Site icon Vistara News

Brindavana Serial Kannada: ʻಏನಾಗಲಿ ಮುಂದೆ ಸಾಗು ನೀʼಎಂದ ʻಬೃಂದಾವನʼ ಧಾರಾವಾಹಿ ಮಾಜಿ ನಾಯಕ!

Brindavana Serial Kannada Vishwanath Ravindra Haveri

ಬೆಂಗಳೂರು: ವೈವಿಧ್ಯಮಯ ಧಾರಾವಾಹಿ, ವಿವಿಧ ಕಾರ್ಯಕ್ರಮಗಳ ಮೂಲಕ ಕಲರ್ಸ್‌ ಕನ್ನಡ ವಾಹಿನಿ ಪ್ರೇಕ್ಷಕರ ಮನಗೆದ್ದಿದೆ. ಈ ಮಧ್ಯೆ ಜನಪ್ರಿಯ ʼಬೃಂದಾವನʼ (Brindavana Serial Kannada) ಧಾರಾವಾಹಿಯ ಪ್ರಮುಖ ಪಾತ್ರಧಾರಿ ಬದಲಾಗಿ, ಹಲವು ಚರ್ಚೆಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಆರಂಭದಲ್ಲೇ ಪ್ರೇಕ್ಷಕರ ಗಮನ ಸೆಳೆದಿದ್ದ ʼಬೃಂದಾವನʼ ಸೀರಿಯಲ್‌ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಶ್ವನಾಥ್‌ ಹಾವೇರಿ ಹೊರ ನಡೆದಿದ್ದು, ಆ ಪಾತ್ರಕ್ಕೆ ವರುಣ್‌ ಆರಾಧ್ಯ ಬಂದಿದ್ದರು. ಸಾಕಷ್ಟು ಜನ ವೀಕ್ಷಕರು ಆಕಾಶ್ ಪಾತ್ರದಲ್ಲಿ ವಿಶ್ವನಾಥ್ ಅವರೇ ನಟಿಸಬೇಕು ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದರು. ಆದರೀಗ ಏಕಾಏಕಿ ವಿಶ್ವನಾಥ್‌ ಅವರು ʼಏನಾಗಲಿ ಮುಂದೆ ಸಾಗು ನೀʼ ಎನ್ನುವ ಹಾಡನ್ನು ಪೋಸ್ಟ್‌ ಮಾಡಿದ್ದಾರೆ.

ಇದೀಗ ವಿಶ್ವನಾಥ್‌ ಈ ಎಲ್ಲ ಘಟನೆ ಆದ ಬಳಿಕ ಮುಂಬೈಗೆ ಹಾರಿದ್ದಾರೆ. ‘ಮುಸ್ಸಂಜೆ ಮಾತು’ ಚಿತ್ರದ ಸೂಪರ್ ಹಿಟ್ ‘ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲಾ ಸಿಗದು ಬಾಳಲಿ’ ಹಾಡು ಹಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ನಿಜಜೀವನಕ್ಕೆ ಹತ್ತಿರವಾಗುವಂತಿರುವ ಹಾಡನ್ನು ಹಾಡಿ ಪೋಸ್ಟ್ ಮಾಡಿದ್ದಾರೆ ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು. ಜತೆಗೆ ವಿಶ್ವನಾಥ್‌ ಅವರ ಜೀವನದ ಮುಂದಿನ ಪಯಣಕ್ಕೆ ಶುಭ ಹಾರೈಸುತ್ತಿದ್ದಾರೆ.

ಇನ್ನು ಕೆಲವರು ವಿಶ್ವನಾಥ್‌ ಅವರು ನೋಡಲು ಚಿಕ್ಕ ಹುಡುಗನಂತೆ ಕಾಣಿಸುತ್ತಿದ್ದ ಕಾರಣ ಧಾರಾವಾಹಿಯಿಂದ ಹೊರ ನಡೆದರು ಎಂದು ಕಮೆಂಟ್‌ ಕೂಡ ಮಾಡುತ್ತಿದ್ದಾರೆ ನೆಟ್ಟಿಗರು. ಈ ವಿವಾದ ಆದ ಬಳಿಕ ವಿಶ್ವನಾಥ್‌ ಅವರ ತಂದೆ ಮಾಧ್ಯಮದ ಮುಂದೆ ʻʻವಿಶ್ವನಾಥ್‌ಗೆ ನಟನೆ ಹೊಸದು. ಇದೆಲ್ಲ ನಮಗೆ ಗೊತ್ತಿಲ್ಲ. ನಮಗೆ ಈ ಬಗ್ಗೆ ಯಾವುದೇ ವಿಷಾದ ಇಲ್ಲʼʼ ಎಂದಿದ್ದರು.

‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ.ಎಸ್. ರಾಮ್‌ ಜೀ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕೂಡು ಕುಟುಂಬದ ಕಥೆ ಹೊಂದಿರುವ ಈ ಧಾರಾವಾಹಿಯ ಆಕಾಶ್‌ ಪಾತ್ರದಲ್ಲಿ ಬಿಗ್​ಬಾಸ್ ಸ್ಪರ್ಧಿಯಾಗಿದ್ದ ಗಾಯಕ ವಿಶ್ವನಾಥ್ ಹಾವೇರಿ ಕಾಣಿಸಿಕೊಂಡಿದ್ದರು. ಆದರೆ ಸೀರಿಯಲ್‌ನ 25ರಷ್ಟು ಸಂಚಿಕೆ ಮುಗಿಯುವಷ್ಟರಲ್ಲಿ ಅವರು ಬದಲಾಗಿದ್ದರು.

ಇದನ್ನೂ ಓದಿ: Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗಿರುವ ವರುಣ್‌ ಆರಾಧ್ಯ ಹೆಗಲಿಗೆ ಆಕಾಶ್‌ ಪಾತ್ರದ ಜವಾಬ್ದಾರಿ ಬಿದ್ದಿದೆ. ತುಂಬು ಕುಟುಂಬದ ಕುಡಿಯಾಗಿರುವ ಆಕಾಶ್‌ ಮದುವೆಯ ಸಿದ್ಧತೆ ನಡೆಯುತ್ತಿದ್ದು ಈ ಹೊತ್ತಿನಲ್ಲೇ ನಾಯಕನ ಬದಲಾವಣೆ ಅಚ್ಚರಿಗೆ ಕಾರಣವಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುತ್ತ ಜನಪ್ರಿಯರಾಗಿರುವ ವರುಣ್‌ ಆರಾಧ್ಯಗೆ ಉತ್ತಮ ಅವಕಾಶ ಸಿಕ್ಕಿದೆ. ಅಕ್ಟೋಬರ್ 23ರಂದು ಈ ಸೀರಿಯಲ್‌ ಪ್ರಸಾರ ಆರಂಭಿಸಿತ್ತು.

ಕಥೆ ಏನು?

ಕಥೆಯು 36 ಸದಸ್ಯರ ವಿಶಾಲವಾದ ಅವಿಭಕ್ತ ಕುಟುಂಬದ ಸುತ್ತ ಸುತ್ತುತ್ತದೆ. ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ ಈ ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಅವರು ಸುಧಾ ಮೂರ್ತಿ ಎನ್ನುವ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥಾ ನಾಯಕ ಆಕಾಶ್ ತನ್ನ ವಿದ್ಯಾಭ್ಯಾಸ ಮುಗಿಸಿ ವಿದೇಶದಿಂದ ಹಿಂದಿರುಗುತ್ತಾನೆ. ಸುಧಾಮೂರ್ತಿಗೆ ತನ್ನ ಮೊಮ್ಮಗ ಆಕಾಶ್‌ನ ಮದುವೆ ನೋಡಬೇಕೆಂಬ ಆಸೆ. ಅದಕ್ಕಾಗಿ ಕೂಡು ಕುಟುಂಬದ ಎಲ್ಲರ ಒಪ್ಪಿಗೆ ಪಡೆಯುತ್ತಾರೆ. ಕೊನೆಗೆ ಪುಷ್ಪಾ ಎನ್ನುವ ಯುವತಿಯನ್ನು ಒಪ್ಪಿಕೊಳ್ಳುತ್ತಾರೆ. ಸದ್ಯ ಆಕಾಶ್‌-ಪುಷ್ಪಾ ಮದುವೆ ಸಿದ್ಧತೆ ನಡೆಯುತ್ತಿದೆ. ಪ್ರೋಮೊ ಮೂಲಕವೇ ಈ ಧಾರಾವಾಹಿ ಕುತೂಹಲ ಕೆರಳಿಸಿತ್ತು. ಅಮೂಲ್ಯ ಭಾರಾಧ್ವಾಜ್, ಸಂದೀಪ್ ಅಶೋಕ್, ಸುಂದರ್ ವೀಣಾ, ವೀಣಾ ಸುಂದರ್, ರಾಜೇಶ್ ಎಸ್. ರಾವ್, ಅನು ಪಲ್ಲವಿ ಗೌಡ, ಮಾನಸ ಗುರುಸ್ವಾಮಿ, ಯೋಗಿತಾ ಕುಂಬಾರ್, ವೈಷ್ಣವಿ ಗೌಡ, ಮಧುರಾ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ.

Exit mobile version