ಬೆಂಗಳೂರು: ಬಿಗ್ ಬಾಸ್ ಸೀಸನ್ 10 ಮುಗಿದು ಇಷ್ಟು ದಿನ ಕಳೆದರು ಅದರ ಕ್ರೇಜ್ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ಡ್ರೋನ್ ಪ್ರತಾಪ್ (Drone Prathap) ಅವರು ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಹೊಸಪೇಟೆಯಲ್ಲಿ ʻಕೆಂಡಸಂಪಿಗೆʼ ಸೀರಿಯಲ್ ಸಂತೆ ಆಗಿದೆ. ಅದರಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ವಿನಯ್ ಅವರು ಆನೆಯ ಮೂಲಕ ಬಂದಿದ್ದರೆ, ಡ್ರೋನ್ ಪ್ರತಾಪ್ ಗರುಡದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೋಮೊ ವೈರಲ್ ಆಗಿದೆ. ಮಾತ್ರವಲ್ಲ ಪ್ರತಾಪ್ ಕೂಡ ಸಖತ್ ಆಗಿಯೇ ವೆದಿಕೆ ಮೇಲೆ ಸ್ಟೆಪ್ಸ್ ಹಾಕಿದರು.
ಪ್ರೋಮೊದಲ್ಲಿ ವಿನಯ್ ಹಾಗೂ ಡ್ರೋನ್‌ಗೆ ನಿರೂಪಕ ನಿರಂಜನ್ ಹಲವಾರು ಪ್ರಶ್ನೆಗಳನ್ನೂ ಕೇಳಿದ್ದರು. ಇದೇ ಸಮಯದಲ್ಲಿ ವಿನಯ್ ಅವರು ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ʻʻಎಲ್ಲಿಗೆ ಹೋದರೂ ತಮಗೆ ಎಲ್ಲರೂ ಗೌರವ ಕೊಡಬೇಕು, ಚಪ್ಪಾಳೆಯಿಂದ ಬರಮಾಡಿಕೊಳ್ಳಬೇಕು ಎನ್ನುವ ಕನಸು ಇತ್ತು. ಅದೆಲ್ಲ ಬಿಗ್ಬಾಸ್ಗೆ ಹೋಗಿ ಬಂದ ಮೇಲೆ ಕನಸಾಗಿದೆʼʼ ಎಂದಿದ್ದಾರೆ. ಇದೇ ವೇಳೆ ನಿರೂಪಕ, ಡ್ರೋನ್ ಪ್ರತಾಪ್ ಅವರಿಗೆ ʻನೀವ್ಯಾಕೆ ಬಿಗ್‌ಬಾಸ್ ಕಪ್ ಗೆಲ್ಲಲಿಲ್ಲ?ʼ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರತಾಪ್ ನಗುವಿನ ಮೂಲಕ ಉತ್ತರ ನೀಡಿದ್ದಾರೆ. ಇದಕ್ಕೆ ಏನು ಉತ್ತರ ನೀಡಿದ್ದಾರೆ ಎನ್ನುವುದು ಕೆಂಡಸಂಪಿಗೆ ಸೀರಿಯಲ್ ಸಂತೆ ನೋಡಿದರೆ ಗೊತ್ತಾಗಲಿದೆ.
ಇದನ್ನೂ ಓದಿ: Drone Prathap: ಬಿಗ್‌ಬಾಸ್ ವೇದಿಕೆಯಲ್ಲಿ ನುಡಿದಂತೆ ನಡೆದ ಡ್ರೋನ್ ಪ್ರತಾಪ್; ಅಭಿಮಾನಿಗಳಿಂದ ಮೆಚ್ಚುಗೆ
ಇನ್ನೊಂದು ಪ್ರೋಮೊದಲ್ಲಿ ಕೂಡ ಹೊಸಪೇಟೆ ಯುವತಿಯರು ಕಾರ್ತಿಕ್ ಹಾಗೂ ವಿನಯ್ ಅವರ ಫ್ರೆಂಡ್‌ಶಿಪ್ ಇಷ್ಟ ಎಂದು ಹೇಳಿದ್ದಾರೆ. ಅದೇ ರೀತಿ ಹೊಸಪೇಟೆಯ ಯುವತಿಯರು ಡ್ರೋನ್ ಪ್ರತಾಪ್ ಅವರಿಗೆ, ʻನೀವು ಎಂದರೆ ತುಂಬಾ ಇಷ್ಟ. ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆʼ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್ ಪ್ರತಾಪ್ ನಾಚಿ ನೀರಾಗಿದ್ದಾರೆ. ʻಕೆಂಡಸಂಪಿಗೆ ಸೀರಿಯಲ್ ಸಂತೆʼ ಇದೇ ಭಾನುವಾರ ಸಂಜೆ 4.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10 (Bigboss kannada season 10)ರ ಪ್ರಬಲ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ (Drone Prathap) ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಸದ್ಯ ಅವರು ಅಭಿಮಾನಿಗಳ ಭೇಟಿ, ರಿಯಾಲಿಟಿ ಶೋ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಬಿಡುವಿಲ್ಲದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್ ದಾನ ಮಾಡಿದ ಪ್ರತಾಪ್
ಬಿಗ್‌ಬಾಸ್ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್, ತಾನು ಬಿಗ್‌ಬಾಸ್ ಗೆದ್ದರೆ ಬರುವ ಹಣ, ಇನ್ನಿತರ ಉಡುಗೊರೆಗಳನ್ನು ಅರ್ಹರಿಗೆ ದಾನ ಮಾಡುವುದಾಗಿ ಹೇಳಿದ್ದರು. ರನ್ನರ್ ಅಪ್ ಆಗಿದ್ದ ಪ್ರತಾಪ್ಗೆ 10 ಲಕ್ಷ ರೂ. ಬಹುಮಾನದ ಜತೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಾಗಿ ನೀಡಲಾಗಿತ್ತು. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.