Site icon Vistara News

Karan Sharma: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ಜೋಡಿ

karan sharma

karan sharma

ಮುಂಬೈ: ಹಿಂದಿಯ ಜನಪ್ರಿಯ ʼಸಸುರಾಲ್ ಸಿಮಾರ್ ಕಾ 2ʼ (Sasural Simar Ka 2) ಧಾರಾವಾಹಿ ಖ್ಯಾತಿಯ ನಟ ಕರಣ್ ಶರ್ಮಾ (Karan Sharma) ಮತ್ತು ʼದಿಯಾ ಔರ್ ಬಾತಿ ಹಮ್ʼ (Diya Aur Baati Hum) ಟಿವಿ ಶೋ ಮೂಲಕ ಗಮನ ಸೆಳೆದ ನಟಿ ಪೂಜಾ ಸಿಂಗ್ (Pooja Singh) ಅವರು ಮಾರ್ಚ್ 30ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಹಾಜರಿದ್ದರು.

ಸದ್ಯ ಕರಣ್ ಶರ್ಮಾ-ಪೂಜಾ ಸಿಂಗ್‌ ಅವರ ವಿವಾಹದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ಅಭಿಮಾನಿಗಳು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ಕೆಂಪು ಮತ್ತು ಮರೂನ್ ಬಣ್ಣದ ಉಡುಗೆಗಳಲ್ಲಿ ಗಮನ ಸೆಳೆದಿದ್ದಾರೆ. ಜೈಮಾಲಾ ಸಮಾರಂಭಕ್ಕೆ ಮೊದಲು ಅವರು ಪರಸ್ಪರ ಉಂಗುರ ವಿನಿಮಯ ಮಾಡಿಕೊಂಡರು. ಕರಣ್ ಶರ್ಮಾ ಅಭಿನಯದ ‘ಸಸುರಾಲ್ ಸಿಮರ್ ಕಾ 2’ ಮತ್ತು ಪೂಜಾ ಸಿಂಗ್ ಅವರ ‘ತೇರೆ ಇಷ್ಕ್ ಮೇ ಘಯಾಲ್’ ಮತ್ತು ‘ದಿಯಾ ಔರ್ ಬಾತಿ ಹಮ್’ ಶೋದ ಸಹ ಕಲಾವಿದರು ಹಾಜರಿದ್ದು, ನವ ದಂಪತಿಯನ್ನು ಆಶೀರ್ವದಿಸಿದರು.

ಕರಣ್ ಮತ್ತು ಪೂಜಾ ಅವರ ವಿವಾಹ ಮಹೋತ್ಸವವು ಮಾರ್ಚ್ 29ರಂದು ಪ್ರಾರಂಭವಾಯಿತು. ಅಂದು ಮೆಹೆಂದಿ ಸಮಾರಂಭ ನಡೆಸುವ ಮೂಲಕ ಆಚರಣೆಗಳಿಗೆ ಚಾಲನೆ ನೀಡಲಾಯಿತು. ವಿಶೇಷ ಎಂದರೆ ಪೂಜಾ ಅವರಿಗೆ ಹಚ್ಚಿದ ಮೆಹೆಂದಿಯಲ್ಲಿ ಕರಣ್ ಅವರ ಮುಖದ ವಿನ್ಯಾಸ ಬಿಡಿಸಲಾಗಿತ್ತು. ಇನ್ನು ಸಂಗೀತ ಸಮಾರಂಭ (Sangeet ceremony)ದಲ್ಲಿ ವಿವಿಧ ಜನಪ್ರಿಯ ಕಲಾವಿದರು, ತಾರೆಯರು ಕಾರ್ಯಕ್ರಮ ನೀಡಿದರು. ‘ದಿಯಾ ಔರ್ ಬಾತಿ ಹಮ್’ನಲ್ಲಿ ಭಾಬೊ ಪಾತ್ರಧಾರಿ ನೀಲು ವಘೇಲಾ, ‘ಸಸುರಾಲ್ ಸಿಮರ್ ಕಾ’ದ ನಟರು, ಆಶಿ ಸಿಂಗ್ ಮತ್ತು ಹೆಲ್ಲಿ ಶಾ ಸಮಾರಂಭಕ್ಕೆ ಇನ್ನಷ್ಟು ಕಳೆ ತುಂಬಿದರು.

ಮದುವೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪೂಜಾ, ʼʼಹಲವು ವರ್ಷಗಳಿಂದ ಒಂದೇ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರೂ, ಇಬ್ಬರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ನಮ್ಮ ತಂಡ ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಆಗಲೂ ನಾವು ಸ್ನೇಹಿತರಂತೆಯೆ ಇದ್ದೆವು. ಬಳಿಕ ಪರಸ್ಪರ ಸಮಾಲೋಚನೆ ನಡೆಸಿ ವಿವಾಹವಾಗಲು ತೀರ್ಮಾನಿಸಿದೆವು. ಈ ಬಗ್ಗೆ ಮನೆಯವರೊಂದಿಗೆ ಚರ್ಚೆ ನಡೆಸಿ ಒಪ್ಪಿಗೆ ಪಡೆದುಕೊಂಡಿದ್ದೇವೆʼʼ ಎಂದು ತಿಳಿಸಿದರು.

ಇದನ್ನೂ ಓದಿ: Sridevi: ’ಇಂಗ್ಲಿಷ್ ವಿಂಗ್ಲಿಷ್’ಗೆ ಮೊದಲು ಆಯ್ಕೆಯಾದ ನಟಿ ಶ್ರೀದೇವಿ ಅಲ್ಲ! ಸಿಕ್ರೆಟ್ ಬಿಚ್ಚಿಟ್ಟ ಬೋನಿ ಕಪೂರ್

ಕರಣ್ ಶರ್ಮಾ ʼಸಸುರಾಲ್ ಸಿಮರ್ ಕಾ 2ʼ, ʼಉದಯರಿಯಾನ್ʼ, ʼಮೊಹಿʼ ಮತ್ತು ʼಏಕ್ ನಯೀ ಪೆಹ್ಚಾನ್ʼನಂತಹ ಧಾರಾವಾಹಿಗಳಲ್ಲಿ ಅಭಿನಯಿಸಿ ವೀಕ್ಷಕರ ಗಮನ ಸೆಳೆದಿದ್ದಾರೆ. ಇತ್ತ ಪೂಜಾ ಸಿಂಗ್ ʼದಿಯಾ ಔರ್ ಬಾತಿ ಹಮ್ʼ, ʼತೇರೆ ಇಷ್ಕ್ ಮೇ ಘಯಾಲ್ʼ ಮತ್ತು ʼಶಕ್ತಿ: ಅಸ್ತಿತ್ವಾ ಕೆ ಎಹ್ಸಾಸ್ʼನಂತಹ ಶೋ, ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದಾರೆ.

Exit mobile version