ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಧಾರಾವಾಹಿಯಾಗಿ ಜನಪ್ರಿಯವಾಗಿರುವ “ಜೊತೆ ಜೊತೆಯಲಿʼ (Jote Joteyali ) ಧಾರಾವಾಹಿಯಿಂದ ನಟ ಅನಿರುದ್ಧ್ ಅವರನ್ನು ಕೈಬಿಡುವುದು ಬಹುತೇಕ ನಿಶ್ಚಿತವಾಗಿದೆ. ಜತೆಗೆ ಬೇರೆ ಯಾವುದೇ ಧಾರಾವಾಹಿ ಅಥವಾ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ್ ಅವರನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಕಿರುತೆರೆ ನಿರ್ಮಾಪಕರ ಸಂಘ ನಿರ್ಧಾರ ತಗೆದುಕೊಂಡಿದೆ. ನಿರ್ಮಾಪಕ ಆರೂರ್ ಜಗದೀಶ್ ಅವರ ದೂರಿನ ಮೇರೆಗೆ ಕಿರುತೆರೆ ನಿರ್ಮಾಪಕರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ನಿರ್ಮಾಪಕರ ಸಂಘದ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.
‘ಶೂಟಿಂಗ್ ಸೆಟ್‌ನಲ್ಲಿ ನಿರ್ದೇಶಕರಿಗೆ ಅನಿರುದ್ಧ್ ಅವರು ನಿಂದಿಸಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಸೆಟ್‌ನಲ್ಲಿ ಸ್ಕ್ರಿಪ್ಟ್ ವಿಚಾರಕ್ಕೆ ಅವರು ಪದೇಪದೆ ಜಗಳವಾಡುತ್ತಿದ್ದರು. ಇದರಿಂದಾಗಿ ನಿರ್ಮಾಪಕ ಆರೂರು ಜಗದೀಶ್ ತೀವ್ರ ನೊಂದಿದ್ದಾರೆ’ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ನಿರ್ಮಾಪಕರ ಸಂಘ ಈ ಕುರಿತು ಎಲ್ಲ ವಾಹಿನಿಗಳಿಗೆ ಪತ್ರ ಬರೆದಿದ್ದು, ಎರಡು ವರ್ಷಗಳ ಕಾಲ ಅನಿರುದ್ಧ್ ಅವರನ್ನು ಬ್ಯಾನ್ ಮಾಡಬೇಕು ಎಂದು ಕೋರಿದೆ.
ಇದನ್ನೂ ಓದಿ | Jote Joteyali | ಧಾರಾವಾಹಿ ಖ್ಯಾತಿಯ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್ ಆಗುತ್ತಿದ್ದಾರಾ? ಹೇಳಿದ್ದೇನು?
ಅನಿರುದ್ಧ ಹೇಳೋದೇನು?
ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿರುವ ಅನಿರುದ್ಧ್ ʻʻನಾನು ರಂಗಭೂಮಿಯಿಂದ ಬಂದ ಕಲಾವಿದ. ವೀಕ್ಷಕರ ಹಾರೈಕೆಯಿಂದ ಯಶಸ್ಸು ಸಿಕ್ಕಿದೆ. ಚಿತ್ರೀಕರಣಕ್ಕಾಗಿ ನಾನು ಶ್ರಮ ವಹಿಸಿದ್ದೇನೆ. ಸಾಕಷ್ಟು ಹೋಮ್‌ವರ್ಕ್ ಮಾಡಿದ್ದೇನೆ. ನನಗೆ ದುರಹಂಕಾರ ಎಂದು ಆರೋಪಿಸಿದ್ದಾರೆ. ನನ್ನಲ್ಲಿ ದುರಂಹಂಕಾರ ಇದ್ದಿದ್ದರೆ ಅದು ನಟನೆಯಲ್ಲಿ ಮಾತ್ರ. ನಿರ್ದೇಶಕರು ಅವರ ಮಕ್ಕಳ ಮೇಲೆ ಕೈಯಿಟ್ಟು ಹೇಳಲಿ. ಕ್ಯಾರವಾನ್ ಇಲ್ಲದೇ ನಟಿಸಲ್ಲ ಎಂದಿದ್ದು ಸುಳ್ಳು ಆರೋಪ. ಮಧ್ಯಮ ವರ್ಗದ ವ್ಯಕ್ತಿ ನಾನು. ಈ ಪಾತ್ರಕ್ಕಾಗಿ 12 ಕೆ.ಜಿ ತೂಕ ಇಳಿಸಿಕೊಂಡಿದ್ದೆ. ಒಂದೊಂದಾಗಿ ಸ್ಕ್ರಿಪ್ಟ್ ಕಳುಹಿಸಲು ಹೇಳಿದ್ದೆ. ಅದು ಕೇಳಿದ್ದು ನನ್ನ ತಪ್ಪಾ? “ಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ನಟನೆಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಧಾರಾವಾಹಿ ಯಶಸ್ಸು ನನ್ನಿಂದಲೇ ಎಂದು ಭಾವಿಸಿಲ್ಲʼʼ ಎಂದು ಪ್ರತಿಕ್ರಿಯಿಸಿದ್ದಾರೆ.
ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಮಿಂಚಿದ್ದ ನಟ ಅನಿರುದ್ಧ್ ಅವರು “ಜೊತೆ ಜೊತೆಯಲಿʼ ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು. ಇದೀಗ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಅವರನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ನಿರ್ಧಾರ ಅನಿರುದ್ಧ್ ವೃತ್ತಿ ಬದುಕಿನ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ | Self Marriage | ಸ್ವಯಂ ಮದುವೆಯಾದ ಕಿರುತೆರೆ ನಟಿ, ದೇಶದಲ್ಲೇ ದ್ವಿತೀಯ ʼವಿಶೇಷ ಬಂಧನʼ