ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ʻಕಾವೇರಿ ಕನ್ನಡ ಮೀಡಿಯಂʼ (Kaveri Kannada Medium) ಧಾರಾವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆಯನ್ನು ಬಳಸಿಕೊಂಡಿದ್ದರು. ಈ ಬಗ್ಗೆ ಕರಾವಳಿಯಲ್ಲಿ ದೈವಾರಾಧಕರು ಹಾಗೂ ತುಳುನಾಡ ಮಂದಿ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಇದೀಗ ದೂರು ದಾಖಲಾದ ಬೆನ್ನಲ್ಲೆ ಧಾರಾವಾಹಿ ನಿರ್ದೇಶಕ ಆರ್ ಪ್ರೀತಮ್ ಶೆಟ್ಟಿ ಮಾತನಾಡಿದ್ದಾರೆ. ʻʻನಾವೆಲ್ಲೂ ದೈವದ ಅಪಹಾಸ್ಯ ಮಾಡಿಲ್ಲ. ಧಾರವಾಹಿಯಲ್ಲಿ ನಾಯಕಿ ಕೊರಗಜ್ಜನ ಭಕ್ತೆ. ಮೊದಲಿನಿಂದಲೂ ಹೀಗಾಗಿ ಕಷ್ಟ ಬಂದಾಗ ದೈವ ಯಾವ ರೀತಿ ಪರಿಹಾರ ನೀಡುತ್ತೆ ಎಂಬ ಒಳ್ಳೆ ರೀತಿಯಲ್ಲಿ ನಾವು ತೋರಿಸಿದ್ದೇವೆʼʼಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಧಾರಾವಾಹಿಯಲ್ಲಿ ಭೂತಾರಾಧನೆ ಬಳಸಿಕೊಂಡಿದ್ದಕ್ಕೆ ಆಕ್ಷೇಪಗಳು ವ್ಯಕ್ತವಾದವು. ಇದೀಗ ಈ ಬಗ್ಗೆ ನಿರ್ದೇಶಕ ಮಾತನಾಡಿ ʻʻನಾನು 2019ರಲ್ಲಿ ಪಿಂಗಾರ ಸಿನಿಮಾ ನಿರ್ದೇಶನ ಮಾಡಿದ್ದೆ. ಅದು ಸಂಪೂರ್ಣವಾಗಿ ಆಗಿ ದೈವಾರಾಧನೆ ಬಗ್ಗೆನೇ ಇತ್ತು. ಈ ಸಿನಿಮಾಗೆ ನಾನು ನ್ಯಾಷನಲ್ ಅವಾರ್ಡ್ ಜತೆ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದೇನೆ. 2016 ರಲ್ಲಿ ಮೀನಾಕ್ಷಿ ಮದುವೆ ಎಂಬ ಧಾರಾವಾಹಿಯಲ್ಲೂ ದೈವಾರಾಧನೆ ತೋರಿಸಿದ್ದೆ. ನಾನು ಮಂಗಳೂರಿನವನೇ ನಮ್ಮ ಮನೆಯಲ್ಲೂ ದೇವರಾಧನೆ ನಡೆಯುತ್ತದೆ. ಈಗ ನಾವು ಆಚಾರ ವಿಚಾರ ಗಮನದಲ್ಲಿ ಇಟ್ಟುಕೊಂಡೇ ಮಾಡಿರುವುದು. ಒಂದು ವಾರ ಮಾಂಸಾಹಾರ ಸೇವಿಸಬಾರದು, ಶೂಟಿಂಗ್‌ನಲ್ಲಿ ಯಾರು ಚಪ್ಪಲಿ ಹಾಕಬಾರದು ಅದನ್ನೆಲ್ಲ ಪಾಲಿಸಿದ್ದೇವೆ. ಧಾರವಾಹಿಯ ಎಪಿಸೋಡ್ ಪ್ರಸಾರ ಮಾಡಬೇಕೋ ಅಥವಾ ಬೇಡವೋ ಎಂಬ ವಿಚಾರ ಚಾನೆಲ್ ಮುಖ್ಯಸ್ಥರದ್ದುʼʼ ಎಂದಿದ್ದಾರೆ.
ಇದನ್ನೂ ಓದಿ: Kaveri Kannada Medium: ದೈವಾರಾಧನೆ ಬಗ್ಗೆ ಅವಹೇಳನ; ಧಾರಾವಾಹಿ ವಿರುದ್ಧ ಜಾತಿ ನಿಂದನೆ ಕೇಸ್
ದೂರಿನಲ್ಲಿ ಏನಿದೆ?
ಧಾರಾವಾಹಿಯಲ್ಲಿ ದೈವಕೋಲ ಮಾಡಿರುವುದಕ್ಕೆ ತುಳುನಾಡ ದೈವಾರಾಧಕರು ಗರಂ ಆಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹಾಸ್ಯ ಕಲಾವಿದ, ನಿರೂಪಕ ಪ್ರಶಾಂತ್ ಸಿಕೆ ಎನ್ನುವವರು ಕನ್ನಡ ಧಾರಾವಾಹಿ ಒಂದಕ್ಕೆ ದೈವದ ವೇಷಭೂಷಣ ತೊಟ್ಟು, ದೈವ ಕೋಲದ ಅನುಕರಣೆ ಮಾಡುವ ಮೂಲಕ ನಮ್ಮ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ವಾದ್ಯಕೋಶಗಳ ನುಡಿಸುವವರಿಗೆ ದೈವಸ್ಥಾನದಲ್ಲಿ ಕೋಲ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿರುತ್ತಾರೆ. ಇದೊಂದು ವರ್ಗವನ್ನು ಮೂಲೆ ಗುಂಪಾಗಿಸುವ ಪ್ರಯತ್ನವಾಗಿದೆ. ಜಾತಿನಿಂದನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಸಾಂಪ್ರದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನೆಮಾ, ಧಾರಾವಾಹಿ, ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸರಿಯಲ್ಲ ಎಂದಿದ್ದಾರೆ. ಸಿನೆಮಾ ಧಾರಾವಾಹಿ ಯಾವುದರಲ್ಲೂ ದೈವಾರಾಧನೆಯನ್ನ ಬಳಸಿಕೊಳ್ಳಬಾರದು. ಇದು ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನ ನಡೆಸುತ್ತೇವೆ ಎಂದು ದೂರಿನಲ್ಲಿ ತಿಳಿಸಿದ್ದರು.
ಕನ್ನಡ ಬರೀ ಭಾಷೆ ಅಲ್ಲ ಬದುಕು ಎಂದು ನಂಬಿಕೊಂಡ ಊರಿನಲ್ಲಿ ಹುಟ್ಟಿರುವ ಕಾವೇರಿ ಹೆಣ್ಣು ಮಗಳ ಕಥೆಯಿದು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕಾವೇರಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ, ಅದರ ಅಭಿವೃದ್ದಿಗೆ ಹೊರಡುವ ಕಾವೇರಿ ಕಥೆಯಿದು. ಕಾವೇರಿ ಪಾತ್ರದಲ್ಲಿ ಪ್ರಿಯ ಜೆ ಆಚಾರ್ ನಟಿಸಿದ್ದಾರೆ. ನಾಯಕನಾಗಿ ರಕ್ಷಿತ್ ಕಾಣಿಸಿಕೊಂಡಿದ್ದಾರೆ.