ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 (BBK SEASON 10) ಶೋ ದಿನದಿಂದ ದಿನಕ್ಕೆ ರೋಚಕವಾಗುತ್ತ ಸಾಗುತ್ತಿದೆ. ಇತ್ತೀಚೆಗಷ್ಟೇ 50 ದಿನ ಪೂರೈಸಿರುವ ಶೋಗೆ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಸ್ಪರ್ಧಿಗಳು ಸೇರ್ಪಡೆಯಾಗಿದ್ದಾರೆ. ಇತ್ತ ಬಿಗ್ ಬಾಸ್ ಸ್ಪರ್ಧಿಗಳಿಗೆ ಇಂದು ನೀಡಿದ್ದ ಟಾಸ್ಕ್ ಸಖತ್ ಚಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಕಂಡು ಬಂದಿದೆ. Jio Cinema ಬಿಡುಗಡೆ ಮಾಡಿರುವ ಹೊಸ ಪ್ರೋಮೊದಲ್ಲಿ ಈ ಆಟದ ರೂಪುರೇಷೆಗಳು ಜಾಹೀರಾಗಿವೆ.
ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್ಗಳನ್ನು ಇಡಲಾಗಿದೆ. ಬಿಗ್ ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿ ಹೋಗಿ ಬಾಲ್ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.
ಈ ಟಾಸ್ಕ್ನಲ್ಲಿ ಬಾಲ್ ಎತ್ತುವಾಗ ಎರಡೂ ತಂಡದ ನಡುವೆ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಈ ಝಲಕ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಕಣ್ಣೀರಿಟ್ಟ ಸಿರಿ
ಈ ಟಾಸ್ಕ್ ವೇಳೆ ಕೆಲವರು ನಡೆದುಕೊಂಡ ರೀತಿಯಿಂದ ಸಿರಿಗೆ ಕಷ್ಟ ಆಗಿದೆ. ಅವರು ನೋವಿನಿಂದ ಕಣ್ಣೀರು ಹಾಕಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಆಟ ಗೆಲ್ಲಲೇಬೇಕು ಎಂಬ ಜಿದ್ದಿನಿಂದ ಒಬ್ಬರ ಮೇಲೆ ಮತ್ತೊಬ್ಬರು ಬಿದ್ದಿದ್ದರಿಂದ ಸಿರಿ ಅವರಿಗೆ ನೋವಾಗಿದೆ. ಮಾತ್ರವಲ್ಲ ಕೆಲವು ಸ್ಪರ್ಧಿಗಳು ತೊಂದರೆ ಅನುಭವಿಸಿದ್ದಾರೆ. ಸ್ನೇಹಿತ್, ಮೈಕೆಲ್ ಮುಂತಾದವರು ಬಲ ಪ್ರಯೋಗಿಸಿ ಬೇರೆಯವರನ್ನು ತಳ್ಳಿದ್ದಾರೆ. ‘ಏನಿದು ರಾಕ್ಷಸರ ರೀತಿ?ʼ ಎಂದು ಮಹಿಳಾ ಸ್ಪರ್ಧಿಗಳು ಟೀಕಿಸಿದ್ದಾರೆ.
ಇದನ್ನೂ ಓದಿ: BBK SEASON 10: ಕನ್ನಡ ಪತ್ರವನ್ನು ಓದಿದ ಮೈಕಲ್; ದಂಗಾದ ಸ್ಪರ್ಧಿಗಳು
ಗಾಯಗೊಂಡ ತನಿಷಾ ಕುಪ್ಪಂಡ
ಟಾಸ್ಕ್ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನುವ ಸುದ್ದಿಯ ನಡುವೆಯೇ ಈ ಬೆಳವಣಿಗೆ ಕಂಡು ಬಂದಿದೆ. ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಾರಿ ತನಿಷಾ ನಾಮಿನೇಟ್ ಆಗಿದ್ದರು. ಅವರನ್ನು ಸೇವ್ ಮಾಡುವಂತೆ ಕಾರ್ತಿಕ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾಗಿದ್ದ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಸದ್ಯ ತನಿಷಾ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ