ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ನಟ ವಿಜಯ್ ವರ್ಮಾ ಅವರೊಂದಿಗೆ ಪ್ರೀತಿಯಲ್ಲಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಇದೀಗ ಅವರು ಪ್ರೀತಿಯಲ್ಲಿನ ರಾಜಿ ವಿಚಾರವಾಗಿ ಮಾತನಾಡಿದ್ದಾರೆ.
“ಪ್ರೀತಿಗಾಗಿ ಹೆಣ್ಣು ಮಕ್ಕಳು ತಮ್ಮ ಬದುಕಿನ ಭಾವನೆಗಳನ್ನೇ ರಾಜಿ ಮಾಡಿಕೊಳ್ಳಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ವಿಜಯ್ ಆ ರೀತಿಯವರಲ್ಲ” ಎಂದು ತಮನ್ನಾ ಹೇಳಿಕೊಂಡಿದ್ದಾರೆ. ತಮನ್ನಾ ಮತ್ತು ವಿಜಯ್ ಲಸ್ಟ್ ಸ್ಟೋರಿಸ್ 2 ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದು, ಅಲ್ಲಿಂದಲೇ ತಮ್ಮ ನಡುವೆ ಪ್ರೀತಿ ಹುಟ್ಟಿದ್ದಾಗಿ ನಟಿ ಇತ್ತೀಚೆಗೆ ಹೇಳಿಕೊಂಡಿದ್ದರು.
ಇದನ್ನೂ ಓದಿ: Viral News : ಮಳೆಯಲ್ಲಿ ಜೊಮೆಟೊ ಡೆಲಿವರಿ ಏಜೆಂಟ್ ಡ್ಯಾನ್ಸ್! ಈ ಫೋಟೋ ಹಿಂದಿನ ರಹಸ್ಯ ಏನು?
“ನಾನು ನೋಡಿದಂತೆ ವಿಜಯ್ ಅವರ ಬದುಕಿನಲ್ಲಿ ಸಾಕಷ್ಟು ಶಕ್ತಿಯುತ ಮಹಿಳೆಯರಿದ್ದಾರೆ. ಅವರು ಆ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅದರಿಂದಾಗಿಯೇ ಅವರಿಗೆ ತಮ್ಮ ಜೀವನ ಸಂಗಾತಿಯನ್ನೂ ಅಷ್ಟೇ ಗೌರವದಿಂದ ಕಾಣಲು ಸಾಧ್ಯವಾಗುತ್ತಿದೆ. ಅವರು ಎಲ್ಲರಂಥವರಲ್ಲ. ಮಾದರಿಯಾಗಿದ್ದಾರೆ. ನಾವು ಮಕ್ಕಳಿಗೆ ನಮ್ಮ ಸುತ್ತಲಿನ ಪುರುಷರೊಂದಿಗೆ ಹೇಗಿರಬೇಕು ಎಂದು ಹೇಳಿಕೊಡುವ ಬದಲು ಗಂಡು ಮಕ್ಕಳಿಗೆ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದನ್ನು ಹೇಳಿಕೊಡಬೇಕು. ಅದನ್ನೇ ಈಗಿನ ಯುವ ಪೀಳಿಗೆ ಕಲಿತುಕೊಳ್ಳಬೇಕು” ಎಂದು ನಟಿ ಪ್ರತಿಪಾದಿಸಿದ್ದಾರೆ.
ತಮನ್ನಾ ಮತ್ತು ವಿಜಯ್ ನಡುವಿನ ಸಂಬಂಧದ ಬಗ್ಗೆ ಹಲವಾರು ತಿಂಗಳುಗಳಿಂದ ವದಂತಿಗಳು ಹಬ್ಬಿದ್ದವು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ತಮನ್ನಾ ಅದನ್ನು ದೃಢಪಡಿಸಿದ್ದಾರೆ. “ಸಹ ನಟ ಎನ್ನುವ ಕಾರಣಕ್ಕೆ ನೀವು ಅವರೆಡೆಗೆ ಆಕರ್ಷಿತರಾಗುತ್ತೀರಿ ಎಂದು ಭಾವಿಸುವುದಿಲ್ಲ. ಯಾರ ಮೇಲಾದರೂ ಪ್ರೀತಿ ಹುಟ್ಟುತ್ತದೆಯೆಂದರೆ ಅದು ಖಂಡಿತವಾಗಿಯೂ ವೈಯಕ್ತಿಕವಾಗಿರುತ್ತದೆ. ವಿಜಯ್ ನಾನು ನನ್ನ ಜೀವನದಲ್ಲಿ ಎದುರು ನೋಡುತ್ತಿರುವ ವ್ಯಕ್ತಿ. ನನಗೆ ಅವರು ಹ್ಯಾಪಿ ಪ್ಲೇಸ್” ಎಂದು ಹೇಳಿದ್ದರು.
ಇದನ್ನೂ ಓದಿ: Viral News : ಮಂಡ್ಯದಲ್ಲಿ ಬೈಕ್ ರೈಡಿಂಗ್ ವೇಳೆ ಎದ್ದುಬಂದ ಹಾವು; ಗಾಬರಿಯಾಗಿ ಜಿಗಿದೇ ಬಿಟ್ಟ ಸವಾರ
ತಮನ್ನಾ ಮತ್ತು ವಿಜಯ್ ವರ್ಮಾ ಜತೆಯಾಗಿ ನಟಿಸಿರುವ ಲಸ್ಟ್ ಸ್ಟೋರಿಸ್ 2 ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಸುಜೊಯ್ ಘೋಷ್, ಆರ್. ಬಾಲ್ಕಿ, ಕೊಂಕಣ ಸೇನ್ ಮತ್ತಿತರರು ನಿರ್ದೇಶಿಸಿರುವ ಈ ಸಿನಿಮಾ ಜೂನ್ 29ರಂದು ತೆರೆ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ.