ಬೆಂಗಳೂರು: ವೈವಿಧ್ಯಮಯ ಧಾರಾವಾಹಿ, ವಿವಿಧ ಕಾರ್ಯಕ್ರಮಗಳ ಮೂಲಕ ಕಲರ್ಸ್ ಕನ್ನಡ ವಾಹಿನಿ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲೂ ಸುದೀಪ್ ನಿರೂಪಣೆಯ ಬಹು ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 10 ದಿನದಿಂದ ದಿನಕ್ಕೆ ವೀಕ್ಷಕರನ್ನು ಸೆಳೆಯುತ್ತಿದೆ. ಈ ಮಧ್ಯೆ ಜನಪ್ರಿಯ ʼಬೃಂದಾವನʼ (Brindavana) ಧಾರಾವಾಹಿಯ ಪ್ರಮುಖ ಪಾತ್ರಧಾರಿ ಬದಲಾಗಿದ್ದಾರೆ. ಹೌದು, ಆರಂಭದಲ್ಲೇ ಪ್ರೇಕ್ಷಕರ ಗಮನ ಸೆಳೆದಿದ್ದ ʼಬೃಂದಾವನʼ ಸೀರಿಯಲ್‌ನ ಪ್ರಮುಖ ಪಾತ್ರಧಾರಿ. ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಶ್ವನಾಥ್ ಹಾವೇರಿ ಹೊರ ನಡೆದಿದ್ದು, ಆ ಪಾತ್ರಕ್ಕೆ ವರುಣ್ ಆರಾಧ್ಯ ಬಂದಿದ್ದಾರೆ.
‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ.ಎಸ್. ರಾಮ್ ಜೀ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕೂಡು ಕುಟುಂಬದ ಕಥೆ ಹೊಂದಿರುವ ಈ ಧಾರಾವಾಹಿಯ ಆಕಾಶ್ ಪಾತ್ರದಲ್ಲಿ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಗಾಯಕ ವಿಶ್ವನಾಥ್ ಹಾವೇರಿ ಕಾಣಿಸಿಕೊಂಡಿದ್ದರು. ಆದರೆ ಸೀರಿಯಲ್‌ನ ಕೇವಲ 25ರಷ್ಟು ಸಂಚಿಕೆ ಮುಗಿಯುವಷ್ಟರಲ್ಲಿ ಅವರು ಬದಲಾಗಿದ್ದಾರೆ. ಸದ್ಯಕ್ಕೆ ಈ ಬದಲಾವಣೆಗೆ ಕಾರಣ ತಿಳಿದು ಬಂದಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ವರುಣ್ ಆರಾಧ್ಯ ಹೆಗಲಿಗೆ ಆಕಾಶ್ ಪಾತ್ರದ ಜವಾಬ್ದಾರಿ ಬಿದ್ದಿದೆ. ತುಂಬು ಕುಟುಂಬದ ಕುಡಿಯಾಗಿರುವ ಆಕಾಶ್ ಮದುವೆಯ ಸಿದ್ಧತೆ ನಡೆಯುತ್ತಿದ್ದು ಈ ಹೊತ್ತಿನಲ್ಲೇ ನಾಯಕನ ಬದಲಾವಣೆ ಅಚ್ಚರಿಗೆ ಕಾರಣವಾಗಿದೆ. ವರುಣ್ ನಟಿಸಿರುವ ಧಾರಾವಾಹಿಯ ಪ್ರೋಮೊವನ್ನು ಈಗಾಗಲೇ ವಾಹಿನಿ ಹೊರ ಬಿಟ್ಟಿದೆ. ಸದ್ಯ ಆಕಾಶ್ ಮತ್ತು ನಾಯಕಿ ಪುಷ್ಪಾ ನಡುವಿನ ಮದುವೆಯ ಸನ್ನಿವೇಶ ನಡೆಯುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತ ಜನಪ್ರಿಯರಾಗಿರುವ ವರುಣ್ ಆರಾಧ್ಯಗೆ ಉತ್ತಮ ಅವಕಾಶ ಸಿಕ್ಕಿದೆ. ಆದರೆ ಪ್ರೇಕ್ಷಕರು ಯಾವ ರೀತಿ ಈ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಕ್ಟೋಬರ್ 23ರಂದು ಈ ಸೀರಿಯಲ್ ಪ್ರಸಾರ ಆರಂಭಿಸಿತ್ತು.
ಇದನ್ನೂ ಓದಿ: Brindavana Serial Kannada: ಅಪರೂಪದ ಕತೆಯೊಂದಿಗೆ ʻಕನ್ನಡತಿ’ ಅಮ್ಮಮ್ಮ; ʻಬೃಂದಾವನʼಕ್ಕೆ ಯೋಗರಾಜ್ ಭಟ್ ಸಾಥ್!
ಕಥೆ ಏನು?
ಕಥೆಯು 36 ಸದಸ್ಯರ ವಿಶಾಲವಾದ ಅವಿಭಕ್ತ ಕುಟುಂಬದ ಸುತ್ತ ಸುತ್ತುತ್ತದೆ. ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ ಈ ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಅವರು ಸುಧಾ ಮೂರ್ತಿ ಎನ್ನುವ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥಾ ನಾಯಕ ಆಕಾಶ್ ತನ್ನ ವಿದ್ಯಾಭ್ಯಾಸ ಮುಗಿಸಿ ವಿದೇಶದಿಂದ ಹಿಂದಿರುಗುತ್ತಾನೆ. ಸುಧಾಮೂರ್ತಿಗೆ ತನ್ನ ಮೊಮ್ಮಗ ಆಕಾಶ್‌ನ ಮದುವೆ ನೋಡಬೇಕೆಂಬ ಆಸೆ. ಅದಕ್ಕಾಗಿ ಕೂಡು ಕುಟುಂಬದ ಎಲ್ಲರ ಒಪ್ಪಿಗೆ ಪಡೆಯುತ್ತಾರೆ. ಕೊನೆಗೆ ಪುಷ್ಪಾ ಎನ್ನುವ ಯುವತಿಯನ್ನು ಒಪ್ಪಿಕೊಳ್ಳುತ್ತಾರೆ. ಸದ್ಯ ಆಕಾಶ್-ಪುಷ್ಪಾ ಮದುವೆ ಸಿದ್ಧತೆ ನಡೆಯುತ್ತಿದೆ. ಪ್ರೋಮೊ ಮೂಲಕವೇ ಈ ಧಾರಾವಾಹಿ ಕುತೂಹಲ ಕೆರಳಿಸಿತ್ತು. ಅಮೂಲ್ಯ ಭಾರಾಧ್ವಾಜ್, ಸಂದೀಪ್ ಅಶೋಕ್, ಸುಂದರ್ ವೀಣಾ, ವೀಣಾ ಸುಂದರ್, ರಾಜೇಶ್ ಎಸ್.ರಾವ್, ಅನು ಪಲ್ಲವಿ ಗೌಡ, ಮಾನಸ ಗುರುಸ್ವಾಮಿ, ಯೋಗಿತಾ ಕುಂಬಾರ್, ವೈಷ್ಣವಿ ಗೌಡ, ಮಧುರಾ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ