ನವ ದೆಹಲಿ: ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಪ್ರಸಿದ್ಧ ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್ ನೀಡಲಾಗಿದೆ. ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ (75ನೇ ವರ್ಷಾಚರಣೆ) ಅಂಗವಾಗಿ 75 ಲಕ್ಷ ರೂ. ಹಾಗೂ 7.5 ಕೋಟಿ ರೂ. ಮೌಲ್ಯದ ಎರಡು ಹೊಸ ಪ್ರಶ್ನೆಗಳನ್ನು ಪರಿಚಯಿಸಲಾಗಿದೆ.
ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅನೇಕ ಸುರಕ್ಷಿತ ಹಂತಗಳಿರುತ್ತವೆ. ಎಂದರೆ, ಈ ಹಂತಗಳಲ್ಲಿ ನಿಗದಿಯಾದ ಮೊತ್ತವನ್ನು ಗೆಲ್ಲುವುದು ಖಚಿತ ಎಂದರ್ಥ. ಉದಾಹರಣೆಗೆ 5 ಲಕ್ಷ ರೂ. ಮೌಲ್ಯಕ್ಕೆ ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೆ, ನಂತರ ಕೇಳುವ ಪ್ರಶ್ನೆಗೆ ತಪ್ಪು ಉತ್ತರ ನೀಡಿದರೂ ಪರವಾಗಿಲ್ಲ. ನೀವು 5 ಲಕ್ಷ ರೂ. ಗೆಲ್ಲುವುದು ಖಚಿತವಾಗಿರುತ್ತದೆ. ಈ ರೀತಿಯ ಇನ್ನೊಂದು ಹೊಸ ಸುರಕ್ಷಿತ ಹಂತವನ್ನು ಪರಿಚಯಿಸಲಾಗಿದೆ. ಅಲ್ಲದೆ, 7.5 ಕೋಟಿ ರೂ. ಗೆಲ್ಲುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.
ಈ ಪ್ರತಿಷ್ಠಿತ ರಸಪ್ರಶ್ನೆ ಕಾರ್ಯಕ್ರಮದ 14ನೇ ಆವೃತ್ತಿಯಲ್ಲಿ ಎರಡು ಹೊಸ ಪ್ರಶ್ನೆಗಳನ್ನು ಕೇಳುತ್ತಿರುವ ಪ್ರೊಮೊ ವಿಡಿಯೊ ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.
ಪ್ರೊಮೊದಲ್ಲಿ ಏನಿದೆ?
ಸಂತೋಷ ಎಂಬ ಸ್ಪರ್ಧಿ 1 ಕೋಟಿ ರೂ. ಗೆದ್ದ ಸಂಭ್ರಮದಲ್ಲಿರುತ್ತಾರೆ. ಅದೇ ಸಮಯಕ್ಕೆ ಅಮಿತಾಭ್ ಬಚ್ಚನ್ ʻನೀವು ಇನ್ನು ಮುಂದೆ ಆಡಲು ಇಚ್ಛಿಸುತ್ತೀರೇ?ʼ ಎಂದು ಕೇಳುತ್ತಾರೆ. ಆಗ ಸಂತೋಷ್ ಅವರು ಆಶ್ಚರ್ಯಪಟ್ಟುಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? 1 ಕೋಟಿ ಹಣವನ್ನು ಗೆದ್ದ ಬಳಿಕ ಇನ್ನೊಂದು ಪ್ರಶ್ನೆಯಾ? ಎಂದು ಶಾಕ್ ಆಗುತ್ತಾರೆ. ಅವರ ಪರಿಚಯಸ್ಥರೆಲ್ಲ ʻಸಾಕು, ಇನ್ನು ಮುಂದೆ ಆಡಬೇಡ. 1 ಕೋಟಿ ಗೆದ್ದಾಗಿದೆ, ಮುಂದಿನ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರೆ 3.75 ಲಕ್ಷ ಮಾತ್ರವೇ ನಿನ್ನ ಪಾಲಾಗುತ್ತದೆ. ಹುಷಾರು!ʼ ಎಂದು ಎಚ್ಚರಿಸುವ ಮಾತುಗಳೆಲ್ಲ ನೆನಪಾಗುತ್ತದೆ.
ಅದೇ ಸಮಯಕ್ಕೆ ಅಮಿತಾಭ್ ಬಚ್ಚನ್ ʻಹೆದರಬೇಡಿ. ನೀವು ಮುಂದಿನ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ 7.5 ಕೋಟಿ ರೂ. ಗೆಲ್ಲುತ್ತೀರಿ. ಅಕಸ್ಮಾತ್ ಉತ್ತರ ತಪ್ಪಾದರೆ 75 ಲಕ್ಷ ರೂ. ನಿಮ್ಮ ಪಾಲಿಗೆ ಸಿಗುತ್ತದೆʼ ಎಂದು ಹೇಳಿ ಧೈರ್ಯ ನೀಡುತ್ತಾರೆ. ನಂತರ ವೀಕ್ಷಕರಿಗೆಲ್ಲ ಈ ಬಾರಿ ಹೊಸ ಹಂತವೊಂದನ್ನು ಪರಿಚಯಿಸಲಾಗಿದೆ, 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 75 ಲಕ್ಷ ರೂಪಾಯಿಗೆ ಕೇಳುವ ಪ್ರಶ್ನೆಯನ್ನು ಸುರಕ್ಷಿತ ಹಂತವೆಂದು ಪರಿಗಣಿಸಲಾಗಿದೆ ಎಂದು ಅಮಿತಾಭ್ ಬಚ್ಚನ್ ತಿಳಿಸುತ್ತಾರೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಟ್ರೆಂಡ್ ಆದ ಪೊನ್ನಿಯನ್ ಸೆಲ್ವನ್ ಟೀಸರ್, ನಟಿ ಐಶ್ವರ್ಯಾ ರೈ ಲುಕ್‌ಗೆ ಜನ ಫಿದಾ