ಬೆಂಗಳೂರು: ಭವ್ಯ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಮಾಹಿತಿ ನೀಡುವ ʼಸ್ವರಾಜ್-ಭಾರತ ಸ್ವಾತಂತ್ರ್ಯದ ಸಮಗ್ರ ಗಾಥೆʼ ಧಾರಾವಾಹಿಯ ಕನ್ನಡ ಆವೃತ್ತಿ ಆಗಸ್ಟ್ 20ನೇ ತಾರೀಖಿನಿಂದ ಚಂದನವಾಹಿನಿಯಲ್ಲಿ (DD Chandana) ಆರಂಭವಾಗಲಿದೆ.
ಪ್ರತಿ ಶನಿವಾರ ರಾತ್ರಿ ಎಂಟು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಪ್ರಸಾರವಾಗುವ ಈ ಧಾರಾವಾಹಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹಲವಾರು ಅಜ್ಞಾತವೀರರ ಹೋರಾಟದ ಯಶೋಗಾಥೆಯನ್ನು ಒಳಗೊಂಡಿದೆ.
ಬೆಂಗಳೂರು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ- ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಮಾಧ್ಯಮದವರೊಂದಿಗೆ ಮಾತನಾಡಿ ʻʻಪ್ರಮುಖ ಇತಿಹಾಸ ತಜ್ಞರ ತಂಡದ ಸಂಶೋಧನೆ ಆಧರಿಸಿ ಧಾರಾವಾಹಿಯ ಕಥೆಯನ್ನು ಹೆಣೆಯಲಾಗಿದೆ. ಸಮಗ್ರ ಮಾಹಿತಿಯನ್ನೊಳಗೊಂಡು ಧಾರಾವಾಹಿಯನ್ನು ನಿರ್ಮಾಣ ಮಾಡಲಾಗಿದೆ. ಕಳೆದ ೫ನೇ ತಾರೀಖಿನಂದು ದಿಲ್ಲಿಯ ಆಕಾಶವಾಣಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಖಾತೆ ಸಚಿವ ಅಮಿತ್ ಶಾ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್. ಮುರುಗನ್ ಧಾರಾವಾಹಿಗೆ ಚಾಲನೆ ನೀಡಿದ್ದರುʼʼ ಎಂದು ತಿಳಿಸಿದರು.
ಇದನ್ನೂ ಓದಿ | ಮಗಳು ಜಾನಕಿ ಧಾರಾವಾಹಿ | ಮುಂದುವರಿದ ಅಧ್ಯಾಯ ಇನ್ನು ನಿಮ್ಮ ಅಂಗೈಯಲ್ಲೆ!
ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ನಿರ್ಮಲಾ ಎಲಿಗಾರ್ ಮಾತನಾಡಿ, ʻʻಸ್ವಾತಂತ್ರ್ಯ ಗಳಿಸಿ 75 ವರ್ಷ ಸಂದ ಹಿನ್ನೆಲೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ಸಾಹಸಗಳು ತಾಯ್ನಾಡಿಗಾಗಿ ಮಾಡಿದ ತ್ಯಾಗ, ಬಲಿದಾನದ ಕತೆ ಮನೆಮನೆಯನ್ನೂ ಮುಟ್ಟಬೇಕು ಎನ್ನುವುದು ಈ ಧಾರಾವಾಹಿ ನಿರ್ಮಾಣದ ಉದ್ದೇಶʼʼ ಎಂದು ಹೇಳಿದರು.
ಪ್ರಸಾರದ ಮಾಹಿತಿ
ಧಾರಾವಾಹಿ ಶನಿವಾರ ರಾತ್ರಿ ಎಂಟರಿಂದ ಒಂಬತ್ತು ಗಂಟೆಗೆ ಪ್ರಸಾರವಾಗಲಿದೆ. ಅಲ್ಲದೆ, ಪ್ರತಿ ಸೋಮವಾರ ಸಂಜೆ ಐದು ಗಂಟೆಯಿಂದ ಆರು ಗಂಟೆ, ಬುಧವಾರದಂದು ರಾತ್ರಿ ಎಂಟರಿಂದ ಒಂಭತ್ತು ಗಂಟೆ ಮತ್ತು ಪ್ರತಿ ಶುಕ್ರವಾರ ಬೆಳಗ್ಗೆ ಹತ್ತರಿಂದ ಹನ್ನೊಂದು ಗಂಟೆಯವರೆಗೆ ಮರುಪ್ರಸಾರವಾಗಲಿದೆ. ಇದರ ಜತೆಗೆ ಆಕಾಶವಾಣಿ ತನ್ನೆಲ್ಲ ಬಾನುಲಿ ಕೇಂದ್ರಗಳಿಂದ ಪ್ರತಿ ಶನಿವಾರ ಬೆಳಗ್ಗೆ ಹನ್ನೊಂದರಿಂದ ಹನ್ನೆರಡು ಗಂಟೆ ಧಾರಾವಾಹಿಯ ಧ್ವನಿಮುದ್ರಣವನ್ನೂ ಬಿತ್ತರ ಮಾಡಲಿದೆ ಮತ್ತು ಪ್ರತಿ ಭಾನುವಾರ ಅಪರಾಹ್ನ ಮೂರರಿಂದ ನಾಲ್ಕು ಗಂಟೆವರೆಗೆ ಮರು ಪ್ರಸಾರವಾಗಲಿದೆ.
ದೂರದರ್ಶನ ಕೇಂದ್ರ ಮುಖ್ಯಸ್ಥರಾದ ಮಾಧವ ರೆಡ್ಡಿ, ಇಂಜನಿಯರಿಂಗ್ ವಿಭಾಗದ ಉಪಮಹಾನಿರ್ದೇಶಕ ಅನಿಲ್ ಕುಮಾರ್ ಮಂಗಳಗಿ, ಸುದ್ದಿ ವಿಭಾಗದ ಮುಖ್ಯಸ್ಥರಾದ ಮಯೂಷಾ ಉಪಸ್ಥಿತರಿದ್ದರು.
ಇದನ್ನೂ ಓದಿ | Udaya Tv Kannada | ಆಗಸ್ಟ್ 15ರಿಂದ ಬರುತ್ತಿದೆ ಹೊಚ್ಚ ಹೊಸ ಧಾರಾವಾಹಿ ಜನನಿ