Site icon Vistara News

Meghana Raj: ಮೇಘನಾ ರಾಜ್‌ ಜನುಮದಿನಕ್ಕೆʼತತ್ಸಮ ತದ್ಭವʼ ಸಿನಿಮಾದ ಹೊಸ ಪೋಸ್ಟರ್‌ ಔಟ್‌

Tatsama Tadbhava Poster release For Meghana Raj Birthday

ಬೆಂಗಳೂರು: ನಟಿ ಮೇಘನಾ ರಾಜ್‌ (Meghana Raj) ಅವರ ಜನುಮದಿನದ ಅಂಗವಾಗಿ ʼತತ್ಸಮ ತದ್ಭವʼ ಸಿನಿಮಾ ಹೊಸ ಪೋಸ್ಟರ್‌ ಹಂಚಿಕೊಂಡಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್‌ ಸಿನಿರಂಗದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಈ ಸಿನಿಮಾ ಮೂಲಕ ಕಮ್‌ಬ್ಯಾಕ್‌ ಆಗಿದ್ದು, ನಟಿಯ ಹೊಸ ಲುಕ್‌ ಕಂಡು ಅವರ ಫ್ಯಾನ್ಸ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರಲ್ಲಿ ಮೇಘನಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರಿಗೆ ಜತೆಯಾಗಿ ನಟ ಪ್ರಜ್ವಲ್‌ ದೇವರಾಜ್‌ ನಟಿಸಿದ್ದಾರೆ. ಹಿರಿಯ ನಟಿ ಶ್ರುತಿ ಕೂಡ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಜೀವ ತುಂಬಿದ್ದಾರೆ. ಇದೊಂದು ಸಸ್ಪೆನ್ಸ್‌ ಕ್ರೈಂ ಜಾನರ್‌ನ ಸಿನಿಮಾ ಎಂದು ಸಿನಿತಂಡ ಮಾಹಿತಿ ಕೊಟ್ಟಿದೆ.

ಸದ್ಯ ಕರ್ನಾಟಕದಾದ್ಯಂತ ವಿಧಾನಸಭಾ ಚುನಾವಣೆಯ ಕಾವು ಏರಿರುವುದರಿಂದಾಗಿ ಚುನಾವಣೆಯ ನಂತರ ಈ ಸಿನಿಮಾವನ್ನು ತೆರೆ ಮೇಲೆ ತರುವುದಕ್ಕೆ ಸಿನಿ ತಂಡ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ತತ್ಸಮ ತದ್ಭವ ಸಿನಿಮಾಕ್ಕೆ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್‌ ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್‌ ಆತ್ರೇಯ ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾಕ್ಕೆ ವಾಸುಕಿ ವೈಭವ್‌ ಅವರ ಸಂಗೀತ, ಶ್ರೀನಿವಾಸ್‌ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲನವಿದೆ. ಸಿನಿಮಾ ಫಸ್ಟ್‌ ಲುಕ್‌ ಫೆಬ್ರವರಿಯಲ್ಲೇ ಬಿಡುಗಡೆಯಾಗಿದ್ದು, ಫಸ್ಟ್‌ ಲುಕ್‌ ನೋಡಿದ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕನ್ನಡ ಹಾಗೂ ಮಲಯಳಾಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Meghana Raj : ಮೇಘನಾ ನಟನೆಯ ʼತತ್ಸಮ ತದ್ಭವʼ ಶೂಟಿಂಗ್‌ ಮುಕ್ತಾಯ; ಶೀಘ್ರವೇ ತೆರೆಗೆ

ಈ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ವಾಪಸು ಬರುವ ಮಾಹಿತಿಯನ್ನು ಹಂಚಿಕೊಂಡಿದ್ದ ಮೇಘನಾ ರಾಜ್‌, “ನನ್ನಲ್ಲಿರುವ ಉತ್ಸುಕತೆಯನ್ನು ಹೇಳಲಾಗದು. ಬೆಳ್ಳಿತೆರೆಗೆ ಯಾವಾಗ ಮರಳುತ್ತೀರಿ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಿರಿ. ಅದಕ್ಕೆ ಇಲ್ಲಿದೆ ಉತ್ತರ” ಎಂದು ಬರೆದುಕೊಂಡಿದ್ದರು.

Exit mobile version