ಬೆಂಗಳೂರು; 1988ರಿಂದ 1990ರವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಬಿ ಆರ್ ಚೋಪ್ರಾ ಅವರ ಜನಪ್ರಿಯ ಧಾರಾವಾಹಿ ಮಹಾಭಾರತದಲ್ಲಿ ʻಶಕುನಿ ಮಾಮಾʼ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟ ಗುಫಿ ಪೈಂಟಲ್ (Gufi Paintal) ಜೂನ್ 5ರಂದು ನಿಧನರಾಗಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 78 ವರ್ಷ ವಯಸ್ಸಾಗಿತ್ತು. ಜೂನ್ 5ರ ಸೋಮವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಹಾಭಾರತದಲ್ಲಿ ʻಶಕುನಿ ಮಾಮಾʼ ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಮರೆಯುವುದು ಅಸಾಧ್ಯವೆಂದೇ ಹೇಳಬೇಕು. ಇದೀಗ ಗುಫಿ ಪೈಂಟಲ್ ಬಾರದ ಲೋಕಕ್ಕೆ ಹೋಗಿದ್ದಾರೆ. ನಟ ಗುಫಿ ಪೈಂಟಲ್ ಅವರ ಸೋದರಳಿಯ ಹಿತೇನ್ ಪೈಂಟಲ್ ಮಾಧ್ಯಮಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ “ ಗುಫಿ ಪೈಂಟಲ್ ದುರದೃಷ್ಟವಶಾತ್ ಜೂನ್ 5ರ ಬೆಳಗ್ಗೆ 9ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯ ಮತ್ತು ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರುʼʼ ಎಂದು ಮಾಹಿತಿ ನೀಡಿದ್ದಾರೆ.
ಗುಫಿ ಪೈಂಟಲ್ ಅವರು ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ ಕಾಯಿಲೆಯಿಂದ ಬಳಲುತ್ತಿದ್ದರು. ಏಳೆಂಟು ದಿನಗಳಿಂದ ಆಸ್ಪತ್ರೆಯಲ್ಲಿದ್ದರು ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಇಂದು ಸಂಜೆ 4 ಗಂಟೆಗೆ ಮುಂಬಯಿ ಉಪನಗರ ಅಂಧೇರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
RIP Gufi Paintal
— કૃષ્ણમ 🇮🇳 (@OsmKrishh) June 5, 2023
💐💐💐💐💐#Mahabharat #GufiPaintal pic.twitter.com/EFKCBm0dP4
ಗುಫಿ ಪೈಂಟಲ್ ಹಿಂದಿ ಚಲನಚಿತ್ರಗಳ ಹೊರತಾಗಿ, 1980ರ ದಶಕದಲ್ಲಿ ಕೆಲವು ಟಿವಿ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದರು. ನಟನೆಯ ಮೊದಲು ಎಂಜಿನಿಯರ್ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್‌ನಲ್ಲಿ ಪ್ರಾರಂಭಿಸಿದರು. 1975ರ ʻರಫೂ ಚಕ್ಕರ್ʼ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು. ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.