Site icon Vistara News

Shanmukh Jaswanth: ʻಬಿಗ್ ಬಾಸ್ʼ ರನ್ನರ್‌ ಅಪ್‌ ಇದೀಗ ಪೊಲೀಸರ ಅತಿಥಿ!

Bigg Boss Telugu contestant Shanmukh Jaswanth arrested

ಬೆಂಗಳೂರು: ಬಿಗ್ ಬಾಸ್ ತೆಲುಗು ಐದನೇ ಸೀಸನ್‌ ರನ್ನರ್‌ಅಪ್‌ (Shanmukh Jaswanth) , ಯೂಟ್ಯೂಬರ್ ಮತ್ತು ನಟ ಷಣ್ಮುಖ್ ಜಸ್ವಂತ್‌ ಮನೆಯಲ್ಲಿಯೇ ಗಾಂಜಾ ಸೇವಿಸುವಾಗ ಪೊಲೀಸರ ಅತಿಥಿಯಾಗಿದ್ದಾರೆ. ಷಣ್ಮುಖ್ ಅವರ ಜತೆ ಇದ್ದ ಸಹೋದರ ಸಂಪತ್ ವಿನಯ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.  ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದ ಕಾರಣಕ್ಕೆ ಪೊಲೀಸರು ಸಂಪತ್‌ ವಿನಯ್‌ರನ್ನು ಬಂಧಿಸಲು ಮನೆಗೆ ತೆರಳಿದ್ದರು. ಈ ವೇಳೆ ಷಣ್ಮುಖ್‌ ಜಸ್ವಂತ್‌ ಗಾಂಜಾ ಸೇವನೆ ಮಾಡುತ್ತಿದ್ದರು.

ಷಣ್ಮುಖ್ ಅವರ ಸಹೋದರ ಸಂಪತ್ ವಿನಯ್ ಅವರು ಯುವತಿಯೊಂದಿಗೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಗೆ ಇನ್ನೇನು ಒಂದು ವಾರ ಇದೆ ಎನ್ನುವಾಗಲೇ ಇನ್ನೊಬ್ಬ ಮಹಿಳೆಯನ್ನು ವಿವಾಹವಾದರು. ಇದೀಗ ಸಂಪತ್ ತನಗೆ ಮೋಸ ಮಾಡಿದ್ದಾನೆ ಎಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹಿಳೆ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ʻಷಣ್ಮುಖ್ ಮುಖಾಂತರ ಸಂಪತ್‌ನನ್ನು ಭೇಟಿಯಾಗಿದ್ದು, ಈಗ ಬೇರೊಬ್ಬರನ್ನು ಮದುವೆಯಾಗಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಸಂಪತ್‌ ವಿನಯ್‌ ನನಗೆ ಮೋಸ ಮಾಡಿದ್ದಾನೆʼ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಕೇಸ್‌ ದಾಖಲು ಮಾಡಿಕೊಂಡ ಪೊಲೀಸರು, ವಿಚಾರಣೆಗಾಗಿ ಸಂಪತ್‌ನನ್ನು ಕರೆದುಕೊಂಡು ಬರಲು ಆತನ ಮನೆಗೆ ತೆರಳಿದ್ದರು. ಈ ವೇಳೆ ಯುವತಿಯೂ ಕೂಡ ಪೊಲೀಸರೊಂದಿಗೆ ಹೋಗಿದ್ದಾಳೆ. ಪೊಲೀಸರು ಶೋಧ ಕಾರ್ಯ ಮಾಡುವ ವೇಳೆ ಆತ ಗಾಂಜಾ ಸೇವಿಸುತ್ತಿದ್ದ ಎನ್ನುವುದು ಗೊತ್ತಾದ ತಕ್ಷಣ ಬಂಧನ ಮಾಡಿದ್ದಾರೆ.

ಇದನ್ನೂ ಓದಿ: Actor Darshan: 6.2 ಅಡಿ ಎತ್ತರದ ದರ್ಶನ್ ಚಾಕೊಲೇಟ್ ಪ್ರತಿಮೆ ಅನಾವರಣ: ಸ್ನೇಹಿತರ ಬಿಗ್‌ ಸರ್ಪ್ರೈಸ್​

ಪೊಲೀಸರು ಆತನನ್ನು ಮತ್ತು ಆತನ ಸಹೋದರನನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗೂ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ. 2021ರಲ್ಲಿ ಹೈದರಾಬಾದ್‌ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ಷಣ್ಮುಖ್ ಅವರನ್ನು ಬಂಧಿಸಲಾಗಿತ್ತು. ಈ ಹಿಂದೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಬಂಧಿತರಾಗಿದ್ದರು.

ಸಾಫ್ಟ್‌ವೇರ್‌ ಡೆವಲಪರ್‌, ʻಸೂರ್ಯ ವೆಬ್‌ ಸಿರೀಸ್‌ʼ ಮೂಲಕ ಪ್ರಖ್ಯಾತಿ ಪಡೆದಿರುವ ಷಣ್ಮುಖ್‌, ಈ ಮೂಲಕವೇ ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಮನ್ನಣೆ ಪಡೆದುಕೊಂಡಿದ್ದರು. ಶಬರೀಶ್ ಕಂಡ್ರೇಗುಲ ಮತ್ತು ಅವರ ಸಹೋದರ ನಿರ್ದೇಶನದ ʻವೈವಾʼ ಕಿರುಚಿತ್ರದಲ್ಲಿ ನಟಿಸಿದ ಷಣ್ಮುಖ್‌ ಖ್ಯಾತಿ ಗಳಿಸಿದರು. ನಟಿ ದೀಪ್ತಿ ಸುನೈನಾ ಅವರೊಂದಿಗೆ ಡೇಟಿಂಗ್ ಕೂಡ ಮಾಡಿದ್ದರು. 2021ರಲ್ಲಿ ಬಿಗ್ ಬಾಸ್ ತೆಲುಗಿನ ಐದನೇ ಸೀಸನ್‌ನಲ್ಲಿ ಭಾಗವಹಿಸಿದ ಬಳಿಕ ದೀಪ್ತಿ ಸುನೈನಾ ಜತೆ ಬ್ರೇಕಪ್‌ ಮಾಡಿಕೊಂಡರು. ತಮ್ಮ ಆಟದ ಮೂಲಕ ಗಮನಸೆಳೆದಿದ್ದ ಷಣ್ಮುಖ್‌, ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದರು.

Exit mobile version