ಬೆಂಗಳೂರು : ʻಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ (Anirudh Jatkar) ಅವರನ್ನು ನಿರ್ಮಾಪಕರ ಸಂಘ ದೂರೀಕರಿಸಿ, ಎರಡು ವರ್ಷಗಳ ಕಾಲ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಿತ್ತು. ಇದರ ಬೆನ್ನಲ್ಲೇ ʻಸೂರ್ಯವಂಶʼ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಅನಿರುದ್ಧ ಅವರೇ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಕಿರುತೆರೆ ನಿರ್ಮಾಪಕರ ಸಂಘ ಏನು ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಅನಿರುದ್ಧ ಅವರ ಅಭಿಮಾನಿಗಳಲ್ಲಿತ್ತು. ನಿರ್ಮಾಪಕರ ಸಂಘ ಅನಿರುದ್ಧ ಅವರ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧ ಹೇರಿದ್ದರಿಂದ ಅವರಿಗಾಗಿ ಸೀರಿಯಲ್ ಮಾಡದಂತೆ ಎಸ್. ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ನಿರ್ದೇಶಕ ಎಸ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ನಾರಾಯಣ್ ಮಾತನಾಡಿ ʻʻಕಿರುತೆರೆ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು ಬಂದಿದ್ದರು. ಈ ಹಿಂದೆ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಘಟನಾವಳಿಗಳು ನಡೆದಿದ್ದರ ಬಗ್ಗೆ ಕೂಲಂಕಷವಾಗಿ ವಿವರಿಸಿದ್ದರು. ಅನಿರುದ್ಧ ಅವರು ಹೇಗೆ ಇದ್ದಿದ್ದರು ಅದು ನಮಗೆ ಗೊತ್ತಿಲ್ಲ. ಅವರ ಹಿಂದಿನ ವಿವಾದದ ಬಗ್ಗೆ ಮಾಹಿತಿ ಇಲ್ಲ. ನನ್ನ ಈ ಸೀರಿಯಲ್‌ಗೆ ಅವರು ಸೂಕ್ತ ಎಂದೆನಿಸಿತು. ಇಂದು ಸಂಜೆ (ಡಿ.9) ವಾಣಿಜ್ಯ ಮಂಡಳಿಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಅನಿರುದ್ಧ ಬ್ಯಾನ್ ಆಗಿಲ್ಲ, ಆದರೆ ಅವರಿಗೆ ಸಹಕಾರ ಕೊಡಬೇಡಿ ಎನ್ನುತ್ತಿದ್ದಾರೆ. ಅಶಿಸ್ತಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಡಿ ಎಂದಿದ್ದಾರೆ. ಅನಿರುದ್ಧ ವಿರುದ್ಧ ಕಿರುತೆರೆ ನಿರ್ಮಾಪಕರು ಆರೋಪ ಮಾಡಿದಾಗ ಆಶ್ಚರ್ಯ ಆಯಿತು. ದೊಡ್ಡ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಸೂರ್ಯವಂಶ. ನಿರ್ಮಾಪಕರು ಯಾರು ಎನ್ನುವ ಕ್ಲಾರಿಟಿ ಇದುವರೆಗೂ ಆಗಿಲ್ಲ. ನಾಯಕಿ ಯಾರು ಎಂಬುದು ಫೈನಲ್ ಆಗಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Jote Joteyali | ಧಾರಾವಾಹಿ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್
ಅನಿರುದ್ಧ ಅವರು ಡಿಸೆಂಬರ್ 8 ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ʻʻಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತ ಇದ್ದೇನೆ.…ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್‌ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತದೆ ಎನ್ನುವ ಭರವಸೆ ನನಗಿದೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Jote Joteyali | ಆರ್ಯವರ್ಧನ್ ಪಾತ್ರಕ್ಕೆ ಹರೀಶ್‌ರಾಜ್ ತರಲು ಹರಸಾಹಸ: ಜೊತೆ ಜೊತೆಯಲಿ ಟೀಮ್ ಮಾಸ್ಟರ್ ಪ್ಲ್ಯಾನ್!