್ದಾರೆ. ಈ ಚಿತ್ರವು ಜುಲೈ 28ರಂದು ಥಿಯೇಟರ್‌ಗಳಿಗೆ ಬರಲಿದೆ.