ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ (Anchor Aparna) ಅವರು ನಿಧನರಾಗಿದ್ದಾರೆ. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ. ಮೆಟ್ರೋ ಆರಂಭ ಆದಾಗ, ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುವುದಕ್ಕೆ ಮೊದಲು ಇವರ ಧ್ವನಿಯನ್ನೇ ಆಯ್ಕೆ ಮಾಡಲಾಗಿತ್ತು. ನಿಜಕ್ಕೂ ಮೆಟ್ರೋಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ. ಅಪರ್ಣಾ ಅವರ ಧ್ವನಿಯನ್ನು ಮೆಟ್ರೋದಲ್ಲಿ ಮೊಳಗುವುದಕ್ಕೆ ಆರಂಭ ಆದ ಮೇಲೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸಿದ್ದರು. ಸ್ವತ: ಅಪರ್ಣಾ ಅವರು ಮೆಟ್ರೋದಲ್ಲಿ ತಮ್ಮದೇ ಧ್ವನಿಯನ್ನು ಕೇಳುವುದಕ್ಕೆ ಹೋಗಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ʻʻನನಗೂ ಮೆಟ್ರೋಗೂ ಅದ್ಯಾವ ರೀತಿಯ ಸಂಬಂಧ ಅಂದರೆ, ತುಂಬ ಹೆಮ್ಮೆ ಎನಿಸುತ್ತೆ. ಒಂದು ದಿನ ನನಗೆ ಕರೆ ಬಂತು. 12 ವರ್ಷದ ಹಿಂದೆನೇ ಆಗಿರಬಹುದು. ನಿಮ್ಮದೊಂದು ವಾಯ್ಸ್ ನಮ್ಮ ಮೆಟ್ರೋಗೆ ಬೇಕು ಹೇಳಿದರು. ಆ ಮೇಲೆ ಏನಿದು ಅಂತ ಕೇಳಿದಾಗ, ನಿಮ್ಮದೊಂದು ವಾಯ್ಸ್ ಸ್ಯಾಂಪಲ್ ಕೊಡಿ ಎಂದು ಹೇಳಿದ್ದರು. ಆದರೆ ಅಪರ್ಣಾಗೆ ಹೇಗೆ ಧ್ವನಿ ಕೊಡಬೇಕು ಎಂದು ಗೊತ್ತಿರಲಿಲ್ಲ. ಬಳಿಕ ನ್ಯೂಸ್ ಪೇಪರ್ ಇಟ್ಟಕೊಂಡು ಧ್ವನಿ ನೀಡಿದ್ದರು. ಚೆನ್ನೈನಲ್ಲಿ ಈ ಎಲ್ಲ ನಿರ್ಧಾರಗಳನ್ನು ತೆಗದುಕೊಳ್ಳುತ್ತಿದ್ದರು. ಜಯನಗರ, ಈಗ ಏನೇನು ಬರುತ್ತೆ ಬಾಗಿಲನ್ನು ತೆರೆದು ಅಂತೆಲ್ಲ. ಇದೆಲ್ಲ ಯಾಕೆ? ಅವರನ್ನು ಕೇಳಿದೆ. ನನಗೆ ಐಡಿಯಾ ಇಲ್ಲ. ಇದೆಲ್ಲ ಹೆಂಗೆ ಬರುತ್ತೆ ಅಂತ ಆಗ ಅವರು ವಿವರಣೆ ಕೊಟ್ಟರು” ಎಂದು ಅಪರ್ಣಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Anchor Aparna: ಅಗಲಿದ ಅಪರ್ಣಾಗೆ ಸಿಎಂ, ಡಿಸಿಎಂ, ವಿಜಯೇಂದ್ರ ಮುಂತಾದ ಗಣ್ಯರ ಸಂತಾಪ
ಬಳಿಕ ಇಷ್ಟಾದರೂ ಅಪರ್ನಾ ಅವರು ಮೆಟ್ರೋಗೆ ಹೋಗೇ ಇರಲಿಲ್ಲ ಅಂತೆ. ದೀಪಾವಳಿ ಹಬ್ಬದ ದಿನ ಬನಶಂಕರಿಯಿಂದ ಎಂಜಿ ರಸ್ತೆವರೆಗೂ ಹೋಗಿ, ಬೈಯಪ್ಪನಹಳ್ಳಿವರೆಗೂ ಧ್ವನಿ ಹೇಗೆ ಇರಲಿದೆ ಎಂಬ ಕುತೂಹಲ ದಿಂದ ಪ್ರಯಾಣ ಮಾಡಿರುವುದಾಗಿ ಹೇಳಿಕೊಂಡಿದ್ದರು.
ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಸಿನಿಮಾ ಮೂಲಕ ಅಪರ್ಣಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅವರು ಕೊನೆಯದಾಗಿ ನಟಿಸಿದ್ದ ‘ಗ್ರೇ ಗೇಮ್ಸ್’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು.