ಬೆಂಗಳೂರು: ʻಜೊತೆ ಜೊತೆಯಲಿʼ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸು ಕದ್ದಿರುವ ಅನಿರುದ್ಧ್ ಜತ್ಕರ್ (Anirudh Jatkar) ಅಭಿನಯದ ʻಸೂರ್ಯವಂಶʼ ಧಾರಾವಾಹಿ ಇದೇ ಮಾರ್ಚ್ 11ರಿಂದ ರಾತ್ರಿ 8 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಪಕ ಎಲ್.ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ʻಜೊತೆ ಜೊತೆಯಲಿʼ ಸೀರಿಯಲ್ ಕಹಿ ಅನುಭವದ ಬಗ್ಗೆ ಅನಿರುದ್ಧ್ ಅವರು ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದು ಹೀಗೆ:
ಆ ಸಂಕಟ ಇನ್ನೂ ಇದೆ
ಅನಿರುದ್ಧ ಮಾತನಾಡಿ ʻʻಆ ಸಂಕಟ ಇನ್ನೂ ಇದೆ. ಇನ್ನೂ ಆ ನೋವು ಮರೆತಿಲ್ಲ. ಅವತ್ತಿನಿಂದ ಇವತ್ತಿಗೂ ನಿದ್ದೆ ಸರಿಯಾಗಿ ಮಾಡಿಲ್ಲ. ಆದರೆ ಆ ತರ ಆಯ್ತು ಎಂದು ಏನೋ ಬೇಜಾರಿನಿಂದ, ಎಲ್ಲಿಯೂ ನಿಂತಿಲ್ಲ. ನನ್ನ ಲೇಖನಗಳಲ್ಲಿಯೇ ನಾನು ಬರೆದಿದ್ದೆ. ಏನಾದರೂ ಆದರೆ ತಕ್ಷಣ ನಾವು ಎದ್ದೇಳಬೇಕು ಎಂದು. ಬಿದ್ದಾಗ ನಾವು ಎದ್ದೇಳದೇ ಇದ್ದರೆ, ಜೀವನದಲ್ಲಿ ಇನ್ನು ಯಾವುತ್ತೂ ಏಳಲು ಆಗಲ್ಲ. ಯಾಕೆಂದರೆ ಏಲ್ಲೋ ಒಂದು ನೆಗೆಟಿವ್ ಶಕ್ತಿ ನಮ್ಮನ್ನು ಎಳೆದುಕೊಂಡು ಬಡುತ್ತೆ. ಕೆಲಸ ಮಾಡಬೇಕು, ತಕ್ಷಣ ಎದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದೆ. ಒಂದು ಕಾದಂಬರಿ ಬರೆಯುತ್ತ ಇದ್ದೀನಿ. ನನ್ನ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂತು. ಹೀಗಾಗಿ ನಾನು ಎಲ್ಲಿಯೂ ನಿಂತಿಲ್ಲ. ಆದರೆ ಅವರೆಲ್ಲ ಹೀಗೆ ಮಾಡಿದ್ರಲ್ಲ. ಎನ್ನುವ ಸಂಕಟ ಇದೆ. ನನ್ನವರೇ ಆಗಿದ್ದರು ಅವರೆಲ್ಲ. ಜಗಳ., ವಾದ ಎಲ್ಲವೂ ಮನೆಯಲ್ಲೂ ಆಗುತ್ತೆ. ಅಷ್ಟೇಲ್ಲ ಆ ಮಟ್ಟಕ್ಕೆ ಬ್ಯಾನ್ ಮಾಡುವ ಹಂತಕ್ಕೆ ಹೋಗಬೇಕಾಗಿರಲಿಲ್ಲʼʼಎಂದರು.
ಇದನ್ನೂ ಓದಿ: Anirudh Jatkar: ನನ್ನ ಮೇಲೆ ಆಪಾದನೆ ಹೊರಿಸಿದ್ದೆಲ್ಲ ಚೀಪ್: ಕಿಡಿಕಾರಿದ ವಿಷ್ಣುವರ್ಧನ್ ಅಳಿಯ!
ಅಪರಾಧ ಮಾಡಲಿಲ್ಲ, ಪಾಪವನ್ನೇ ಮಾಡಿದ್ದಾರೆ.
ಮಾತು ಮುಂದುವರಿಸಿ ʻʻಅಭಿಮಾನಿಗಳಿಗೆ ರಸಭಂಗವಾಯ್ತು. ಆ ಧಾರಾವಾಹಿ ನನಗೆ ಎಲ್ಲವೂ ಕೊಟ್ಟಿದೆ. ಆ ಧಾರಾವಾಹಿಗೆ ಹಾಗೆ ಆಗಬಾರದಿತ್ತು. ಅದು ಸಂಕಟ ಆಯ್ತು. ತುಂಬ ಸಲ ಅನ್ಕೋತ್ತಿನಿ. ಅವರು ಏನು ಅಪರಾಧಾ ಮಾಡಿಲ್ಲ. ಅವರು ತಪ್ಪು ಮಾಡಲಿಲ್ಲ, ಪಾಪವನ್ನೇ ಮಾಡಿದ್ದಾರೆ. ಅವರ ಆ ನಡೆಯನ್ನು ನಾನು ಮರೆತಿಲ್ಲ, ಮರೆಯುವುದೂ ಇಲ್ಲ. ನನಗೆ ಈಗಲೂ ಆ ಬಗ್ಗೆ ಸಂಕಟ ಇದೆʼʼಎಂದು ಬೇಸರ ಹೊರಹಾಕಿದರು.
ಸೂರ್ಯವಂಶದಲ್ಲಿ ಪ್ರಮುಖ ಪಾತ್ರ
ಕಥಾನಾಯಕ ಸೂರ್ಯವರ್ಧನ/ಕರ್ಣನ ಪಾತ್ರದಲ್ಲಿ ಜನಪ್ರಿಯ ನಟ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಸುರಭಿ ಪಾತ್ರದಲ್ಲಿ ಅಶ್ವಿನಿ, ತಾತ ಸತ್ಯಮೂರ್ತಿ ಪಾತ್ರದಲ್ಲಿ ಸುಂದರರಾಜ್, ಖಳನಟ ಕಾಳಿಂಗನ ಪಾತ್ರದಲ್ಲಿ ದಿ.ಉದಯಕುಮಾರ್‌ರ ಪುತ್ರ ವಿಕ್ರಂ ಉದಯಕುಮಾರ್ ನಟಿಸುತ್ತಿದ್ದಾರೆ. ಉಳಿದಂತೆ ರವಿ ಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರ ದೊಡ್ಡ ತಾರಾಗಣವಿದೆ.