ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಬಹಿಷ್ಕರಿಸಲು ತೀರ್ಮಾನಿಸಿದೆ. ಈ ಕುರಿತು ನಿರ್ಮಾಪಕ ಆರೂರು ಜಗದೀಶ್ ಕೂಡ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಭಾನುವಾರ ಮಾಧ್ಯಮದವರೊಂದಿಗೆ ನಟ ಅನಿರುದ್ಧ್ ಮಾತನಾಡಿ “ಜೊತೆ ಜೊತೆಯಲಿ ಧಾರಾವಾಹಿ ಯಶಸ್ಸಿಗೆ ನಾನೇ ಕಾರಣ ಎಂದು ನಾನು ಯಾವತ್ತೂ ಅಂದುಕೊಂಡಿಲ್ಲ. ಟೀಮ್ ವರ್ಕ್‌ನಿಂದ ಯಶಸ್ಸು ಸಿಕ್ಕಿದೆʼʼ ಎಂದು ಹೇಳಿಕೆ ನೀಡಿದ್ದಾರೆ.
ನಟ ಅನಿರುದ್ಧ್ ಮಾತನಾಡಿ ʻʻನಾನು ಎಂದೂ ದುರಹಂಕಾರದಿಂದ ನಡೆದುಕೊಂಡಿಲ್ಲ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಳಿತಿದ್ದ ಹಲವಾರು ಜನ ನನಗೆ ಗೊತ್ತೇ ಇಲ್ಲ. ಸೆಟ್‌ನಲ್ಲಿ ನಾನು ಕೋಪಿಸಿಕೊಂಡಿಲ್ಲ ಎನ್ನಲಾರೆ. ಮನುಷ್ಯ ಅಂದ ಮೇಲೆ ಕೆಲಸದ ವೇಳೆ ಕೋಪಿಸಿಕೊಳ್ಳುವುದು ಸಹಜʼʼ ಎಂದಿದ್ದಾರೆ.
ಇದನ್ನೂ ಓದಿ | Jote Joteyali | 3000 ಕೋಟಿ ಒಡೆಯನನ್ನು ಈ ಥರ ತೋರಿಸೋದಾ? ನಿರ್ದೇಶಕರ ವಿರುದ್ಧ ಅನಿರುದ್ಧ್ ಆಕ್ರೋಶ!
“ಈ ಪ್ರಕರಣ ಆದಾಗಿನಿಂದಲೂ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಹೆದರಬೇಡಿ ಸರ್, ನಾವು ನಿಮ್ಮನ್ನು ನಂಬುತ್ತೇವೆ ಎನ್ನುತ್ತಿದ್ದಾರೆ. ನನ್ನ ಕುರಿತು ಸಾಕಷ್ಟು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅದು ನನ್ನ ಯಶಸ್ಸು. ಇನ್‌ಸೆಕ್ಯೂರಿಟಿ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಆ ಕುರಿತು ನಾನು ಖಿನ್ನತೆಗೆ ಒಳಗಾಗುವುದಿಲ್ಲ. ನನಗೆ ಮುಂದೆ ಕೆಲಸ ಸಿಕ್ಕೇ ಸಿಗುತ್ತದೆ. ಅಭಿನಯವೊಂದೇ ನನ್ನ ಕೆಲಸ ಅಲ್ಲ. ನಾನು ಲೇಖನಗಳನ್ನೂ ಬರೆಯುತ್ತೇನೆ. ಹಾಡು ಹಾಡುತ್ತೇನೆ. ಆಫ್ ದಿ ರೆಕಾರ್ಡ್ ನೀವು ಸಹಕಲಾವಿದರನ್ನು ಕೇಳಿ ನಾನು ಹೇಗೆ ಎಂದು. ನಾನು ಕೋಪಿಸಿಕೊಳ್ಳುವುದಕ್ಕೆ ಕಾರಣ ಇದೆʼʼ ಎಂದು ಹೇಳಿದ್ದಾರೆ.
“ನನ್ನ ಜತೆ ಕೂತು ಮಾತನಾಡಿ ಅವರು ಗೊಂದಲ ಬಗೆಹರಿಸಿಕೊಳ್ಳಬಹುದಿತ್ತು. ಯೋಚನೆ ಮಾಡಿ ಸ್ಕ್ರಿಪ್ಟ್ ಬರೆಯಿರಿ ಎಂದಿದ್ದೆ. ಸುಮ್ಮನೆ ಆರೋಪಗಳನ್ನು ಮಾಡಬಾರದು. ನಾನು ಕ್ಯಾರವನ್ ಇಲ್ಲದೆ ಕಾಡಿನಲ್ಲಿ ಟಾಯ್ಲೆಟ್‌ಗೆ ಹೋಗಿದ್ದೇನೆ. ಹೆಣ್ಣು ಮಕ್ಕಳಿಗೆ ಕೆಟ್ಟ ಜಾಗದಲ್ಲಿ ಬಟ್ಟೆ ಬದಲಾಯಿಸಲು ಹೇಳುತ್ತಿದ್ದರು. ಇದನ್ನು ನಾನು ವಿರೋಧಿಸುತ್ತಿದ್ದೆʼʼ ಎಂದಿದ್ದಾರೆ ಅನಿರುದ್ಧ್.
ನಟ ಅನಿರುದ್ಧ್ ಅವರು “ಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಜನಮನ್ನಣೆ ಪಡೆದಿದ್ದರು. ಇದೀಗ ಅವರನ್ನು ಬ್ಯಾನ್ ಮಾಡಿರುವುದು ಕಿರುತೆರೆ ವೀಕ್ಷಕ ವಲಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ | Jote Joteyali | ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಇಲ್ಲದೇ ಸೀರಿಯಲ್ ನೋಡೋದಿಲ್ಲ: ಪ್ರೇಕ್ಷಕರ ಮುನಿಸು!