ಹೈದರಾಬಾದ್: ದಕ್ಷಿಣ ಭಾರತದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಇನ್ನೂ ಮದುವೆಯಾಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. 33 ವರ್ಷಗಳಾದರೂ ವಿವಾಹವಾಗದ ಅವರ ಮದುವೆ ಬಗ್ಗೆ ಹಲವಾರು ಬಾರಿ ಸುದ್ದಿಯಾಗಿದೆ. ಆದರೆ ಇದೀಗ ನಟಿಯೇ ತನ್ನ ಪ್ರೀತಿಯ ಬಗ್ಗೆ ಬಾಯಿ ಬಿಟ್ಟಿದ್ದಾರೆ. ತಾನು ಪ್ರೀತಿ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಹೌದು. ತಮನ್ನಾ ಪ್ರೀತಿಯಲ್ಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಲಸ್ಟ್ ಸ್ಟೋರಿಸ್ 2 ವೆಬ್ ಸೀರಿಸ್‌ನಲ್ಲಿ ಅವರು ವಿಜಯ್ ವರ್ಮಾ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ತೆರೆ ಮೇಲೆ ಅವರನ್ನು ಪ್ರೀತಿಸುವುದಷ್ಟೇ ಅಲ್ಲದೆ ತೆರೆಯ ಹಿಂದೆ ಕೂಡ ಇವರು ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. ಈ ಜೋಡಿ ಹೊಸ ವರ್ಷದ ದಿನದಂದು ಗೋವಾದಲ್ಲಿ ಪರಸ್ಪರ ಚುಂಬಿಸಿಕೊಂಡಿದ್ದ ವಿಡಿಯೊಗಳು ಕೂಡ ಹರಿದಾಡಿದ್ದವು.
ಇದನ್ನೂ ಓದಿ: ನೋಡಲೇಬೇಕಾದ ಸಿನಿಮಾ: Where The Crawdads Sing; ಸ್ವತಂತ್ರ ಹೆಣ್ಣಿನ ಸಂಪೂರ್ಣ ಬದುಕಿನ ಚಿತ್ರಣ
ವಿಜಯ್ ವರ್ಮಾ ಅವರ ಜತೆಗಿನ ಪ್ರೀತಿ ಬಗ್ಗೆ ತಮನ್ನಾ ಮಾತನಾಡಿದ್ದಾರೆ. “ವಿಜಯ್‌ಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಅವರು ನನಗೆ ಸಂತೋಷವನ್ನು ತಂದುಕೊಡುತ್ತಾರೆ” ಎಂದು ಸಂಭ್ರಮದಿಂದ ಹೇಳಿಕೊಂಡಿದ್ದಾರೆ ತಮನ್ನಾ.
ಒಟ್ಟಿಗೆ ಕೆಲಸ ಮಾಡಿದ ಮಾತ್ರಕ್ಕೆ ಭಾವನಾತ್ಮಕವಾಗಿ ನಾವು ಕನೆಕ್ಟ್ ಆಗಿಬಿಡುವುದಿಲ್ಲ. ಆದರೆ ಕೆಲವರೊಂದಿಗೆ ಅತ್ಯಂತ ಆಳವಾಗಿ ಭಾವನಾತ್ಮಕವಾಗಿ ಬೆಸುಗೆ ಮಾಡಿಕೊಂಡುಬಿಡುತ್ತೇವೆ ಎಂದು ತಮನ್ನಾ ಅವರು ವಿಜಯ್ ವರ್ಮಾ ಅವರ ಕುರಿತಾಗಿ ಹೇಳಿದ್ದಾರೆ.
ನಟಿಯ ಈ ಮಾತುಗಳು ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳು ಮದುವೆ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಅಂತೂ ಹುಡುಗ ಸಿಕ್ಕಿದ್ದಾಯ್ತು, ಇನ್ನು ಯಾವಾಗ ಮದುವೆ ಆಗುತ್ತೀರಾ ಎಂದು ಕೇಳಲಾರಂಭಿಸಿದ್ದಾರೆ. ಆದರೆ ಸದ್ಯದ ಮಟ್ಟಿಗೆ ತಮನ್ನಾ ಅತ್ಯಂತ ಬಿಜಿ ಶೆಡ್ಯೂಲ್ ಹೊಂದಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಅವರ ಲಸ್ಟ್ ಸ್ಟೋರಿಸ್ 2 ಬಿಡುಗಡೆಯಾಗಬೇಕಿದ್ದರೆ, ಅಮೇಜಾನ್‌ನಲ್ಲಿ ʼಜೀ ಕರ್ದಾʼ ವೆಬ್ ಸೀರಿಸ್ ಬಿಡುಗಡೆಯಾಗಬೇಕಿದೆ. ಅದರ ಪ್ರಚಾರದಲ್ಲಿ ನಟಿ ಬಿಜಿ ಇದ್ದಾರೆ. ಅದಲ್ಲದೆ ಕೆಲವು ಸಿನಿಮಾಗಳು ಕೂಡ ಅವರ ಕೈಯಲ್ಲಿದೆ. ಹಾಗಾಗಿ ಮದುವೆ ಸದ್ಯದ ಮಾತಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Viral Video: ಮನೆಗೇ ಬರಲಿದೆ ಹಿಟ್ಟಿನ ಗಿರಣಿ; ಇದು 3 ಈಡಿಯಟ್ಸ್ ಸಿನಿಮಾದ ಫುನ್ಸುಕ್ ವಾಂಗ್ಡು ರಿಯಲ್ ಕತೆ
ಅದೇನೇ ಇರಲಿ, ಇಷ್ಟು ದಿನ ಒಬ್ಬಂಟಿಯಾಗಿದ್ದ ತಮನ್ನಾಗೆ ಅಂತೂ ಜೋಡಿಯೊಂದು ಸಿಕ್ಕಾಗಿದೆ. ಸದ್ಯದ ಮಟ್ಟಿಗೆ ಈ ಜೋಡಿಯ ಮದುವೆ ನೋಡುವುದಕ್ಕೆ ಕಾಯುವುದೇ ಅಭಿಮಾನಿಗಳ ಕೆಲಸವಾಗಿದೆ.