ಬೆಂಗಳೂರು: ಈ ವಾರ ವೀಕೆಂಡ್ ವಿತ್ ರಮೇಶ್ ಶೋದಲ್ಲಿ (Weekend With Ramesh) ಸಾಹಿತಿ, ಅಪ್ಪಟ ದೇಸೀ ಕವಿ, ಗ್ರಾಮ್ಯ ಸಾಹಿತ್ಯದ ಮೇರು ಶಿಖರ, ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಹಾಗೂ ನಟನೆ, ನಿರ್ದೇಶನ, ನಿರ್ಮಾಣಕ್ಕೂ ಜೈ ಎಂದ ಕಲಾವಿದ ಜೈ ಜಗದೀಶ್ ಅತಿಥಿಯಾಗಿದ್ದಾರೆ. ಇಬ್ಬರು ಅತಿಥಿಗಳ ಎಪಿಸೋಡ್ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಈಗಾಗಲೇ ಹಂಚಿಕೊಂಡಿದೆ.
ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾದವರು ದೊಡ್ಡರಂಗೇಗೌಡರು
ದೊಡ್ಡರಂಗೇಗೌಡರು ಕನ್ನಡದ ಕವಿ, ಸಾಹಿತಿ , ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ʻಕನ್ನಡ ಪ್ರಗಾಥಗಳ ಸಾಮ್ರಾಟ್ʼ ಎಂದೂ ಪ್ರಸಿದ್ಧಿಯಾಗಿದ್ದಾರೆ.
ನೋಟದಾಗೆ ನಗೆಯ ಬೀರಿ, ನಮ್ಮೂರ ಮಂದಾರ ಹೂವೆ, ತೇರಾ ಏರಿ ಅಂಬರದಾಗೆ ಹಾಡುಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಹಾಡುಗಳನ್ನು ದೊಡ್ಡರಂಗೇಗೌಡರು ಬರೆದಿದ್ದಾರೆ. 10 ಸಿನಿಮಾಕ್ಕೆ ಸಂಭಾಷಣೆ ಹಾಗೂ 100ಕ್ಕೂ ಹೆಚ್ಚು ಕಿರು-ಧಾರಾವಾಹಿಗಳಿಗೆ ಚಿತ್ರಕತೆ ಬರೆದಿದ್ದಾರೆ. ದೊಡ್ಡರಂಗೇಗೌಡರು ‘ಮಾಗಿಯ ಕನಸು’ ಚಿತ್ರದಲ್ಲಿ ಮತ್ತು ಸಾಧನೆ ಶಿಖರ ಚಲನಚಿತ್ರದಲ್ಲಿ ನಟಿಸಿದ್ದಾರೆ. ‘ಹಾರುವ ಹಂಸಗಳುʼ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ದೊಡ್ಡರಂಗೇಗೌಡರು ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿಯರು ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದವರು. ಈ ಬಗ್ಗೆಯೂ ದೊಡ್ಡರಂಗೇಗೌಡರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: Weekend With Ramesh: ಸಾಧಕರ ಸೀಟ್‌ನಲ್ಲಿ ಕವಿತೆ, ಚಲನಚಿತ್ರ ಹಾಡುಗಳನ್ನು ಬರೆದ ಸಾಹಿತಿ ಡಾ. ನಾಗೇಂದ್ರ ಪ್ರಸಾದ್!
ನಟನೆ, ನಿರ್ದೇಶನ, ನಿರ್ಮಾಣಕ್ಕೂ ಜೈ ಎಂದ ಕಲಾವಿದ
1976ರಲ್ಲಿ ಫಲಿತಾಂಶ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಜೈ ಜಗದೀಶ್ ನಾಯಕ ನಟನಾಗಿ, ಪೋಷಕನಟನಾಗಿ, ಖಳನಟನಾಗಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ., ಕನ್ನಡದ ಜನಪ್ರಿಯ ನಟ. ಪುಟ್ಟಣ್ಣ ಕಣಗಾಲ್ರಿಂದ 1976 ರಲ್ಲಿ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ಜೈ ಜಗದೀಶ್ ಐದು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಾಯಕನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿರುವ ಜೈ ಜಗದೀಶ್, ಶಿವರಾಜ್ ಕುಮಾರ್ ನಟನೆಯ ʻಭೂಮಿ ತಾಯಿ ಚೊಚ್ಚಲ ಮಗʼ ಸಿನಿಮಾ ಮೂಲಕ ನಿರ್ಮಾಣಕ್ಕೂ ಕೈ ಹಾಕಿದರು.
ಕೆಲವು ಸಿನಿಮಾಗಳ ನಿರ್ದೇಶನವನ್ನೂ ಜೈ ಜಗದೀಶ್ ಮಾಡಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು, ಮದುವೆ ಮಾಡು ತಮಾಷೆ ನೋಡಿ, ಗರ್ಜನೆ, ಪಡುವಾರಹಳ್ಳಿ ಪಾಂಡವರು’,`ಗಾಳಿ ಮಾತು’ ಇನ್ನೂ ಹಲವು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಇವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ,ನಿರ್ದೇಶಕಿಯಾಗಿ ಪ್ರಸಿದ್ಧರಾಗಿದ್ದಾರೆ.