Site icon Vistara News

Kanyaadaana Serial: ʼಕನ್ಯಾದಾನʼ ಧಾರಾವಾಹಿಯ ವಿಶೇಷ ಪಾತ್ರದಲ್ಲಿ ಮಿಂಚಿದ ಅನಿತಾ ಭಟ್‌

kanyaadaana

kanyaadaana

ಬೆಂಗಳೂರು: ಕಿರುತೆರೆಯ ಮನರಂಜನೆಯ ಮಹಾರಾಜ ಉದಯ ವಾಹಿನಿ(Udaya TV)ಯಲ್ಲಿ ತನ್ನದೇ ಛಾಪು ಮೂಡಿಸಿರುವ ಜನಪ್ರಿಯ ಧಾರಾವಾಹಿ ʼಕನ್ಯಾದಾನʼ (Kanyaadaana Serial). ತನ್ನ ಐದು ಹೆಣ್ಣುಮಕ್ಕಳ ಜೀವನ ಸುಂದರವಾಗಿರಬೇಕು ಅಂತ ಪರಿತಪಿಸುವ ತಂದೆಯ ಭಾವನಾತ್ಮಕ ಹೋರಾಟದ ಕಥೆಯೇ ಇದರಲ್ಲಿದೆ.

ಈಗಾಗಲೇ 600 ಸಂಚಿಕೆಯ ಗಡಿ ದಾಟಿ ಕನ್ನಡಿಗರ ಮನೆಮಾತಾಗಿರುವ ʼಕನ್ಯಾದಾನʼ ಧಾರಾವಾಹಿ ಹೆಣ್ಣಿನ ಜೀವನದ ವಿವಿಧ ಮಜಲುಗಳನ್ನು, ಗಂಡನ ಮನೆಯಲ್ಲಿ ಎದುರಿಸಬೇಕಾದ ಗೋಜಲುಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿದೆ. ವೀಕ್ಷಕರ ಮನರಂಜನೆಗೆ ಮೊದಲ ಆದ್ಯತೆ ನೀಡುವ ಈ ಜನಪ್ರಿಯ ಧಾರಾವಾಹಿಯಲ್ಲಿ ವಿಶೇಷ ಸಂಚಿಕೆಗಳ ಪ್ರಯೋಗ ಇದೇ ಮೊದಲೇನಲ್ಲ. ಈ ಹಿಂದೆ ಸ್ಯಾಂಡಲ್‌ವುಡ್‌ನ ನಟಿಯರಾದ ಸುಧಾರಾಣಿ ಹಾಗೂ ನೀತು ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಸದ್ಯ ಧಾರಾವಾಹಿಯಲ್ಲಿ ಬರುವ ಅನಿರೀಕ್ಷಿತ ತಿರುವೊಂದರಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಅನಿತಾ ಭಟ್‌ ವಿಶೇಷ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರೆದರೂ ಸಾಮಾಜಿಕ ಅನಿಷ್ಠ ಪಿಡುಗುಗಳಿಂದ ಹೆಣ್ಣುಮಕ್ಕಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಹೆಣ್ಣು ಭ್ರೂಣ ಹತ್ಯೆಯಂತಹ ಅನಿಷ್ಠ ಪದ್ಧತಿ ವಿದ್ಯಾವಂತ ನಾಗರಿಕ ಸಮಾಜದಿಂದ ಇನ್ನೂ ಮರೆಯಾಗಿಲ್ಲ. ಮಾನವ ಸಮಾಜ ತಲೆ ತಗ್ಗಿಸುವಂತಹ ಈ ಪದ್ಧತಿಯನ್ನು ತಡೆಗಟ್ಟುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿತಾ ಭಟ್‌ ಈ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ತಮ್ಮ ನಿಲುವುಗಳ ಮೂಲಕ ಉತ್ತರಿಸಿದ್ದಾರೆ.

ಕನ್ಯಾದಾನ ಧಾರಾವಾಹಿಯಲ್ಲಿ ನಿಮ್ಮ ಪಾತ್ರ ಏನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅನಿತಾ ಭಟ್‌, ʼʼನಾನು ಕನ್ಯಾದಾನ ಧಾರಾವಾಹಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿ ನಿಮ್ಮ ಮುಂದೆ ಬರ್ತಾ ಇದ್ದೀನಿ. ಪಾತ್ರದ ಬಗ್ಗೆ ಜಾಸ್ತಿ ಹೇಳಲ್ಲ. ಇನ್ನಷ್ಟು ತಿಳಿದುಕೊಳ್ಳಲು ನೀವು ಧಾರಾವಾಹಿ ನೋಡಬೇಕುʼʼ ಎಂದಿದ್ದಾರೆ.

ಗಂಡು-ಹೆಣ್ಣಿನ ಮಧ್ಯೆ ನಡೆಯುವ ತಾರತಮ್ಯದ ಬಗ್ಗೆ…

ʼʼನಾವು 21ನೇ ಶತಕದಲ್ಲಿ ಇದ್ದು, ಎಷ್ಟೇ ಆಧುನಿಕತೆಯ ಬಗ್ಗೆ ಮಾತನಾಡಿದ್ರು ಗಂಡು-ಹೆಣ್ಣಿನ ಮಧ್ಯೆ ತಾರತಮ್ಯ ಇದೆ ಮತ್ತು ಇದು ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಹಿಂದಿನ ಕಾಲಕ್ಕೆ ಹೋಲಿಸಿದರೆ ಹೆಣ್ಣು ಭ್ರೂಣ ಹತ್ಯೆ, ಹೆಣ್ಣನ್ನು ಕೀಳಾಗಿ ನೋಡುವುದು ಕಡಿಮೆ ಆಗಿದೆ. ಹಾಗಂತ ಸಂಪೂರ್ಣವಾಗಿ ಹೋಗಿಲ್ಲ. ಇದನ್ನು ಹೋಗಲಾಡಿಸಬೇಕು ಅಂದ್ರೆ ನಮ್ಮೆಲ್ಲರ ವಿಚಾರಧಾರೆಗಳು ಬದಲಾಗಬೇಕು. ಅದಕ್ಕೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಇದರಿಂದ ಈ ತಾರತಮ್ಯ ನಿಧಾನವಾಗಿ ಕಡಿಮೆ ಆಗಬಹುದುʼʼ ಎಂದು ಅನಿತಾ ಭಟ್‌ ಅಭಿಪ್ರಾಯ ಪಟ್ಟಿದ್ದಾರೆ.

ನಿಮ್ಮ ಜೀವನದಲ್ಲಿ ಅನುಭವಕ್ಕೆ ಬಂದಿದೆಯಾ?

ʼʼನಾನು ಮತ್ತು ನನ್ನ ಅಣ್ಣನ ನಡುವೆ ಆ ತರಹದ ತಾರತಮ್ಯ ಅಪ್ಪ-ಅಮ್ಮ ಮಾಡಿರದೇ ಇದ್ದರೂ ನಾನು ಮನೆಗೆ ಬೇಗ ಬರಬೇಕಿತ್ತು. ಅದೇ ಅಣ್ಣನಿಗೆ ಆ ತರಹದ ಯಾವುದೇ ಕಟ್ಟುಪಾಡುಗಳು ಇರ್ಲಿಲ್ಲ. ಅದು ಬಹುಷಃ ನನ್ನ ಮೇಲಿನ ಕಾಳಜಿಯಿಂದಲೂ ಇರಬಹುದು. ಅದು ಬಿಟ್ರೆ ಆ ತರಹದ ಕೆಟ್ಟ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

ʼಕನ್ಯಾದಾನʼ ಧಾರಾವಾಹಿಯನ್ನು ಯಾಕೆ ನೋಡಬೇಕು?

ʼʼಕನ್ಯಾದಾನʼ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು ನಮ್ಮ ಜೀವನಕ್ಕೆ ಬಹಳ ಹತ್ತಿರವಾಗುತ್ತದೆ. ನಿಮಗೆ ಯಾವುದೋ ಧಾರಾವಾಹಿ ನೋಡ್ತಾ ಇದ್ದೀರಾ ಅನ್ನುವ ಫೀಲ್ ಕೊಡಲ್ಲ ಇದು. ಎಲ್ಲೋ ನಮ್ಮ ಅಕ್ಕ-ಪಕ್ಕದಲ್ಲಿ ನಡೆಯುವ ಕಥೆಯೇನೋ ಅಂತ ಎನಿಸುತ್ತದೆ. ಭಾವನೆಗಳನ್ನು ಮತ್ತು ಸಂಬಂಧಗಳನ್ನು ತುಂಬ ಸೂಕ್ಷ್ಮವಾಗಿ ಮತ್ತು ವಿಸ್ತಾರವಾಗಿ ತೋರಿಸಿದ್ದಾರೆ. ಹೀಗಾಗಿ ʼಕನ್ಯಾದಾನʼ ಧಾರಾವಾಹಿ ಪ್ರತಿಯೊಬ್ಬ ಪ್ರೇಕ್ಷಕನಿಗೂ ಹತ್ತಿರವಾಗುತ್ತದೆʼʼ ಎಂದು ಅನಿತಾ ಭಠ್‌ ವಿವರಿಸಿದ್ದಾರೆ. ʼಕನ್ಯಾದಾನʼ ಸೋಮವಾರದಿಂದ ಶನಿವಾರದವರೆಗೆ ಸಂಜೆ 6ಕ್ಕೆ ’ಉದಯʼ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version