ಬೆಂಗಳೂರು: ಶ್ವಾಸಕೋಶ ಕ್ಯಾನ್ಸರ್‌ನಿಂದ ನಿಧನರಾದ ಖ್ಯಾತ ನಿರೂಪಕಿ, ನಟಿ ಅಪರ್ಣಾ (Anchor Aparna) ಅವರ ಅಂತ್ಯಸಂಸ್ಕಾರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು. ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು ಸೇರಿ ನೂರಾರು ಜನರ ಸಮ್ಮುಖದಲ್ಲಿ ಪೊಲೀಸ್ ಗೌರದೊಂದಿಗೆ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಇದೀಗ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಇದೀಗ ಅಪರ್ಣಾ ಕುರಿತು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಪೋಸ್ಟ್‌ನಲ್ಲಿ ʻʻ ಇನ್ನೇನು ಕಾರ್ಯಕ್ರಮಕ್ಕೆ ಹೊರಡಬೇಕೆಂಬಂತೆ ಹಸನ್ಮುಖಿಯಾಗಿ ಮಲ್ಲಿಗೆ ಮುಡಿದು ಶವಪೆಟ್ಟಿಗೆಯೊಳಗೆ ಮಲಗಿದ್ದ ಅಪರ್ಣಾಳನ್ನು ಕಂಡಾಗ ಅಸಂಖ್ಯ ನೆನಪುಗಳು ಅಶ್ರು ರೂಪದಲ್ಲಿ ಹೊರಬರುತ್ತಿವೆ. ನನ್ನ ಬರವಣಿಗೆ ಎಂದರೆ ಆಕೆಗೆ ಅಚ್ಚುಮೆಚ್ಚು. ನನ್ನ ಕಥೆ-ಕಾದಂಬರಿಗಳ ಕೆಲ ಸಾಲುಗಳನ್ನು ಕಂಠಪಾಠ ಮಾಡಿದಂತೆ ಒಪ್ಪಿಸುತ್ತಿದ್ದಳು. ’ಚುಕ್ಕಿ ಚಂದ್ರಮರ ನಾಡಿನಲ್ಲಿ’ ಆಕೆಯ ಮೆಚ್ಚಿನ ಕಾದಂಬರಿ. ಅದನ್ನು ಯಾವುದೋ ಹುಡುಗಿ ಬರೆದು ಅದು ನನ್ನ ಹೆಸರಲ್ಲಿ ಅಚ್ಚಾಗಿದೆ ಎಂದು ಛೇಡಿಸುತ್ತಿದ್ದಳು. ಆಗ ನಾನು ಬರೆದ ಕಾಗದಗಳನ್ನು ಬಹಳ ಕಾಲ ಕಾದಿರಿಸಿದ್ದಳೆಂದು ವಸ್ತಾರೆ ಹೇಳುತ್ತಿದ್ದರು. ಅಲ್ಪಕಾಲೀನ ಅಮೆರಿಕಾ ಬದುಕು ಅವಳಿಗೆ ಕಹಿ ಉಣಿಸಿತ್ತು. ಸಾಹಿತ್ಯ, ಸಂಗೀತ, ರಂಗಭೂಮಿ, ಕಿರುತೆರೆ, ಸಿನಿಮಾ ಹೀಗೆ ಬಹುವಿಧ ಆಸಕ್ತಿಗಳಿಂದ ಅಲಂಕೃತಳಾಗಿದ್ದ ಅಪರ್ಣಾ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಅಸ್ಖಲಿತ, ಪ್ರೌಢ ಮತ್ತು ಭಾವಪೂರ್ಣನಿರೂಪಣೆಗೆ ಮಾದರಿಯಾಗಿದ್ದಳು. ಆಕೆಯ ಅನಾರೋಗ್ಯದ ಸಂಗತಿಯನ್ನು ನೆರೆಮನೆಯಲ್ಲಿರುವ ನನಗೂ ತಿಳಿಸದ ಸ್ವಾಭಿಮಾನಿ. ಮುಂಜಾನೆಯ ನನ್ನ ಕೆಲವು ವಾಕಿಂಗ್ ನಲ್ಲಿ ಮಹಡಿಯಿಂದ ಮುಗುಳ್ನಗೆಯೊಡನೆ ಕೈ ಬೀಸುತ್ತಿದ್ದ ಈ ಸಾಹಿತ್ಯಾಭಿಮಾನಿ ಇನ್ನಿಲ್ಲ. ತನ್ನ ಬದುಕೆಂಬ ಸಮಾರಂಭದ ಕೊನೆಯ ವಂದನಾರ್ಪಣೆ ಹೇಳಿ ಹೋದ ಅಪರ್ಣಾಗೆ ನನ್ನ ಅಶ್ರುತರ್ಪಣʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Anchor Aparna: ಅಪರ್ಣಾ ಸಿಗರೇಟ್ ಸೇದುವವರಲ್ಲ, ಆದರೂ ಏಕೆ ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾದರು?
ಸೃಜನ್ ಲೋಕೇಶ್ ಹಾಗೂ ಕುಟುಂಬಸ್ಥರು ಅಂತ್ಯಸಂಸ್ಕಾರದ ವೇಳೆ ಭಾಗಿಯಾಗಿದ್ದರು. ಈ ವೇಳೆ ಅಪರ್ಣ ಪತಿ ನಾಗರಾಜ್‌ಗೆ ಸೃಜನ್ ಲೋಕೇಶ್ ಸಾಂತ್ವನ ಹೇಳಿದರು. ಬಳಿಕ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಬನಶಂಕರಿಯ ವಿದ್ಯುತ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು. ನಂತರ ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸರು ಗೌರವ ಸಲ್ಲಿಸಿದರು. ಹೊಯ್ಸಳ ಕರ್ನಾಟಕ ಭಾಗದ ಸ್ಮಾರ್ತ ಸಂಪ್ರದಾಯದ ಪ್ರಕಾರ ಅಪರ್ಣಾ ಅಂತ್ಯಕ್ರಿಯೆ ನೆರವೇರಿತು.
ಕನ್ನಡಿಗರಲ್ಲದವರೂ ತಲೆದೂಗುವಂತೆ ಕನ್ನಡ (Kannada) ಮಾತನಾಡುತ್ತಿದ್ದ, ಸ್ಪಷ್ಟ ಉಚ್ಚಾರ, ಅದಕ್ಕೆ ತಕ್ಕ ಹಾವ-ಭಾವ, ನಿರೂಪಣೆ ವೇಳೆ ಕನ್ನಡದ ಪದಗಳನ್ನು ಪೋಣಿಸುತ್ತಿದ್ದ ಕರ್ನಾಟಕದ ಖ್ಯಾತ ನಿರೂಪಕಿ ಅಪರ್ಣಾ (57) (Anchor Aparna) ಅವರು ಗುರುವಾರ ರಾತ್ರಿ ನಿಧನರಾಗಿದ್ದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಅವರು ಮನೆಮಾತಾಗಿದ್ದರು. ಅದರಲ್ಲೂ, 80 ಮತ್ತು 90ರ ದಶಕದಲ್ಲಿ ಕನ್ನಡ ಕಿರುತೆರೆ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದರು.
1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರು ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.