ಬೆಂಗಳೂರು: ಸುಮಾರು ಎರಡು ವಾರಗಳಿಂದ ನಾಪತ್ತೆಯಾಗಿರುವ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ (Taarak Mehta Ka Ooltah Chashmah) ಧಾರವಾಹಿ ನಟ ಗುರುಚರಣ್ ಸಿಂಗ್ (Gurucharan Singh) ಅವರು ಭರ್ಜರಿ ಪ್ಲ್ಯಾನ್ ಮಾಡಿಯೇ ನಗರ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ. ಗುರುಚರಣ್ ತನ್ನ ಫೋನ್ ಅನ್ನು ದೆಹಲಿಯ ಪಾಲಂ ಪ್ರದೇಶದಲ್ಲಿ ಬಿಟ್ಟು ನಗರದಿಂದ ಹೊರಗೆ ಹೋಗಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಗುರುಚರಣ್ ಸಿಂಗ್ ನಾಪತ್ತೆಯಾದ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು?
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, “ಗುರುಚರಣ್ ಸಿಂಗ್ ತನ್ನ ಫೋನ್ ಅನ್ನು ಪಾಲಂ ಪ್ರದೇಶದಲ್ಲಿ ಬಿಟ್ಟಿದ್ದಾರೆ. ನಾವು ಕೂಡ ಅವರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಆದರೆ ಗುರುಚರಣ್ ಸಿಂಗ್ ಅವರನ್ನು ಪತ್ತೆಹಚ್ಚಲು ನಮಗೆ ಕಷ್ಟವಾಗುತ್ತಿರುವ ಕಾರಣ ಅವರ ಬಳಿ ಫೋನ್ ಕೂಡ ಇಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿ ನಟ ಒಂದು ರಿಕ್ಷಾದಿಂದ ಇನ್ನೊಂದಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಅವರು ಎಲ್ಲ ಫ್ಲ್ಯಾನ್ ಪ್ರಕಾರವಾಗಿಯೇ ದೆಹಲಿ ಬಿಟ್ಟು ಹೋಗಿದ್ದಾರೆʼʼಎಂದು ವರದಿಯಾಗಿದೆ.
ಏಪ್ರಿಲ್ 22ರಂದು ಸಂಜೆ ನಟ ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದರು. ಏಪ್ರಿಲ್ 22ರಂದು ರಾತ್ರಿ 8.30 ಕ್ಕೆ ಮಗ ಮುಂಬೈಗೆ ತೆರಳಿದ್ದ ಎಂದು ತಂದೆ ದೂರು ನೀಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ʻʻಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದರು. ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದರು. ಆದರೆ ಅವರು ಮುಂಬೈಗೆ ತಲುಪಿಲ್ಲ. ಬದಲಾಗಿ ಬೆಳಗ್ಗೆ 9.14ರ ಸುಮಾರಿಗೆ ಪಾಲಂʼನಲ್ಲಿ ನಟ ಕಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Gurucharan Singh: ನಿಗೂಢವಾಗಿ ನಾಪತ್ತೆಯಾದ ಈ ನಟನಿಗೆ ಶೀಘ್ರದಲ್ಲೇ ಮದುವೆ!
ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.