ಮುಂಬಯಿ: ನಟ ಆಮೀರ್ ಖಾನ್ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ ಕೊಟ್ಟಿದ್ದಾರೆ. ನಟನೆಯಿಂದ ಕೆಲ ಸಮಯದವರೆಗೆ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಆಮೀರ್ ಖಾನ್ ವೃತ್ತಿ ಬದುಕಿನಲ್ಲಿ ಒಂದರ ಮೇಲೊಂದು ಸೋಲು ಕಾಣುತ್ತಿದ್ದಾರೆ. ತುಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದ ‘ಲಾಲ್ ಸಿಂಗ್ ಛಡ್ಡಾ’ ಬಹಿಷ್ಕಾರದ ಬಿಸಿ ಕಂಡಿತ್ತು. ಹಿಂದೊಮ್ಮೆ ಆಮೀರ್ ಖಾನ್ ಆಡಿದ್ದ ಭಾರತ ವಿರೋಧಿ ಮಾತುಗಳು ಅವರನ್ನು ಬೆಂಬಿಡದಂತೆ ಕಾಡುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲೂ ಜನರು ಆಮಿರ್ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ಈ ಬೆಳವಣಿಗೆ ಮಧ್ಯೆಯೇ ಆಮಿರ್ ಖಾನ್ ಈ ನಿರ್ಧಾರ ಘೋಷಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಆಮಿರ್ ಖಾನ್ ‘ನಾನು ನಟನೆಯಲ್ಲಿ ತೊಡಗಿಸಿಕೊಂಡಾಗ ನನಗೆ ಇನ್ನೇನೂ ನೆನಪಾಗುವುದಿಲ್ಲ. ಅದರಲ್ಲೇ ಕಳೆದು ಹೋಗುತ್ತೇನೆ. ಲಾಲ್ ಸಿಂಗ್ ಛಡ್ಡಾ ಸಿನಿಮಾ ಆದ ಬಳಿಕ ನಾನು ಚಾಂಪಿಯನ್ಸ್ ಎಂಬ ಸಿನಿಮಾ ಮಾಡಬೇಕಿತ್ತು. ಅದ್ಭುತ ಕಥೆಯನ್ನೊಳಗೊಂಡ ಸಿನಿಮಾ ಅದಾಗಿತ್ತು. ಹೃದಯಸ್ಪರ್ಶಿ ಲವ್ ಸ್ಟೋರಿ ಆಗಿತ್ತು. ಆ ಸಿನಿಮಾ ನಿರ್ಮಾಣ ಮಾಡಿ, ನಟಿಸಬೇಕು ಎಂದುಕೊಂಡಿದ್ದಾರೆ. ಆದರೆ ನನ್ನ ನಿರ್ಧಾರ ಬದಲಾಗಿದೆ. ನಟನೆಯಿಂದ ಕೆಲ ಕಾಲ ದೂರ ಉಳಿದು ಕುಟುಂಬದೊಂದಿಗೆ ಕಾಲ ಕಳೆಯಬೇಕು ಎಂದುಕೊಂಡಿದ್ದೇನೆ. ಮಕ್ಕಳೊಂದಿಗೆ, ತಾಯಿಯೊಂದಿಗೆ ಸಮಯ ಕಳೆಯುತ್ತೇನೆ’ ಎಂದು ಹೇಳಿದ್ದಾರೆ.
ನಾನು 35 ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕೆಲಸ ಹೊರತು ಪಡಿಸಿ ಇನ್ನೆಲ್ಲೂ ಮನಸನ್ನು ಕೇಂದ್ರೀಕರಿಸಲಿಲ್ಲ. ಈಗ ನನ್ನ ಕುಟುಂಬದ ಕಡೆ ಗಮನ ಕೊಡುವ ಸಮಯ ಬಂದಿದೆ. ಇಷ್ಟುದಿನ ಇದ್ದುದಕ್ಕಿಂತಲೂ ವಿಭಿನ್ನವಾದ ಜೀವನ ನಡೆಸಲು ಮನಸಾಗಿದೆ. ಮುಂದಿನ ಒಂದರಿಂದ ಒಂದೂವರೆ ವರ್ಷ ನಾನು ನಟನೆಯಲ್ಲಿ ಇರುವುದಿಲ್ಲ’ ಎಂದು ಆಮೀರ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: Har Ghar Tiranga | ಮನೆ ಬಾಲ್ಕನಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಆಮೀರ್ ಖಾನ್; ಮಗಳ ಸಾಥ್