ಬೆಂಗಳೂರು: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ (Ram Mandira) ಸೋಮವಾರ (ಜನವರಿ 22) ಪ್ರಾಣಪ್ರತಿಷ್ಠೆ ನೆರವೇರಿಸಲಾಗುತ್ತದೆ. ಚಿತ್ರರಂಗದಿಂದ ಹಲವು ಗಣ್ಯರು, ರಾಜಕಾರಣಿಗಳು ಸೇರಿದಂತೆ ಇಡೀ ಕಾರ್ಯಕ್ರಮದಲ್ಲಿ ಸುಮಾರು 10-15 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 36 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರ ಕಂಡ ʻರಾಮಾಯಣʼ ಸೀರಿಯಲ್ ದೇಶಾದ್ಯಂತ ಮನೆ ಮಾತಾಗಿತ್ತು. ರಾಮಾಯಣದ (1987) ಸೀತಾ ಪಾತ್ರಧಾರಿ ನಟಿ ದೀಪಿಕಾ ಚಿಖ್ಲಿಯಾ (Dipika Chikhlia) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ದೀಪಿಕಾ ಚಿಖ್ಲಿಯಾ ಮತ್ತು ಅರುಣ್ ಗೋವಿಲ್ ರಮಾನಂದಸಾಗರ್ ಅವರ ರಾಮಾಯಣದಲ್ಲಿ ಸೀತಾರಾಮ ಪಾತ್ರದಲ್ಲಿ ನಟಿಸಿದ್ದರು. ಅರುಣ್ ಗೋವಿಲ್ ಜನವರಿ 17 ರಂದು ಅಯೋಧ್ಯೆಗೆ ಆಗಮಿಸಿದ್ದರು. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ದೀಪಿಕಾ ಚಿಕ್ಲಿಯಾ ಸೀತಾ ದೇವಿ ಪಾತ್ರವನ್ನು ನಿರ್ವಹಿಸಿದ್ದರು. ದೂರದರ್ಶನದಲ್ಲಿ 78 ಸಂಚಿಕೆಯಲ್ಲಿ ರಾಮಾಯಣ ಪ್ರಸಾರ ಕಂಡಿತ್ತು.
ಮಾಧ್ಯಮವೊಂದರಲ್ಲಿ ನಟಿ ದೀಪಿಕಾ ಚಿಖ್ಲಿಯಾ ಮಾತನಾಡಿ ʻನಮ್ಮ ಚಿತ್ರವು ಇಂದಿಗೂ ಜನರ ಹೃದಯದಲ್ಲಿ ನೆಲೆಗೊಂಡಿದೆ. ರಾಮ ಮಂದಿರ ನಿರ್ಮಾಣದ ನಂತರವೂ ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ರಾಮ್ ಲಲ್ಲಾ ಅವರಿಗೆ ಜನರು ಸಾಕಷ್ಟು ಪ್ರೀತಿಯನ್ನು ನೀಡುತ್ತಿದ್ದಾರೆ. ರಾಮಾಯಣದ ಪಾತ್ರಗಳು ಕೂಡ ಇದೇ ರೀತಿಯ ಪ್ರೀತಿಯನ್ನು ಪಡೆಯುತ್ತಲೇ ಇರುತ್ತವೆʼʼಎಂದಿದ್ದಾರೆ.
ಇದನ್ನೂ ಓದಿ: Ayodhya Ram Mandir: ದೊಡ್ಡ ಪರದೆಯಲ್ಲೆ ಲೈವ್ ರಾಮ ಮಂದಿರ ಕಾರ್ಯಕ್ರಮ ವೀಕ್ಷಿಸಿ; ಟಿಕೆಟ್ ದರ ಎಷ್ಟು?
ದೀಪಿಕಾ ಚಿಖ್ಲಿಯಾ ಮೂಲತಃ ಮುಂಬೈನವರು. 1983ರಲ್ಲಿ ರಾಜ್ ಕಿರಣ್ ಜತೆಗಿನ ʻಸುನ್ ಮೇರಿ ಲೈಲಾʼ ಎಂಬ ಬಾಲಿವುಡ್ ಚಲನಚಿತ್ರದೊಂದಿಗೆ ನಟನೆಗೆ ಪದಾರ್ಪಣೆ ಮಾಡಿದರು. ವರ್ಷಗಳ ಕಾಲ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. 1987 ರಲ್ಲಿ ಟಿವಿ ಶೋ ರಾಮಾಯಣದ ಸೀತಾ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡರು. ಕನ್ನಡ, ಮಲಯಾಳಂ, ಭೋಜ್‌ಪುರಿ, ಬಂಗಾಳಿ ಮತ್ತು ತೆಲುಗು ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಇದು ಮೂಡಿ ಬಂದಿತ್ತು.
ಪ್ರೊಸೆನ್‌ಜಿತ್ ಚಟರ್ಜಿ ಅವರೊಂದಿಗಿನ ಅವರ ಬಂಗಾಳಿ ಚಲನಚಿತ್ರ ಆಶಾ ಓ ಭಲೋಬಾಷಾ (1989) ಸೂಪರ್‌ಹಿಟ್ ಆಗಿತ್ತು. ಹಾಗೆಯೇ ಶಂಕರ್ ನಾಗ್ ಅವರೊಂದಿಗೆ ಹೊಸ ಜೀವನ (1990) ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ನಟನೆಯ ಹೊರತಾಗಿ, ದೀಪಿಕಾ ಚಿಖ್ಲಿಯಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದರು. 1991ರಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.